ಕನ್ನಡಪ್ರಭ ವಾರ್ತೆ ಇಂಡಿ
ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಪಕ್ಷದ ಸ್ಥಳೀಯ ಕಾರ್ಯಕರ್ತರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.ನಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡದಿದ್ದರೆ ಪಕ್ಷದ ಎಲ್ಲ ಹುದ್ದೆಗಳಿಗೆ ಹಾಗೂ ನಾಮನಿರ್ದೇಶಿತ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ. ನಂತರ ಪಕ್ಷದ ಕಚೇರಿಯಲ್ಲಿಯೇ ಇದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಅವರಿಗೆ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಸಲ್ಲಿಸಿದರು.
ಬಳಿಕ ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾದ ಕಾರ್ಯಕರ್ತರು ಇಂಡಿ ಕ್ಷೇತ್ರಕ್ಕೆ 1957ರಿಂದ ಇಲ್ಲಿವರೆಗೆ ಒಮ್ಮೆಯೂ ಸಚಿವ ಸ್ಥಾನ ದೊರೆತಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನಾನು ಹಾಗೂ ಸಿದ್ದರಾಮಯ್ಯ ಸಾಹೇಬರು ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಇಂಡಿ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಾಲ ತಳಕೇರಿ ತಿಳಿಸಿದ್ದಾರೆ.ಮಹಿಳೆಯರಿಂದಲೂ ಪ್ರತಿಭಟನೆ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯರು ಸಹ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳ ಕಾಲಿಗೆ ಬಿದ್ದು ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಲೇಬೇಕೆಂದು ಮನವಿ ಮಾಡಿದರು. ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಯಶವಂತರಾಯಗೌಡರು ನಮಗೂ ಬೇಕಾದವರು ನೋಡೋಣ ಎಂದು ಹೇಳಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.
ಶಿವಯೋಗೆಪ್ಪ ಚನಗೊಂಡ, ಪ್ರಶಾಂತ ಕಾಳೆ, ಜಾವೀದ ಮೋಮಿನ್, ಸೋಮು ಮ್ಯಾಕೇರಿ, ಬಿ.ಸಿ.ಸಾಹುಕಾರ, ಶ್ರೀಕಾಂತ ಕೂಡಿಗನೂರ, ಸಣ್ಣಪ್ಪ ತಳವಾರ, ಶೇಖರ ಶಿವಶರಣ, ಅಜಿತ್ ಧನಶೆಟ್ಟಿ, ವಕೀಲ ಸಿದ್ದಣ್ಣ ಬೂದಿಹಾಳ, ಡಿ.ಜೆ.ಜೋತಗೊಂಡ, ಶೇಖರ ನಾಯಕ, ನೀಲಕಂಠಗೌಡ ಪಾಟೀಲ, ಜಟ್ಟೆಪ್ಪ ರವಳಿ, ಸದಾಶಿವ ಪ್ಯಾಟಿ, ರಂಜಾನ್ ವಾಲೀಕಾರ, ಎಸ್.ಜೆ.ಮಾಡ್ಯಾಳ, ಸಂತೋಶ ಪರಸೇನವರ, ಸುನಂದಾ ಪಾಟೀಲ, ಜಯಶ್ರೀ ಕಾಲೇಬಾಗ, ನಿರ್ಮಲಾ ತಳಕೇರಿ, ಶೈಲಜಾ ಜಾಧವ, ರಾಧಾ ಎಂಟಮನ್, ಚಂದ್ರಕಲಾ ಹೋರ್ತಿ, ಲಕ್ಷ್ಮೀ ಶಿವಶರಣ, ಸುಮಂಗಲಾ ಕ್ಷತ್ರಿ ಸೇರಿದಂತೆ ಅನೇಕರು ಇದ್ದರು.