ರಸಗೊಬ್ಬರ ಕೊರತೆ ಇಲ್ಲ, ಕೃತಕ ಅಭಾವ ಸೃಷ್ಟಿಸಿದರೆ ಸೂಕ್ತ ಕ್ರಮ

KannadaprabhaNewsNetwork |  
Published : May 22, 2024, 12:52 AM IST
ಪೋಟೋ ಇದೆ. | Kannada Prabha

ಸಾರಾಂಶ

ಜಿಲ್ಲೆಗೆ ಅವಶ್ಯವಿರುವ ರಸಗೊಬ್ಬರ ವಿವಿಧ ಸಂಸ್ಥೆಗಳಿಂದ ಅವಶ್ಯಕತೆಗೆ ಅನುಗುಣವಾಗಿ ಹಂತ ಹಂತವಾಗಿ ಸರಬರಾಜಾಗುತ್ತಿದ್ದು, ರಸಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ. ಆದರೆ ಕೃತಕ ಅಭಾವ ಸೃಷ್ಟಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಎಚ್ಚರಿಕೆ ನೀಡಿದರು.

ಹಾವೇರಿ: ಜಿಲ್ಲೆಗೆ ಅವಶ್ಯವಿರುವ ರಸಗೊಬ್ಬರ ವಿವಿಧ ಸಂಸ್ಥೆಗಳಿಂದ ಅವಶ್ಯಕತೆಗೆ ಅನುಗುಣವಾಗಿ ಹಂತ ಹಂತವಾಗಿ ಸರಬರಾಜಾಗುತ್ತಿದ್ದು, ರಸಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ. ಆದರೆ ಕೃತಕ ಅಭಾವ ಸೃಷ್ಟಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಎಚ್ಚರಿಕೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು, ದಾಸ್ತಾನು ಮತ್ತು ವಿತರಣೆ ಕುರಿತು ಕೃಷಿ ಇಲಾಖೆ ಅಧಿಕಾರಿಗಳು, ಬಿತ್ತನೆ ಬೀಜ ಮತ್ತು ರಸಗೊಬ್ಬರ ಸರಬರಾಜು ಸಂಸ್ಥೆಯ ಪ್ರತಿನಿಧಿಗಳು ಹಾಗೂ ಜಿಲ್ಲೆಯ ಪರಿಕರ ಮಾರಾಟಗಾರರ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟಗಾರರು ಮಾರಾಟ ಮಳಿಗೆಯಲ್ಲಿ ದರಪಟ್ಟಿಯನ್ನು ರೈತರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ನಿರ್ದೇಶನ ನೀಡಿದರು.ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಬಿಲ್ ನೀಡದೇ ಇರುವುದು, ಅವಧಿ ಮೀರಿದ ಕೃಷಿ ಪರಿಕರಗಳನ್ನು ವಿತರಣೆ ಮಾಡುವುದು ಅಥವಾ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿ ಮಾಡುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಮತ್ತು ಮಾರಾಟಗಾರರ ಪರವಾನಿಗೆಯನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು.ಮಾರಾಟಗಾರರು ರಸಗೊಬ್ಬರ ವಿತರಣೆ ಮಾಡುವಾಗ ಕಡ್ಡಾಯವಾಗಿ ಪಾಯಿಂಟ್ ಆಫ್ ಸೇಲ್ ಯಂತ್ರದ ಮೂಲಕ ಮಾರಾಟಮಾಡಬೇಕು. ಈ ಕುರಿತು ರೈತರಿಗೆ ಸೂಕ್ತ ತಿಳುವಳಿಕೆ ನೀಡಿ ಕಡ್ಡಾಯವಾಗಿ ಆಧಾರ ಸಂಖ್ಯೆಯನ್ನು ಪಡೆದು ರಸಗೊಬ್ಬರ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದರು.ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ೩.೨೭ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಪ್ರಮುಖವಾಗಿ ಗೋವಿನಜೋಳ, ಸೋಯಾ ಅವರೆ, ಶೇಂಗಾ ಮತ್ತು ಇತರೆ ಬೆಳೆಗಳ ಬೀಜ ವಿತರಣೆಗಾಗಿ ೧೯ ರೈತ ಸಂಪರ್ಕ ಕೇಂದ್ರಗಳ ಜೊತೆಗೆ ೨೩ ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳ ಮೂಲಕ ಬೀಜ ವಿತರಣೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.ರೈತರು ಡಿಎಪಿ ಮತ್ತು ಯೂರಿಯಾ ರಸಗೊಬ್ಬರಗಳಿಗೆ ಪರ್ಯಾಯವಾಗಿ ಮಾರುಕಟ್ಟೆಯಲ್ಲಿ ದೊರೆಯುವ ೫೦೦ ಮಿಲಿ ಬಾಟಲ್ ನ್ಯಾನೋ ಡಿಎಪಿ ಮತ್ತು ನ್ಯಾನೋ ಯೂರಿಯಾಗಳನ್ನು ಪ್ರತಿ ಎಕರೆಗೆ ಬಳಸಬಹುದಾಗಿದೆ. ಬಿತ್ತನೆ ವೇಳೆ ಪ್ರತಿ ಕೆಜಿಗೆ ೪ ಎಂ.ಎಲ್ ನ್ಯಾನೊ ಡಿಎಪಿಯಿಂದ ಉಪಚರಿಸಬೇಕು. ೧೫ ರಿಂದ ೨೦ ದಿನ ಇರುವಾಗ ಪ್ರತಿ ಎಕರೆಗೆ ೫೦೦ ಎಂ.ಎಲ್ ನ್ಯಾನೊ ಡಿಎಪಿ ಸಿಂಪರಣೆ ಮಾಡಬೇಕು ಎಂದರು.ರೈತರು ರಸಗೊಬ್ಬರವನ್ನು ಬಳಸುವಾಗ ಕೇವಲ ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೇ ಡಿಎಪಿ ಜೊತೆಗೆ ಗಂಧಕ ಒದಗಿಸುವ ೨೦:೨೦:೧೩ ಹಾಗೂ ಇತರೆ ಕಾಂಪ್ಲೆಕ್ಸ್ ಗೊಬ್ಬರಗಳಾದ ೧೫:೧೫:೧೫, ೧೦:೨೬:೨೬ಗಳನ್ನು ಬಳಸಬೇಕು. ಇವುಗಳ ಬಳಕೆಯಿಂದ ಮಣ್ಣಿಗೆ ಪೋಟ್ಯಾಷ ಗೊಬ್ಬರ ಒದಗಿಸಿದಂತಾಗುತ್ತದೆ. ರೈತರು ಬಿತ್ತನೆ ಕೈಗೊಳ್ಳುವಾಗ ಭೂಮಿಯಲ್ಲಿ ಅವಶ್ಯಕ ತೇವಾಂಶ ಇರುವುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಂಡು ಬಿತ್ತನೆ ಮಾಡಬೇಕು. ಇಲ್ಲವಾದಲ್ಲಿ ಬೀಜಗಳು ಸರಿಯಾಗಿ ಮೊಳಕೆಯೊಡೆಯದೇ ಉತ್ತಮ ಬೆಳೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಕೃಷಿ ಇಲಾಖೆ ಅಧಿಕಾರಿಗಳು, ರಸಗೊಬ್ಬರ ಹಾಗೂ ಬೀಜ ಮಾರಾಟಗಾರರು ಉಪಸ್ಥಿತರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ