)
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಬುಧವಾರ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನಲ್ಲಿ ಗಡಿ ವಿವಾದ ಬಾಕಿಯಿದೆಂಬ ಕಾರಣಕ್ಕೆ ಸಬ್ ಜುಡಿಸ್ ನೆಪ ಮುಂದಿಟ್ಟು ನಿರ್ಣಯವನ್ನು ತಡೆಯುವುದು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ. ಬೆಳಗಾವಿ ಕರ್ನಾಟಕದ ಭಾಗ ಎಂಬುವುದು ಕೇವಲ ಭಾವನಾತ್ಮಕ ಹೇಳಿಕೆ ಅಲ್ಲ, 1956ರ ರಾಜ್ಯಗಳ ಮರುರಚನಾ ಕಾಯ್ದೆಯಡಿ ಸಂಸತ್ತು ಕೈಗೊಂಡ ಸಂವಿಧಾನಾತ್ಮಕ ನಿರ್ಧಾರವಾಗಿದೆ ಎಂದು ತಿಳಿಸಿದರು.ಮಹಾರಾಷ್ಟ್ರ ಸರ್ಕಾರ ಹೂಡಿರುವ ದಾವೆಯ ಮೆರಿಟ್ ಕುರಿತು ನ್ಯಾಯಾಲಯದ ಹೊರಗೆ ಚರ್ಚಿಸುವುದು ಸೂಕ್ತವಲ್ಲ. ಆದರೆ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಕಾನೂನು ಸ್ಥಿತಿಯನ್ನು ಪಾಲಿಕೆ ಮತ್ತೊಮ್ಮೆ ಸಾಂಕೇತಿಕವಾಗಿ ಪುನರುಚ್ಚರಿಸುವುದು ನ್ಯಾಯಾಲಯದ ವಿಚಾರದಲ್ಲಿ ಹಸ್ತಕ್ಷೇಪವಾಗುವುದಿಲ್ಲ. ಆದ್ದರಿಂದ ಸಬ್ ಜುಡಿಸ್ ಎಂಬ ನೆಪ ಇಲ್ಲಿ ಅನ್ವಯಿಸುವುದಿಲ್ಲ ಎಂದರು.ಬೆಳಗಾವಿ ಮಹಾನಗರ ಪಾಲಿಕೆ ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ-1976ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಆಡಳಿತಾತ್ಮಕ ವ್ಯವಸ್ಥೆಯ ಭಾಗವಾಗಿ ತನ್ನ ನಿಲುವನ್ನು ನಿರ್ಣಯದ ಮೂಲಕ ವ್ಯಕ್ತಪಡಿಸುವುದು ಕಾನೂನಿನ ಚೌಕಟ್ಟಿನೊಳಗೆಯೇ ಬರುತ್ತದೆ. ಪಾಲಿಕೆ ನಿರ್ಣಯ ಕೈಗೊಳ್ಳಬೇಕೋ, ಬೇಡವೋ ಎಂಬುವುದು ರಾಜಕೀಯ ಮತ್ತು ಆಡಳಿತಾತ್ಮಕ ವಿವೇಚನೆಯ ವಿಷಯವಾಗಬಹುದು. ಆದರೆ, ಕಾನೂನು ತಡೆ ಇದೆ ಎಂದು ಹೇಳುವುದು ಸರಿಯಲ್ಲ. ಅಗತ್ಯವಿದ್ದರೇ ರಾಜ್ಯ ಸರ್ಕಾರದಿಂದ ಮಾರ್ಗದರ್ಶನ ಪಡೆಯಬಹುದು. ಅಂತಿಮ ನಿರ್ಧಾರ ಸರ್ಕಾರ ಮತ್ತು ಪಾಲಿಕೆಗೆ ಸೇರಿದ್ದು ಎಂದರು.ರಾಜ್ಯ ಪುನರ್‌ರಚನೆಯ ವೇಳೆ ಬೆಳಗಾವಿ, ವಿಜಯಪುರ, ಕಾರವಾರ ಹಾಗೂ ಧಾರವಾಡ ಜಿಲ್ಲೆಗಳ ಕುರಿತು ಲೋಕಸಭೆಯಲ್ಲಿ ಸಮಗ್ರ ಚರ್ಚೆ ನಡೆದ ಬಳಿಕವೇ ಅವು ಹೊಸ ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟಿವೆ. ಹೀಗಾಗಿ ಬೆಳಗಾವಿಯ ಕರ್ನಾಟಕದೊಂದಿಗಿನ ಸಂಬಂಧ ಐತಿಹಾಸಿಕವಾಗಿಯೂ, ಕಾನೂನುಬದ್ಧವಾಗಿಯೂ ದೃಢವಾಗಿದೆ. ಗಡಿ ವಿಚಾರದಲ್ಲಿ ಕನ್ನಡ ಸಂಘಟನೆಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಮೌನವಾಗಬಾರದು. ಕಾನೂನುಬದ್ಧ, ಅಹಿಂಸಾತ್ಮಕ ಹಾಗೂ ಶಾಂತಿಯುತ ರೀತಿಯಲ್ಲಿ ಜನಾಭಿಪ್ರಾಯ ರೂಪಿಸಿ, ಜನಪ್ರತಿನಿಧಿಗಳ ಮೇಲೆ ನಿರಂತರ ಒತ್ತಡ ಹೇರಬೇಕು ಎಂದು ತಿಳಿಸಿದರು.ಮಹಾದಾಯಿ ಯೋಜನೆಗೆ ಕರ್ನಾಟಕಕ್ಕೆ ನೀರು ಬಳಕೆಯ ಅನುಮತಿ ದೊರೆತಿದ್ದರೂ ಪರಿಸರ ಮತ್ತು ಅರಣ್ಯ ಸಂಬಂಧಿತ ಆಕ್ಷೇಪಣೆಗಳಿಂದ ಯೋಜನೆ ವಿಳಂಬವಾಗುತ್ತಿದೆ. ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಪ್ರಕರಣವನ್ನು ನೆಪವನ್ನಾಗಿ ಮಾಡಿಕೊಂಡು ಯೋಜನೆಯನ್ನು ತಡೆಹಿಡಿಯಬಾರದು. ರಾಜ್ಯ ಸರ್ಕಾರ ಕೇಂದ್ರವನ್ನು ಮನವರಿಕೆ ಮಾಡಿ ಯೋಜನೆಯನ್ನು ಶೀಘ್ರ ಜಾರಿಗೆ ತರಬೇಕು. ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸುವ ಯೋಜನೆಗೂ ಯಾವುದೇ ಕಾನೂನು ತೊಡಕು ಇಲ್ಲ. ಕೃಷ್ಣಾ ಮತ್ತು ಕಾವೇರಿ ನದಿಗಳ ನೀರನ್ನು ಸಮರ್ಪಕವಾಗಿ ಸಂಗ್ರಹಿಸಲು ದೊಡ್ಡ ಮಟ್ಟದ ಹೂಡಿಕೆ ಅಗತ್ಯವಿದೆ ಎಂದರು.ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಬಲರಾಮ ಮಾಸೇನಟ್ಟಿ, ಶ್ರೀನಿವಾಸ ತಾಳೂಕರ, ವಾಜಿದ್ ಹಿರೇಕೋಡಿ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.