ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ

KannadaprabhaNewsNetwork |  
Published : Jul 09, 2025, 12:25 AM IST
8ಸಿಎಚ್‌ಎನ್‌51ಹನೂರು ತಾಲೂಕಿನ ದೊಡ್ಡಾಲತ್ತೂರು ಗ್ರಾಮಪಂಚಾಯಿತಿಯ ಕೆಂಪಯ್ಯನಹಟ್ಟಿ ಗ್ರಾಮದ ಮಕ್ಕಳು ಕೃಷಿ ಚಟುವಟಿಕೆಯಲ್ಲಿ ಪೋಷಕರು ಅನುಭವಿಸುತ್ತಿರುವ ತೊಂದರೆಯನ್ನು ನೋಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಅವರ ಪೋಷಕರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಿದರು.  | Kannada Prabha

ಸಾರಾಂಶ

ತಾಲೂಕಿನ ದೊಡ್ಡಾಲತ್ತೂರು ಗ್ರಾಮಪಂಚಾಯಿತಿಯ ಕೆಂಪಯ್ಯನಹಟ್ಟಿ ಗ್ರಾಮದ ಮಕ್ಕಳು ಕೃಷಿ ಚಟುವಟಿಕೆಯಲ್ಲಿ ಪೋಷಕರು ಅನುಭವಿಸುತ್ತಿರುವ ತೊಂದರೆಯನ್ನು ನೋಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಹಿನ್ನೆಲೆ ಜು.8ರಂದು ಕನ್ನಡಪ್ರಭದಲ್ಲಿ "ನಮ್ಮೂರಲ್ಲಿ ನೀರಿಲ್ಲವೆಂದು ಸಿಎಂ ಸಿದ್ದುಗೆ ಬಾಲಕಿ ಪತ್ರ " ಎಂಬ ಶೀರ್ಷಿಕೆಯಡಿ ವರದಿ ಪ್ರಕಟ ಮಾಡಿದ್ದಕ್ಕೆ ಬಾಲಕಿ ಪೋಷಕರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ದೊಡ್ಡಾಲತ್ತೂರು ಗ್ರಾಮಪಂಚಾಯಿತಿಯ ಕೆಂಪಯ್ಯನಹಟ್ಟಿ ಗ್ರಾಮದ ಮಕ್ಕಳು ಕೃಷಿ ಚಟುವಟಿಕೆಯಲ್ಲಿ ಪೋಷಕರು ಅನುಭವಿಸುತ್ತಿರುವ ತೊಂದರೆಯನ್ನು ನೋಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಹಿನ್ನೆಲೆ ಜು.8ರಂದು ಕನ್ನಡಪ್ರಭದಲ್ಲಿ "ನಮ್ಮೂರಲ್ಲಿ ನೀರಿಲ್ಲವೆಂದು ಸಿಎಂ ಸಿದ್ದುಗೆ ಬಾಲಕಿ ಪತ್ರ " ಎಂಬ ಶೀರ್ಷಿಕೆಯಡಿ ವರದಿ ಪ್ರಕಟ ಮಾಡಿದ್ದಕ್ಕೆ ಬಾಲಕಿ ಪೋಷಕರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಿದರು.

ಈ ಕುರಿತು ಜಿಪಂ ಸಿಇಒ ಮೋನಾ ರೋತ್‌ ಮಾತನಾಡಿ, ಕೆಂಪಯ್ಯನಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸಂಬಂಧ ಪರಿಶೀಲಿಸಲಾಗಿದ್ದು ಸದರಿ ಗ್ರಾಮಸ್ಥರು ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಪ್ರತಿನಿತ್ಯ ಗ್ರಾಮ ಪಂಚಾಯಿತಿಯಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೆಂಪಯ್ಯನಹಟ್ಟಿ ಗ್ರಾಮಕ್ಕೆ ಹೊಂದಿಕೊಂಡಿರುವ ಆಂಜನೇಯನದೊಡ್ಡಿ ಗ್ರಾಮದಲ್ಲಿರುವ ಸುಮಾರು 25 ರಿಂದ 30 ಮನೆಗಳಿಗೆ ವಾರದಲ್ಲಿ ಎರಡು ದಿನ ನೀರು ಸರಬರಾಜು ಮಾಡುತ್ತಿರುವುದಾಗಿ ಗ್ರಾಮಸ್ಥರು ಭೇಟಿ ಸಮಯದಲ್ಲಿ ತಿಳಿಸಿದರು. ಈ ಸಂಬಂಧ ಪ್ರತಿದಿನ ಅಥವಾ ಎರಡು ದಿನಕ್ಕೊಮ್ಮೆ ಕಡ್ಡಾಯವಾಗಿ ನೀರು ಸರಬರಾಜು ಮಾಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪ್ರಸ್ತುತ ಹನೂರು ತಾಲೂಕು ವ್ಯಾಪ್ತಿಯಲ್ಲಿ ಮಳೆಯ ಅಭಾವವಿರುವುದರಿಂದ ಅಂತರ್ಜಲ ಮಟ್ಟವು ಕುಸಿದಿರುವುದರಿಂದ ಮಳೆನೀರಿನ ಕೊಯ್ಲು, ಇಂಗುಗುಂಡಿ, ಚೆಕ್ ಡ್ಯಾಂ, ಕೆರೆಗಳ ಪುನಶ್ಚೇತನ ಕಾಮಗಾರಿ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ತೆಗೆದುಕೊಂಡು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಇಲಾಖಾ ಅಧಿಕಾರಿಗಳಿಗೆ ನಿದೇರ್ಶನ ನೀಡಿದರು.

ಮುಖ್ಯಮಂತ್ರಿಯವರಿಗೆ ಪತ್ರ ಬರೆದ ಮಕ್ಕಳ ಪೋಷಕರು ನಮ್ಮ ಗ್ರಾಮದಲ್ಲಿ ಮಳೆಯ ಕೊರತೆಯಿಂದ ನೀರಿನ ಅಂತರ್ಜಲದ ಮಟ್ಟ ಕುಸಿದಿದ್ದು, ಕೃಷಿ ಚಟುವಟಿಕೆಗೆ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಹೀಗಾಗಿ ರಾಮಾಪುರ ವ್ಯಾಪ್ತಿಯಲ್ಲಿ ಬರುವ ಕೆರೆ ಮತ್ತು ಹಳ್ಳಗಳಿಗೆ ನೀರು ತುಂಬಿಸುವ ಕೆಲಸವಾಗಬೇಕು ಎಂದು ಪೋಷಕರು ಮನವಿ ಮಾಡಿದರು.

ಪೋಷಕರ ಮನವಿಯನ್ನು ಆಲಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತದನಂತರ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅನುಷ್ಟಾನಗೊಂಡಿರುವ ಕುಡಿಯುವ ನೀರಿನ ಪರಿಶೀಲನೆ ನಡೆಸಿದರು. ಲೋಪದೋಷಗಳು ಕಂಡುಬಂದರೆ ತ್ವರಿತವಾಗಿ ಸರಿಪಡಿಸುವಂತೆ ಹನೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಸವರಾಜು ಅವರ ಜಮೀನಿನ ಬೋರ್‌ವೆಲ್‌ನಿಂದ ಪಳನಿಮೇಡು ಗ್ರಾಮದ ಜನರಿಗೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವ ಹಿನ್ನಲೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಮೀನಿನ ಬೋರ್‌ವೆಲ್ ಪರಿಶೀಲಿಸಿದರು. ಸಂಬಂಧಪಟ್ಟವರಿಗೆ ಸರಿಯಾದ ಸಮಯಕ್ಕೆ ಹಣವನ್ನು ಪಾವತಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ತದನಂತರ ಕೆಂಪಯ್ಯನಹಟ್ಟಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ಈ ಬಾರಿ ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮವಹಿಸಬೇಕು. ವಿಶೇಷ ತರಗತಿಗಳನ್ನು ನಡೆಸಿ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಬೇಕು. ಆದಷ್ಟೂ ಬೇಗ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು. ಇದೇ ವೇಳೆ ಮೋನಾ ರೋತ್ ಅವರು ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟವನ್ನು ಮಕ್ಕಳ ಜೊತೆ ಸವಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದವರೊಂದಿಗೆ ಮಾತನಾಡಿ, ನರೇಗಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ಮಾಡಿದರು.ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆರ್.ಉಮೇಶ್, ದೊಡ್ಡಾಲತ್ತೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೆಲ್ವ ರಾಜ್ ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ