ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸಾಲಬಾಧೆಯಿಂದ ಬೇಸತ್ತು ನೇಕಾರನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬನಹಟ್ಟಿ ನಗರದಲ್ಲಿ ಮಂಗಳವಾರ ನಡೆದಿದೆ. ಇಲ್ಲಿನ ಮಂಗಳವಾರ ಪೇಟೆಯ ಸುಟ್ಟಟ್ಟಿ ಲೇನ್ ನಿವಾಸಿ ದೇವೇಂದ್ರ(ರಾಜು) ಮುನ್ನೋಳ್ಳಿ(35) ಆತ್ಮಹತ್ಯೆ ಮಾಡಿಕೊಂಡ ನೇಕಾರ.

ನೇಕಾರಿಕೆ ವೃತ್ತಿಯಲ್ಲಿದ್ದ ದೇವೇಂದ್ರ ವೃತ್ತಿಯಲ್ಲಿ ತೊಂದರೆ ಕಾರಣಕ್ಕೆ ಕಠಿಣ ಜೀವನ ಸಾಗಿಸುತ್ತಿದ್ದ. ನೇಕಾರಿಕೆಯಿಂದ ಬದುಕು ನಿರ್ವಹಣೆ ಸಾಧ್ಯವಾಗದ ಕಾರಣ ಖಾಸಗಿ ವ್ಯಕ್ತಿಗಳಿಂದ ಹಾಗೂ ಸಹಕಾರಿ ಸಂಘಗಳಲ್ಲಿ ಒಟ್ಟು ಸುಮಾರು ₹6 ಲಕ್ಷಗಳಷ್ಟು ಸಾಲ ಮಾಡಿದ್ದರು. ನಿರ್ವಹಣೆ ಹಾಗೂ ಮಜೂರಿ ಸಮರ್ಪಕವಾಗಿ ಬದುಕಿಗೆ ಸಾಕಾಗದೆ ಸಾಲ ತುಂಬುವಲ್ಲಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಸಾಲಬಾಧೆಯಿಂದ ಬೇಸತ್ತಿದ್ದರು. ಮಂಗಳವಾರ ಬೆಳಗ್ಗೆ ಮನೆಯಿಂದ ನೇಯ್ಗೆಗೆಂದು ಮಾಲೀಕರ ಕಾರ್ಖಾನೆಗೆ ತೆರಳಿದ ದೇವೇಂದ್ರ ಯಾರೂ ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸೈ ಶಿವರಾಜ ಧರಿಗೋಣ ತನಿಖೆ ಮುಂದುವರೆಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ನಂತರದ 4 ವರ್ಷಗಳಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರ್ಧಶತಕಕ್ಕೂ ಹೆಚ್ಚಾಗಿದ್ದು, ಸರ್ಕಾರ ನೇಕಾರ ರಕ್ಷಣೆಗೆಂದು ನಿರ್ಮಿಸಿರುವ ಯೋಜನೆಗಳು ಕೇವಲ ಪ್ರಚಾರಕ್ಕೆ ಮಾತ್ರ ಮೀಸಲಾಗಿದೆ. ಕೆಳಹಂತದಲ್ಲಿ ಜಾರಿಯಾಗದಿರುವುದೇ ನೇಕಾರರ ಸರಣಿ ಆತ್ಮಹತ್ಯೆ ನಡೆಯಲು ಕಾರಣವಾಗಿವೆ ಎಂಬುವುದು ಇಲ್ಲಿನ ನೇಕಾರರ ಅಳಲಾಗಿದೆ. ಕೇವಲ 25 ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡಿರುವ ಸರ್ಕಾರ ಇಲ್ಲದ ನೆಪವೊಡ್ಡಿ ಇತರೆ ಕುಟುಂಬಗಳಿಗೆ ಇನ್ನೂ ಹಲವಾರು ಪರಿಹಾರ ಒದಗಿಸಿಲ್ಲ. ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡು ಸಾಲಬಾಧಿತ ಕುಟುಂಬಗಳು ತೀವ್ರ ಸಂಕಷ್ಟದಲ್ಲಿದ್ದಾರೆ. ಅಂಥವರಿಗೆ ತಕ್ಷಣವೇ ಪರಿಹಾರ ಒದಗಿಸಬೇಕೆಂದು ನೇಕಾರ ಮುಖಂಡ ಶಿವಲಿಂಗ ಟಿರಕಿ ಸರ್ಕಾರವನ್ನು ಒತ್ತಾಯಿಸಿದರು.-----ಸರ್ಕಾರದ ಯೋಜನೆಗಳು ಕಾಟಾಚಾರಕ್ಕೆ ಹಾಗೂ ಪುಕ್ಕಟೆ ಪ್ರಚಾರಕ್ಕಾಗಿವೆ. ಕಟ್ಟಕಡೆಯ ನೇಕಾರನಿಗೆ ಯೋಜನೆಗಳು ತಲುಪುವವರೆಗೂ ನೇಕಾರ ಸ್ಥಿತಿ ಚಿಂತಾಜನಕವಿದೆ.

-ಶಿವಲಿಂಗ ಟಿರಕಿ, ರಾಜ್ಯಾಧ್ಯಕ್ಷರು, ನೇಕಾರ ಸೇವಾ ಸಂಘ.