ರಸ್ತೆ ದುರಸ್ತಿಗೂ ಹಾವೇರಿ ಜಿಪಂನಲ್ಲಿ ಹಣವಿಲ್ಲ!

KannadaprabhaNewsNetwork | Published : Jan 18, 2025 12:49 AM

ಸಾರಾಂಶ

ತಾಲೂಕಿನ ಜನತೆಗೆ ರಸ್ತೆಗಳನ್ನು ನಿರ್ಮಿಸಿಕೊಡುವ ಜವಾಬ್ದಾರಿ ಹೊತ್ತಿರುವ ಹಾನಗಲ್ ಜಿಪಂ ಎಂಜಿನಿಯರಿಂಗ್‌ ವಿಭಾಗಕ್ಕೆ ಸೇರುವ ರಸ್ತೆಗಳು ರಿಪೇರಿ ಆಗಿಲ್ಲ, ವಿವಿಧ ಇಲಾಖೆಗಳಿಗೆ ಸುಸಜ್ಜಿತ ಕಟ್ಟಡ ಕಟ್ಟಿಕೊಡುವ ಈ ಇಲಾಖೆಗೊಂದು ಸುಸಜ್ಜಿತ ಕಟ್ಟಡವಿಲ್ಲ, 620 ಕಿಮೀ ರಸ್ತೆ ನಿರ್ವಹಣೆ ಹೊಣೆ ಹೊತ್ತಿದ್ದು, ಪ್ರಸ್ತುತ ರಸ್ತೆ ದುರಸ್ತಿಗೆ ಇನ್ನೂ ₹20 ಕೋಟಿ ಅನುದಾನ ಬೇಕಾಗಿದೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ ತಾಲೂಕಿನ ಜನತೆಗೆ ರಸ್ತೆಗಳನ್ನು ನಿರ್ಮಿಸಿಕೊಡುವ ಜವಾಬ್ದಾರಿ ಹೊತ್ತಿರುವ ಹಾನಗಲ್ ಜಿಪಂ ಎಂಜಿನಿಯರಿಂಗ್‌ ವಿಭಾಗಕ್ಕೆ ಸೇರುವ ರಸ್ತೆಗಳು ರಿಪೇರಿ ಆಗಿಲ್ಲ, ವಿವಿಧ ಇಲಾಖೆಗಳಿಗೆ ಸುಸಜ್ಜಿತ ಕಟ್ಟಡ ಕಟ್ಟಿಕೊಡುವ ಈ ಇಲಾಖೆಗೊಂದು ಸುಸಜ್ಜಿತ ಕಟ್ಟಡವಿಲ್ಲ, 620 ಕಿಮೀ ರಸ್ತೆ ನಿರ್ವಹಣೆ ಹೊಣೆ ಹೊತ್ತಿದ್ದು, ಪ್ರಸ್ತುತ ರಸ್ತೆ ದುರಸ್ತಿಗೆ ಇನ್ನೂ ₹20 ಕೋಟಿ ಅನುದಾನ ಬೇಕಾಗಿದೆ.ಹಾನಗಲ್ಲಿನ ಜಿಪಂ ಎಂಜಿನಿಯರಿಂಗ್ ಇಲಾಖೆ ತಾಲೂಕಿನ 280 ಕಿಮೀ ಡಾಂಬರೀಕೃತ ರಸ್ತೆ, 292 ಕಿಮೀ ಮಣ್ಣಿನ ರಸ್ತೆ, 48 ಕಿಮೀ ಕಡೀಕರಣಗೊಂಡ ರಸ್ತೆ ನಿರ್ವಹಿಸಬೇಕಾಗಿದೆ. ಕಳೆದ ವರ್ಷದ ಮಳೆಗೆ ಬಹುತೇಕ ರಸ್ತೆಗಳು ಹಾಳಾಗಿವೆ. ಎಲ್ಲೆಂದರಲ್ಲಿ ಗುಂಡಿಗಳಿವೆ. ವಾಹನ ಸಂಚಾರ ಕಷ್ಟಕರವಾಗಿದೆ. ಇಂತಹ ರಸ್ತೆ ದುರಸ್ತಿಗೆ ಈಗ ₹10 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಇನ್ನೂ ಕನಿಷ್ಠ ₹20 ಕೋಟಿ ಅಗತ್ಯವಾಗಿ ಬೇಕಾಗಿದೆ. ಈ ₹10 ಕೋಟಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿಗೆ ಚಾಲನೆ ದೊರೆತಿದೆ.ಕೆರೆ ಹಸ್ತಾಂತರ: ತಾಲೂಕಿನಲ್ಲಿ ನೀರಾವರಿ ಸೇರಿದಂತೆ 643 ಕೆರೆಗಳನ್ನು ಜಿಪಂ ಎಂಜಿನಿಯರಿಂಗ್‌ ಇಲಾಖೆ ನಿರ್ವಹಿಸುತ್ತಿತ್ತು. ಆದರೆ ಈ ಕೆರೆಗಳನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ನಿರ್ವಹಣೆಯ ಜವಾಬ್ದಾರಿ ನೀಡಿದೆ. ಇವನ್ನು ಅಲ್ಲಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೇ ನಿರ್ವಹಿಸಬೇಕಾಗಿದೆ. ಈ ಜವಾಬ್ದಾರಿಯಿಂದ ಈಗ ಜಿಪಂ ಮುಕ್ತವಾಗಿದೆ.50 ಕಿಮೀ ರಸ್ತೆ: ಕಳೆದ ಮಳೆಗಾಲಕ್ಕೆ ಅಂದಾಜು 50 ಕಿಮೀ ರಸ್ತೆ ಹಾಳಾಗಿದ್ದು, ಅವುಗಳ ನಿರ್ವಹಣೆಗೆ ಅಂದಾಜು ₹20 ಕೋಟಿ ಬೇಕು ಎಂದು ಅಂದಾಜಿಸಲಾಗಿದೆ. ಅನುದಾನದ ಕೊರತೆಯಿಂದ ಈ ಕಾಮಗಾರಿಗಳಿಗೆ ಇನ್ನೂ ಚಾಲನೆ ದೊರೆತಿಲ್ಲ. ಈಗ ಬಿಡುಗಡೆಯಾಗಿರುವ ₹10 ಕೋಟಿಗಳಲ್ಲಿ ತಾತ್ಕಾಲಿಕ ಹಾಗೂ ತೀರ ಅವಶ್ಯಕವಿರುವ ರಸ್ತೆ ದುರಸ್ತಿಗೆ ಅಡಿಗಲ್ಲು ಸಮಾರಂಭ ನಡೆಯುತ್ತಿವೆ.ಬಿಲ್ ಬಾಕಿ: ಕಾಮಗಾರಿ ಕೈಗೊಂಡು ಮುಗಿದ ಕಾಮಗಾರಿಯ ಮೊತ್ತ ಗುತ್ತಿಗೆದಾರರಿಗೆ ₹25 ಕೋಟಿಗಳಷ್ಟು ಬಾಕಿ ಹಣ ಬರಬೇಕಾಗಿದೆ. ಇದರಿಂದಾಗಿ ಗುತ್ತಿಗೆದಾರರು ಜಿಪಂ ಕಚೇರಿಗೆ ಅಲೆದಾಡುವುದೇ ಆಗಿದೆ. ಮತ್ತೆ ಹೊಸ ಕಾಮಗಾರಿಗಳೂ ಆರಂಭವಾಗಿದ್ದು, ಹಳೆಯ ಬಾಕಿಯನ್ನು ಮೊದಲು ಸರ್ಕಾರ ನೀಡಬೇಕು ಎಂಬುದು ಗುತ್ತಿಗೆದಾರರ ಅಹವಾಲು ಆಗಿದೆ.ಜಿಪಂ ಕಚೇರಿ ರಸ್ತೆ: ಪಟ್ಟಣದಲ್ಲಿ ಜಿಪಂ ಕಚೇರಿಗೆ ಸೇರುವ ರಸ್ತೆ ಗುಂಡಿಗಳಿಂದ ತುಂಬಿಕೊಂಡಿದ್ದು, ಮಳೆಗಾಲದಲ್ಲಿಯಂತೂ ಇಲ್ಲಿ ಓಡಾಡುವವರಿಗೆ ತಂತಿಯ ಮೇಲಿನ ನಡಿಗೆಯಂತಾಗಿರುತ್ತದೆ. ಈ ಬಗ್ಗೆ ಪತ್ರಿಕೆ ವರದಿ ಮಾಡಿತಾದರೂ ಕಾಮಗಾರಿ ಕೈಗೂಡಿರಲಿಲ್ಲ. ಈಗ ಅದಕ್ಕೆ ಚಾಲನೆ ದೊರೆಯುವ ಹಂತದಲ್ಲಿದೆ. ರಸ್ತೆ ನಿರ್ಮಿಸಿಕೊಡುವ ಜಿಪಂ ಇಲಾಖೆಗೆ ಹೋಗುವ ರಸ್ತೆಗೆ ರಿಪೇರಿ ಭಾಗ್ಯವಿಲ್ಲ ಎಂಬ ಸ್ಥಿತಿ ಉಂಟಾಗಿತ್ತು.ಜಿಪಂ ಕಟ್ಟಡ: ಜಿಪಂ ಎಂಜಿನಿಯರಿಂಗ್‌ ಇಲಾಖೆಯಿಂದ ಶಿಕ್ಷಣ, ಸಿಡಿಪಿಒ, ಪಶು ಸಂಗೋಪನೆ, ಆರೋಗ್ಯ, ಮೀನುಗಾರಿಕೆ, ಬಿಸಿಎಂ, ಗ್ರಾಮ ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಗಳ ಕಟ್ಟಡಗಳನ್ನು ನಿರ್ಮಿಸುತ್ತದೆ. ಆದರೆ ಸ್ವತಃ ಜಿಪಂ ಇಲಾಖೆಗೆ ಒಂದು ಸುಸಜ್ಜಿತ ಹೊಸ ಕಟ್ಟಡವಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಬದಲಾದ ಕಾಲಕ್ಕೆ ಒಂದು ಸುಸಜ್ಜಿತ ಕಟ್ಟಡದ ಅಗತ್ಯ ಬಹಳ ಇದೆ. ಇದಕ್ಕಾಗಿ ಅಂದಾಜು ₹3 ಕೋಟಿ ಅಗತ್ಯವಿದೆ ಎನ್ನಲಾಗಿದೆ.

Share this article