ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಗರದ ಕ್ಷೇತ್ರದಲ್ಲಿ ಸುಮಾರು 5 ರಿಂದ 6 ಸಾವಿರ ಮತದಾರರನ್ನು ಬೇರೆಡಡೆಯಿಂದ ಕರೆತಂದು ಸ್ಥಳೀಯರು ಎಂದು ಮತದಾನದ ಚೀಟಿ ಮಾಡಿರುವ ಉದಾಹರಣೆಗಳಿವೆ. ಈ ಬಾರಿಯ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಧಿಕಾರಿಗಳು ಭಾಗಿಯಾಗಬಾರದು, ಅತ್ಯಂತ ಪಾದರ್ಶಕತೆವಾಗಿ ಎಸ್‌ಐಆರ್‌ ಕೆಲಸ ಆಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಒತ್ತಾಯಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್.ಐ.ಆರ್‌ ಕುರಿತು ಜೂನ್ 29ರಿಂದ ರಾಜ್ಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಎಲ್ಲ ರಾಜಕೀಯ ಪಕ್ಷಗಳ ಮುಖಂಡರನ್ನು ಕರೆದು ಸಭೆ ನಡೆಸಿ, ಮತದಾರ ಪಟ್ಟಿ ಪರಿಷ್ಕರಣೆಯ ಕುರಿತು ನಿಯಮಾವಳಿಗಳ ಬಗ್ಗೆ ತಿಳಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ವತಿಯಿಂದ ಮುದ್ದೇಬಿಹಾಳ ಕ್ಷೇತ್ರದಲ್ಲಿ 246, ದೇವರ ಹಿಪ್ಪರಗಿ ಕ್ಷೇತ್ರಕ್ಕೆ 246, ವಿಜಯಪುರಕ್ಕೆ 276, ಇಂಡಿ ಕ್ಷೇತ್ರದಲ್ಲಿ 268, ಸಿಂದಗಿಯಲ್ಲಿ 267 ಸೇರಿದಂತೆ ಒಟ್ಟು 2096 ಜನ ಬಿಎಲ್‌ಎ 2 ಗಳನ್ನು ನೇಮಿಸಲಾಗಿದೆ. ಯಾರೊಬ್ಬರು ಮತದಾರರು ಪರಿಷ್ಕರಣೆ ಪಟ್ಟಿಯಲ್ಲಿ ತಪ್ಪಬಾರದು ಎಂದು ಸ್ವತಹ ಕಾಂಗ್ರೆಸ್‌ ಪಕ್ಷದ ಬಿಎಲ್‌ಎಗಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತೇವೆ ಎಂದು ಹೇಳಿ ಚುನಾವಣೆ ಆಯೋಗದ ಮೂಲಕ ಬಡವರಿಗೆ, ಊರಲ್ಲಿ ಇಲ್ಲದವರನ್ನು ಮತದಾರರ ಪಟ್ಟಿಯಿಂದ ಕೈ ಬಿಡಬಾರದು ಎಂದರು.ಕೆಪಿಸಿಸಿ ಅಧ್ಯಕ್ಷರ ಪದಗ್ರಹಣಕ್ಕೆ ಸಿದ್ಧತೆ: ಜೂ.21ರಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು, ಯುವಕರು ಭಾಗವಹಿಸಲಿದ್ದಾರೆ. 17 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿದ್ದು, ಪ್ರತಿ ಬ್ಲಾಕ್‌ನಿಂದ ಕನಿಷ್ಠ 100 ಜನ ಭಾಗವಹಿಸಲಿದ್ದಾರೆ. ಅಂದು ನಾವೆಲ್ಲ ಸೇರಿ ಜಿಲ್ಲಾ ಕಾಂಗ್ರೆಸ್ ಘಟಕದ ಪರವಾಗಿ ಬಿ.ಕೆ.ಹರಿಪ್ರಸಾದರನ್ನು ಸನ್ಮಾನಿಸಲಿದ್ದೇವೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಶಕೀಲ ಅಹಮ್ಮದ ಬಾಗಮಾರೆ, ನಗರ ಬ್ಲಾಕ್‌ ಅಧ್ಯಕ್ಷ ಸೈಯ್ಯದ ಜಮೀರಅಹಮ್ಮದ ಬಕ್ಷಿ, ಮಹಾದೇವಿ ಗೋಕಾಕ, ಜಿಲ್ಲಾಧ್ಯಕ್ಷೆ ರಮೀಜಾ ನದಾಫ್, ಆರತಿ ಶಹಾಪುರ, ಮಹಮ್ಮದ ರಫೀಕ್ ಟಪಾಲ ಉಪಸ್ಥಿತರಿದ್ದರು.