ಮಂಗಳೂರು : ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಣದಿಂದ ಶಾಸಕರ ಖರೀದಿ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹೇಳಿಕೆ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲರ ಬೆಂಬಲ ಇದೆ. ಕಾಂಗ್ರೆಸ್‌ನಲ್ಲಿ ಖರೀದಿಗೆ ಯಾರೂ ಇಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಲ್ಹಾದ್ ಜೋಷಿ ಅವರು ರಾಜ್ಯ, ದೇಶದ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಕೇವಲ ನೆಗೆಟಿವ್ ಮಾತ್ರ ಮಾತನಾಡುತ್ತಾರೆ. ನೆಗೆಟಿವ್ ಮಾತನಾಡಿಲ್ಲ ಎಂದರೆ ಅವರಿಗೆ ನಿದ್ದೆ ಬರುವುದಿಲ್ಲ, ಅವರು ಹೇಳಿದಂತೆ ನಮ್ಮಲ್ಲಿ ಖರೀದಿಗೆ ಯಾರೂ ಇಲ್ಲ ಎಂದು ಟೀಕಿಸಿದರು.ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಒಂದೇ ನಾಣ್ಯದ ‘ಹೆಡ್’ ಮತ್ತು ‘ಟೈಲ್’ ಇದ್ದಂತೆ. ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧವೆಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ದೆಹಲಿಗೆ ಪೂಜೆಗಾಗಿ ಹೋಗಿದ್ದಾರೆ ಅಷ್ಟೇ ಎಂದರು.
ಜವಾಹರಲಾಲ್ ನೆಹರು ಬಗ್ಗೆ ಈಗಲೂ ಬಿಜೆಪಿಯವರು ನೆಗೆಟಿವ್ ಆಗಿ ಮಾತನಾಡುತ್ತಾರೆ. ನೆಹರು ತಮ್ಮ ಆಸ್ತಿಯನ್ನು ದೇಶಕ್ಕೆ ಬರೆದುಕೊಟ್ಟಿದ್ದಾರೆ. ಬಿಜೆಪಿಯವರು ಯಾರಾದರೂ ಬರೆದು ಕೊಟ್ಟಿದ್ದಾರಾ ಎಂದು ರಾಮಲಿಂಗ ರೆಡ್ಡಿ ಪ್ರಶ್ನಿಸಿದರು.
ಬಿಜೆಪಿ ಸಾಧನೆ ಮಾಡಿಲ್ಲ:
ಸರ್ಕಾರ ಇರುವವರೆಗೆ ಸಾಧನಾ ಸಮಾವೇಶ ಮಾಡುತ್ತಲೇ ಇರಬೇಕು. ಸಾಧನಾ ಸಮಾವೇಶದ ಮೂಲಕ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದ ಅವರು, ಬಿಜೆಪಿಯವರು ತಮ್ಮ ಅಧಿಕಾರವಧಿಯಲ್ಲಿ ಸಾಧನಾ ಸಮಾವೇಶ ಮಾಡಿಲ್ಲ. ಏಕೆಂದರೆ ಅವರು ಸಾಧನೆಯನ್ನೇ ಮಾಡಿಲ್ಲ ಎಂದು ವ್ಯಂಗ್ಯವಾಡಿದರು.
5 ವರ್ಷ ಬಳಿಕ ಗಾಳಿ ಆಂಜನೇಯ ಆಡಳಿತ ವಾಪಸ್
ಬೆಂಗಳೂರಿನ ಗಾಳಿ ಆಂಜನೇಯ ದೇವಸ್ಥಾನ ಸರ್ಕಾರದ ವಶಕ್ಕೆ ಪಡೆಯುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗ ರೆಡ್ಡಿ, ರಾಜ್ಯದಲ್ಲಿ ಸುಮಾರು 1,85,000 ದೇವಸ್ಥಾನಗಳಿವೆ. ಇದರಲ್ಲಿ 35 ಸಾವಿರ ಮುಜರಾಯಿ ಇಲಾಖೆಗೆ ಸಂಬಂಧಿಸಿದ್ದರೆ, 1,50,000 ಖಾಸಗಿ ದೇವಸ್ಥಾನಗಳಿವೆ. ಖಾಸಗಿ ದೇವಸ್ಥಾನಗಳಲ್ಲಿ ಅವ್ಯವಹಾರ ನಡೆದರೆ 5 ವರ್ಷ ಸರ್ಕಾರ ವಶಕ್ಕೆ ಪಡೆಯಲು ಅವಕಾಶ ಇದೆ. ಗಾಳಿ ಆಂಜನೇಯ ದೇವಸ್ಥಾನದಲ್ಲಿ ಅವ್ಯವಹಾರ ನಡೆದಿದೆ. ಹಣ ತೆಗೆದುಕೊಂಡು ಹೋಗ್ತಿದ್ದ ವಿಡಿಯೊ ಎಲ್ಲರೂ ನೋಡಿದ್ದಾರೆ. ಐದು ವರ್ಷ ಆದ ಮೇಲೆ ದೇವಾಲಯ ಆಡಳಿತವನ್ನು ವಾಪಸ್ ಕೊಡುತ್ತೇವೆ ಎಂದು ಹೇಳಿದರು.
ಬಿಜೆಪಿ ವಶಪಡಿಸಿದಾಗ ಏಕೆ ಮಾತಿಲ್ಲ:
ಬಿಜೆಪಿ ಸರ್ಕಾರ ಇದ್ದಾಗ ಅವ್ಯವಹಾರ ಆಗಿತ್ತು ಎಂಬ ಹಿನ್ನೆಲೆಯಲ್ಲಿ ಎಂಟು ದೇವಸ್ಥಾನಗಳನ್ನು ವಶಕ್ಕೆ ಪಡೆದಿತ್ತು. ಆಗ ಏಕೆ ಯಾರೂ ಮಾತನಾಡಿಲ್ಲ? ಅವರು ಸರ್ಕಾರದ ವಶಕ್ಕೆ ಪಡೆದು ಬಳಿಕ ವಾಪಸ್ ಕೊಟ್ಟಿದ್ದಾರೆ. ಗಾಳಿ ಆಂಜನೇಯ ದೇವಸ್ಥಾನದಲ್ಲಿ 25 ವರ್ಷಗಳಿಂದ ಅವ್ಯವಹಾರ ನಡೆಯುತ್ತಿದೆ. ಈಗಲೂ ಆಡಳಿತ ಮಂಡಳಿಯವರು ಚೆನ್ನಾಗಿ ಆಡಳಿತ ನಡೆಸುತ್ತೇವೆ ಎಂದರೆ ವಾಪಸ್ ಕೊಡುತ್ತೇವೆ ಎಂದು ಹೇಳಿದರು.