ಕನ್ನಡಪ್ರಭ ವಾರ್ತೆ ಬೆಳಗಾವಿ
ಉತ್ತರ ಕರ್ನಾಟಕದ ದಶಕಗಳ ಕುಡಿಯುವ ನೀರಿನ ಕನಸಾಗಿರುವ ಮಹದಾಯಿ ಯೋಜನೆ ಜಾರಿಗೆ ಯಾವುದೇ ಕಾನೂನು ತಡೆಗೋಡೆ ಇಲ್ಲ. ಉಳಿದಿರುವುದು ಕೇಂದ್ರ ಸರ್ಕಾರದ ಅನುಮತಿ ಹಾಗೂ ಸರ್ಕಾರಗಳ ರಾಜಕೀಯ ಇಚ್ಛಾಶಕ್ತಿ ಮಾತ್ರ ಎಂದು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಹಾಗೂ ಜಲ ವಿವಾದಗಳ ತಜ್ಞ ಮೋಹನ ಕಾತರಕಿ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನ್ಯಾಯಮಂಡಳಿಯು ಕರ್ನಾಟಕಕ್ಕೆ 3.9 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದ್ದು, ಕೇಂದ್ರ ಸರ್ಕಾರ ಅದನ್ನು ಗೆಜೆಟ್‌ನಲ್ಲಿ ಪ್ರಕಟಿಸಿದೆ. ಹೀಗಾಗಿ ಇದು ಕರ್ನಾಟಕದ ಕಾನೂನುಬದ್ಧ ಹಕ್ಕಾಗಿದೆ. ಸುಪ್ರೀಂ ಕೋರ್ಟ್ ಕೂಡ ಮಹದಾಯಿ ಯೋಜನೆಗೆ ಯಾವುದೇ ಸ್ಪಷ್ಟ ತಡೆಯಾಜ್ಞೆ ನೀಡಿಲ್ಲ. ಆದ್ದರಿಂದ ಯೋಜನೆ ವಿಳಂಬವಾಗುವುದಕ್ಕೆ ಕಾನೂನು ಕಾರಣವಲ್ಲ. ಆಡಳಿತಾತ್ಮಕ ನಿರ್ಧಾರದ ಕೊರತೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಅಭಾವವೇ ಪ್ರಮುಖ ಕಾರಣ. ಕೇಂದ್ರ ಸರ್ಕಾರ ಅಗತ್ಯ ಅನುಮತಿಗಳನ್ನು ನೀಡಿದರೆ ತಕ್ಷಣವೇ ಸುಮಾರು 2 ಟಿಎಂಸಿ ಅಡಿ ನೀರನ್ನು ವರ್ಗಾವಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು. ಗೋವಾ ಸರ್ಕಾರದ ಆಕ್ಷೇಪಣೆ ಅಥವಾ ವನ್ಯಜೀವಿ ಕಾಯ್ದೆಯ ವ್ಯಾಖ್ಯಾನದ ಹೆಸರಿನಲ್ಲಿ ಉತ್ತರ ಕರ್ನಾಟಕದ ಕುಡಿಯುವ ನೀರಿನ ಯೋಜನೆಯನ್ನು ಅನಿರ್ದಿಷ್ಟವಾಗಿ ತಡೆಯುವುದು ನ್ಯಾಯಸಮ್ಮತವಲ್ಲ. ಮಹದಾಯಿ ನದಿಯಿಂದ ಕರ್ನಾಟಕದ ಪ್ರದೇಶದಲ್ಲಿ ಸುಮಾರು 45 ಟಿಎಂಸಿ ಅಡಿ ನೀರು ಉತ್ಪತ್ತಿಯಾಗುತ್ತಿದ್ದು, ಒಟ್ಟು ಜಲಲಭ್ಯತೆ ಸುಮಾರು 188 ಟಿಎಂಸಿ ಅಡಿ ಎಂದು ಅಂದಾಜಿಸಲಾಗಿದೆ. ಕರ್ನಾಟಕವು 7.6 ಟಿಎಂಸಿ ಅಡಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬೇಡಿಕೆ ಇಟ್ಟಿದ್ದರೂ, ನ್ಯಾಯಮಂಡಳಿ 3.9 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದೆ. ಈ ಹಂಚಿಕೆ ಗೆಜೆಟ್ ಅಧಿಸೂಚನೆಯ ಮೂಲಕ ದೃಢಪಟ್ಟಿರುವುದರಿಂದ ಕರ್ನಾಟಕಕ್ಕೆ ಅದನ್ನು ಬಳಸುವ ಪೂರ್ಣ ಹಕ್ಕು ಇದೆ ಎಂದು ತಿಳಿಸಿದರು.ರಾಜ್ಯ ಸರ್ಕಾರ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗದೇ ಕೇಂದ್ರ ಸರ್ಕಾರದ ಮುಂದೆ ತನ್ನ ಕಾನೂನುಬದ್ಧ ಹಕ್ಕಿನ ಆಧಾರದ ಮೇಲೆ ಗಟ್ಟಿಯಾಗಿ ವಾದಿಸಬೇಕು. ಮಹದಾಯಿ ಯೋಜನೆ ಜಾರಿಯಾದರೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ ಹಾಗೂ ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆಗೆ ಮಹತ್ವದ ಪರಿಹಾರ ದೊರೆಯಲಿದೆ ಎಂದರು.ಗಡಿ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, 1956ರ ಭಾಷಾವಾರು ರಾಜ್ಯಗಳ ಪುನರ್‌ರಚನೆಯ ಸಂದರ್ಭದಲ್ಲಿ ಸಂಸತ್ತು ಹೊಸ ಮೈಸೂರು ರಾಜ್ಯವನ್ನು ರಚಿಸಿತು. ಆಗಿನ ಮುಂಬೈ ರಾಜ್ಯದಲ್ಲಿದ್ದ ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಮತ್ತು ವಿಜಯಪುರ ಜಿಲ್ಲೆಗಳು ಹೊಸ ಮೈಸೂರು ರಾಜ್ಯಕ್ಕೆ ಸೇರಿದ್ದವು. ಆಗಿನ ಮುಂಬೈ ರಾಜ್ಯವು ಇಂದಿನ ಮಹಾರಾಷ್ಟ್ರ ಮಾತ್ರ ಆಗಿರಲಿಲ್ಲ. ಅದು ಕನ್ನಡ, ಮರಾಠಿ, ಗುಜರಾತಿ ಹಾಗೂ ಸಿಂಧಿ ಭಾಷಿಕ ಪ್ರದೇಶಗಳನ್ನು ಒಳಗೊಂಡ ಸಂಯುಕ್ತ ಆಡಳಿತ ಪ್ರದೇಶವಾಗಿತ್ತು. ಹೀಗಾಗಿ ಬೆಳಗಾವಿ ಮುಂಬೈ ರಾಜ್ಯದಲ್ಲಿತ್ತು ಎಂಬ ಕಾರಣಕ್ಕೆ ಅದು ಮಹಾರಾಷ್ಟ್ರದ್ದೇ ಆಗುತ್ತದೆ ಎಂಬ ವಾದಕ್ಕೆ ಐತಿಹಾಸಿಕ ಅಥವಾ ಕಾನೂನುಬದ್ಧ ಬಲವಿಲ್ಲ ಎಂದು ತಿಳಿಸಿದರು.
