ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ಹುಡ್ಕೋ ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಉತ್ತಮ, ಜನಪರ ಆಡಳಿತ ನೀಡಿ ಮಾದರಿಯಾಗಿದೆ. ಬಿಜೆಪಿಯವರಿಗೆ ನಮ್ಮ ಸರ್ಕಾರದ ವಿರುದ್ಧ ಆರೋಪಿಸಲು ಯಾವ ವಿಷಯಗಳಿಲ್ಲದೇ ತಪ್ಪು ಸಂದೇಶ ನೀಡುವ ಹಾಗೂ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಸದ್ಯ ಆಲಮಟ್ಟಿ ನೀರಾವರಿ ಯೋಜನೆ ಸಂಪೂರ್ಣಗೊಳಿಸಿ ಆಣೆಕಟ್ಟಿನ ಎತ್ತರ 524ಕ್ಕೆ ಏರಿಸಲು ಕೇಂದ್ರ ಸರ್ಕಾರ ಮುಂದೆ ಬರುತ್ತಿಲ್ಲ. ಜತೆಗೆ ನಮ್ಮ ರಾಜ್ಯಕ್ಕೆ ಬರಬೇಕಿದ್ದ ಜಿಎಸ್‌ಟಿ ಪಾಲುದಾರಿಕೆಯನ್ನೂ ನೀಡುತ್ತಿಲ್ಲ. ರೈತರು, ಕಾರ್ಮಿಕರಿಗೆ ವರದಾನವಾಗಿದ್ದ ನರೇಗಾ ಯೋಜನೆ ನಿಷ್ಕ್ರೀಯಗೊಳಿಸುತ್ತಿರಿ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾಗಾಂಧಿಯವರ ಫೋಟೋ ತೆಗೆದು ಹಾಕುತ್ತಿರಿ. ಇದ್ಯಾವ ನ್ಯಾಯ? ಬಡವರು ಹೇಗೆ ಬದುಕಬೇಕು ಎಂದು ಪ್ರಶ್ನಿಸಿದರು.
ಈ ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೇಂದ್ರದಿಂದ ಶೇ.90ರಷ್ಟು, ರಾಜ್ಯ ಸರ್ಕಾರದಿಂದ ಶೇ.10 ರಷ್ಟು ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲು ಯೋಜನೆ ಜಾರಿಗೆ ತಂದಿದ್ದರು. ಆದರೆ ಬಿಜೆಪಿಯು ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಮೇಲೆ ಆ ಯೋಜನೆಯನ್ನು ಕೈಬಿಟ್ಟು ಕೇಂದ್ರದಿಂದ ಶೇ.60 ರಷ್ಟು, ರಾಜ್ಯ ಸರ್ಕಾರದಿಂದ ಶೇ.40 ರಷ್ಟು ಸದ್ಬಳಕೆ ಮಾಡಿಕೊಳ್ಳುವ ಯೋಜನೆ ಜಾರಿಗೆ ತರಲಾಗಿದೆ. ಮಾತ್ರವಲ್ಲ ಗ್ರಾಮ ಪಂಚಾಯಿತಿ ಹಾಗೂ ತಾಪಂಗಳ ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡುವ ಯೋಜನೆಗಳನ್ನು ಇದೀಗ ಕೇಂದ್ರದಿಂದ ಅನುಮೋದನೆ ಪಡೆಯುವ ಯೋಜನೆ ಜಾರಿಗೆ ತರುವ ಮೂಲಕ ಗ್ರಾಮ ಹಾಗೂ ತಾಲೂಕು ಪಂಚಾಯಿತಿಗಳ ಅಧಿಕಾರ ಕಿತ್ತುಕೊಂಡಿದೆ ಎಂದು ದೂರಿದರು.ಮತಕ್ಷೇತ್ರದ ಜನಕ್ಕೆ ಬುದ್ಧಿಯಿಲ್ಲ ಎಂದು ಮಾಜಿ ಶಾಸಕರೊಬ್ಬರು ಹೇಳುತ್ತಿದ್ದಾರೆ. ಆದರೆ, ಮತಕ್ಷೇತ್ರದ ಜನ ಬಹಳ ಬುದ್ಧಿ ಜೀವಿಗಳಿದ್ದಾರೆ. ಪ್ರಜ್ಞಾವಂತರಿದ್ದಾರೆ. ಮಾತ್ರವಲ್ಲ ಸ್ವಾಭಿಮಾನಿಗಳಿದ್ದಾರೆ. ಯಾರೇ ಆಗಲಿ ನೈತಿಕ ತಳಹದಿಯ ಮೇಲೆ ರಾಜಕಾರಣ ಮಾಡಲು ತಕ್ಕ ಪಾಠ ಕಲಿಸುವಲ್ಲಿ ಸದಾ ಸಿದ್ದರಿದ್ದಾರೆ ಎಂದರು.ಇಲ್ಲಿನ ಮಾಜಿ ಶಾಸಕರೊಬ್ಬರು ಮತಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಯಾರೇ ಶಾಸಕರಾಗಿರಲಿ ಮಾತನಾಡುವ ಮುನ್ನ ಯೋಚಿಸಬೇಕು. ಅದು ಮುಂದೆ ಯಾವ ಪರಿಣಾಮ ಬೀರುತ್ತದೆ ಅದರಿಂದಾಗುವ ಅನಾಹುತ ಏನಾಗಬಹುದು ಎಂಬುವುದರ ಅರಿವು ಇರಬೇಕು. ಹೀಗಾಗಿ ತಿಳಿದುಕೊಂಡು ಮಾತನಾಡಬೇಕು. ಇಲ್ಲದಿದ್ದರೇ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದು ಹರಿಹಾಯ್ದರು.ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಆದರೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೈಗೊಂಡ ನಾಗರಬೆಟ್ಟ ಏತ ನೀರಾವರಿ ಯೋಜನೆಗಳು, ರಸ್ತೆ ನಿರ್ಮಾಣ, ಕೆರೆ ತುಂಬಿಸುವ ಯೋಜನೆಯ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ತಾವೇ ಮಾಡಿದ್ದೇನೆಂದು ಸುಳ್ಳು ಹೇಳುವ ಮೂಲಕ ಜನರಿಗೆ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಇವರ ಆಡಳಿತದಲ್ಲಿ ಒಳ್ಳೆಯ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಸಾಧ್ಯವಾಗಲಿಲ್ಲ. ಕೆರೆ ತುಂಬಲಿಲ್ಲ. ಸಂಪೂರ್ಣ ಕೊಳ್ಳೆ ಹೊಡೆದು ಹೋದವರಿಂದ ಪಾಠ ಕಲಿಯಬೇಕಿಲ್ಲ ಎಂದು ಕಿಡಿಕಾರಿದರು.ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಗುರು ತಾರನಾಳ, ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಕಾಂಗ್ರೆಸ್ ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ, ಮುಖಂಡರಾದ ವೈ.ಎಚ್.ವಿಜಯಕರ, ಎಂ.ಎಚ್.ಹಾಲಣ್ಣವರ, ಎಸ್.ಎಸ್.ಮಾಲಗತ್ತಿ, ಶ್ರೀಕಾಂತ ಚಲವಾದಿ, ಎಂ.ಬಿ.ನಾವದಗಿ, ಗಫೂರಸಾಬ ಮಕಾಂನದಾರ, ವಿಜಯಕುಮಾರ ಗೂಳಿ, ಕಾಮರಾಜ ಬಿರಾದಾರ, ಶರಣು ಸಜ್ಜನ ಸತೀಶ ಓಸ್ವಾಲ್, ಅಮರೇಶ ಗೂಳಿ, ರಾಜು ಕೊಂಗಿ, ಶ್ರೀಶೈಲ ಮರೋಳ, ತಾಳಿಕೋಟಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ದೇಸಾಯಿ, ರಾಜೇಂದ್ರರಾಯ ಗೊಂಡ ಸೇರಿದಂತೆ ಹಲವರಿದ್ದರು.ತಾವು ಕಾಂಗ್ರೆಸ್‌ದಿಂದ ಬಿಜೆಪಿಗೆ ಜಂಪ್ ಆಗಿದ್ದಿರಿ ಎಂಬುವುದನ್ನು ಬಹಿರಂಗವಾಗಿ ಹೇಳಬೇಕಿಲ್ಲ. ಎಲ್ಲವನ್ನೂ ಜನರು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಾರೆ. ಮೂಲ ಬಿಜೆಪಿಗೆ ಟಕ್ಕರ್ ಕೊಟ್ಟು ಕುತಂತ್ರದಿಂದ ಒಂದು ಬಾರಿ ಬಿಜೆಪಿಯಿಂದ ಗೆದ್ದು ಬೀಗಿರಬಹುದು. ಆದರೆ, ಮುಂಬರುವ ದಿನಗಳಲ್ಲಿ ನೀವು ಅಂದುಕೊಂಡ ಹಾಗೇ ಸಾಧ್ಯವಾಗುವುದಿಲ್ಲ. ಮೂಲ ಬಿಜೆಪಿ ಮುಖಂಡರು ಕೂಡ ಶಾಸಕರಾಗಬೇಕೆಂದು ಕನಸು ಕಂಡವರಿದ್ದಾರೆ. ಮೊದಲು ನಿಮ್ಮ ಸ್ಥಾನ ಭದ್ರಗೊಳಿಸಿಕೊಳ್ಳಲು ಪ್ರಯತ್ನಿಸಿ. ಅದು ಬಿಟ್ಟು ಒಂದು ಧರ್ಮವನ್ನು ನಿಂದಿಸುವ ಮೂಲಕ ಜಾತಿ ಮತ್ತು ಧರ್ಮದ ಹೆಸರಲ್ಲಿ ವಿಷದ ಬೀಜ ಬಿತ್ತುವ ಕಾರ್ಯದಲ್ಲಿ ತೊಡಗಿರುವುದು ಸರಿಯಲ್ಲ. ಇದು ನಿಮಗೆ ಶೋಭೆ ತರುವಂತಹದ್ದಲ್ಲ.
-ಸಿ.ಎಸ್.ನಾಡಗೌಡ (ಅಪ್ಪಾಜಿ), ಶಾಸಕ, ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು.