ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪಲ್ಲವಿ ಅವರು ಆಗಮಿಸಿ ಅಲ್ಲಿನ ಅಲೆಮಾರಿ ಸಮುದಾಯದ ಬಡವರಿಂದ 50ಕ್ಕಿಂತ ಹೆಚ್ಚು ಅಹವಾಲುಗಳನ್ನು ಸ್ವೀಕರಿಸಿದರು.
ಕನ್ನಡಪ್ರಭ ವಾರ್ತೆ ಪಾವಗಡ
ಪಟ್ಟಣದ ಆಪ್ ಬಂಡೆಯ ಕೆಳಗಿನ ಭಾಗದಲ್ಲಿ ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವ ಎಸ್‌ಸಿ ವರ್ಗದ ಅಲೆಮಾರಿ ವಾಸ ಸ್ಥಳಕ್ಕೆ ಶನಿವಾರ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪಲ್ಲವಿ ಅವರು ಆಗಮಿಸಿ ಅಲ್ಲಿನ ಅಲೆಮಾರಿ ಸಮುದಾಯದ ಬಡವರಿಂದ ಸಮಸ್ಯೆಗಳ 50ಕ್ಕಿಂತ ಹೆಚ್ಚು ಅಹವಾಲುಗಳನ್ನು ಸ್ವೀಕರಿಸಿದರು. ಈ ವೇಳೆ ಪಟ್ಟಣದ ವೆಂಕಟೇಶ್ವರ ಬಡಾವಣೆ, ಪುರಸಭೆ ವ್ಯಾಪ್ತಿಗೆ ಒಳಪಟ್ಟಿದ್ದು ಇದೇ ವ್ಯಾಪ್ತಿಯ ಅಪ್‌ಬಂಡೆ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಸುಮಾರು 50ಕ್ಕಿಂತ ಹೆಚ್ಚು ಮಂದಿ ಅಲೆಮಾರಿ ಸುಮುದಾಯದ ಬಡವರು ತಡಿಕೆ ಹಾಗೂ ಗರಿ ಹಾಗೂ ಶೀಟುಗಳ ಮೇಲ್ಚಾವಣೆಯ ಗುಡಿಸಲು ಮನೆಗಳಲ್ಲಿ ವಾಸವಿದ್ದೇವೆ. ಮಳೆಗಾಳಿ ಬಂದರೆ ಮನೆಗಳು ಬಿದ್ದುಹೋಗುವ ಆತಂಕ ಎದುರಿಸುತ್ತಿದ್ದೇವೆ. ಅನೇಕ ಭಾರಿ ಅರ್ಜಿ ಸಲ್ಲಿಸಿದ್ದರೂ ಪುರಸಭೆಯಿಂದ ಮನೆಗಳ ಸೌಲಭ್ಯ ಕಲ್ಪಿಸಿಲ್ಲ. ಜೊತೆಗೆ ಇಲ್ಲಿನ ನೈರ್ಮಲ್ಯ ಶುಚಿತ್ವವಿಲ್ಲದೇ ಸೊಳ್ಳೆ ಹಾಗೂ ಇತರೆ ಕ್ರಿಮಿ ಕೀಟಗಳ ಹಾವಳಿಯಿಂದ ತತ್ತರಿಸುತ್ತಿದ್ದೇವೆ. ಚರಂಡಿ, ಸಿಸಿರಸ್ತೆಗಳಿಲ್ಲ, ಆಟೋ ಹಾಗೂ ಇತರೆ ವಾಹನಗಳು ಮನೆಗಳ ಬಳಿ ಬರಲು ಸಾಧ್ಯವಾಗುತ್ತಿಲ್ಲ. ಪುರಸಭೆ ಹಾಗೂ ತಾಲೂಕು ಆಡಳಿತದಿಂದ ಯಾವುದೇ ಸೌಲಭ್ಯ ಸಿಗದೇ ಮೂಲಭೂತ ಸಮಸ್ಯೆಗಳಿಂದ ನರಳುತ್ತಿದ್ದೇವೆ. ಇಲ್ಲಿನ ಅನೇಕ ಮನೆಗಳಿಗೆ ಇದುವರೆವಿಗೂ ಹಕ್ಕುಪತ್ರಗಳಿಲ್ಲ .ಕೆಲ ಮನೆಗಳಿಗೆ ಹಕ್ಕುಪತ್ರ ಇದ್ದರೂ ಬ್ಯಾಂಕಿನ ಸಾಲ ಹಾಗೂ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ವಸತಿ ಸೌಲಭ್ಯ ಸೇರಿದಂತೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಮನೆಗಳ ನೀರು ದೊಡ್ಡ ಚರಂಡಿಗಳಿಗೆ ಬಿಡಲು ಸಾದ್ಯವಾಗುತ್ತಿಲ್ಲ. ಸರ್ಕಾರದ ಸೌಲಭ್ಯವಿಲ್ಲದೆ ನರಳುತ್ತಿದ್ದೇವೆ. ಜೀವನೋಪಾಯಕ್ಕಾಗಿ ತುಂಬಾ ಕಷ್ಟ ಅನುಭವಿಸುತ್ತಿದ್ದೇವೆ. ಜೀವನೋಪಾಯದ ಕೆಲಸಗಳಿಲ್ಲದೇ ಒಂದು ಎರಡು ಕುರಿ ಮೇಕೆ ಸಾಕಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದು ಅನೇಕ ಮಂದಿ ಅರ್ಜಿಗಳಲ್ಲಿ ಸಲ್ಲಿಸಿ ತಮ್ಮ ಅಳಲನ್ನು ಅಧ್ಯಕ್ಷರ ಬಳಿ ತೋಡಿಕೊಂಡರು.ಇಲ್ಲಿನ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ನಿವೇಶನದ ಹಕ್ಕು ಪತ್ರ ಹಾಗೂ ಗುಡಿಸಲು ಮನೆಗಳ ಈ-ಖಾತೆ ನೋಂದಣಿ ಮಾಡಿಸಿಕೊಡುವ ಮೂಲಕ ಸರ್ಕಾರದಿಂದ ವಸತಿ ಸೌಲಭ್ಯ ಕಲ್ಪಿಸಬೇಕು. ಚರಂಡಿ, ಸಿಸಿರಸ್ತೆ ಸೇರಿದಂತೆ ಅಂಗನವಾಡಿ ಕೇಂದ್ರ, ಜೀವನೋಪಾಯಕ್ಕಾಗಿ ಸರ್ಕಾರದಿಂದ ಸಾಲಸೌಲಭ್ಯ, ಇಲ್ಲಿನ ಇತರೆ ಅನೇಕ ರೀತಿಯ ಮೂಲಭೂತ ಸಮಸ್ಯೆ ನಿವಾರಿಸಿ ಅನುಕೂಲ ಮಾಡಿಕೊಡುವಂತೆ ಅಪ್‌ಬಂಡೆಯ ಅಲೆಮಾರಿ ಸಮುದಾಯದ ಅನೇಕ ಮಂದಿ ಬಡವರು ಮನವಿ ಮಾಡಿದರು. ಸಮಸ್ಯೆ ಅಲಿಸಿದ ಜಿ.ಪಲ್ಲವಿ ಅವರು ತಹಸೀಲ್ದಾರ್ ಹಾಗೂ ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಕೊಡಲೇ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.
ಈ ವೇಳೆ ತಹಸೀಲ್ದಾರ್ ವೈ.ರವಿ,ತಾಪಂ ಇಒ ಮಧುಸೂದನ್, ಪುರಸಭೆ ಮುಖ್ಯಾಧಿಕಾರಿ ಜಾಫರ್ ಷರೀಫ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಸಿಪಿಐ ಕೆ.ಸುರೇಶ್, ಸಿಪಿಡಿಒ ಮಮತ, ಪುರಸಭೆ ಆರೋಗ್ಯಾಧಿಕಾರಿ ಶಂಷುದ್ದೀನ್ , ಕಂದಾಯ ಇಲಾಖೆಯ ಆರ್‌ಐಗಳಾದ ರಾಜ್‌ಗೋಪಾಲ್ ಕಿರಣ್ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.