ಜಿಲ್ಲಾಸ್ಪತ್ರೆಯಲ್ಲಿ ಸುಟ್ಟಗಾಯಕ್ಕಿಲ್ಲ ಚಿಕಿತ್ಸೆ

KannadaprabhaNewsNetwork | Published : Nov 17, 2023 6:45 PM

ಸಾರಾಂಶ

ಸುಟ್ಟ ಗಾಯಗಳ ಚಿಕಿತ್ಸಾ ವಿಭಾಗ ಬಂದ್ । ರೋಗಿಯನ್ನು ಬೆಂಗಳೂರಿಗೆ ಕಳಿಸಿದ ಶಾಸಕ ಕೆ.ಎಸ್.ಬಸವಂತಪ್ಪ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೊರೋನಾ ಮಹಾಮಾರಿ ನಂತರ ಜಿಲ್ಲಾಸ್ಪತ್ರೆಯಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ವಿಭಾಗ ಬಂದ್ ಮಾಡಿದ್ದರಿಂದ ಬಿಸಿ ನೀರು ಬಿದ್ದು ಗಾಯಗಳಾಗಿದ್ದ 2 ವರ್ಷದ ಮಗುವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಲ್ಲದ್ದೇ, ಸುಟ್ಟ ಗಾಯಗಳ ವಿಭಾಗ ಆರಂಭಿಸುವಂತೆ ಜಿಲ್ಲಾಸ್ಪತ್ರೆ ಅಧೀಕ್ಷಕರಿಗೆ ಮಾಯಕೊಂಡ ಶಾಸಕ ಕೆ.ಎಸ್‌.ಬಸವಂತಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ತಾಲೂಕಿನ ಕೋಲ್ಕುಂಟೆ ಗ್ರಾಮದ ಬಸವರಾಜ, ಅಂಜಿನಮ್ಮ ದಂಪತಿಯ 2 ವರ್ಷದ ಮಗು ಮೈಲಾರಿ ಆಕಸ್ಮಿಕವಾಗಿ ಸುಡುವ ನೀರು ಮೈಮೇಲೆ ಬಿದ್ದ ಪರಿಣಾಮ ಗಾಯಗಳಾಗಿದ್ದವು. ಬಡ ದಂಪತಿ ಮಗುವನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತಂದರೆ ಇಲ್ಲಿ ಕೊರೋನಾ ಬಂದಾಗಿನಿಂದಲೂ ಸುಟ್ಟ ಗಾಯಗಳ ವಿಭಾಗ ಕಾರ್ಯ ನಿರ್ವಹಿಸುತ್ತಿಲ್ಲವೆಂಬ ಉತ್ತರ ಸಿಕ್ಕಿದೆ.

ಪ್ರಾಥಮಿಕ ಚಿಕಿತ್ಸೆಯನ್ನು ಮಗುವಿಗೆ ನೀಡಿ, ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಲಾಗಿದೆ. ಬಡ ದಂಪತಿ ಕೈಯಲ್ಲಿ ನಯಾಪೈಸೆ ಇಲ್ಲದೇ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ವಿಷಯ ತಿಳಿದ ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಆಸ್ಪತ್ರೆಗೆ ದಾವಿಸಿ, ಮಗುವಿನ ಹೆತ್ತವರಿಗೆ ಧೈರ್ಯ ಹೇಳಿದ್ದಾರೆ. ತಾವೇ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಲ್ಲದೇ, ಬೆಂಗಳೂರಿನಂತಹ ದೊಡ್ಡ ಊರಿನಲ್ಲಿ ಮಗುವಿನ ಚಿಕಿತ್ಸೆಗೆ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿ, ಕೈಯಲ್ಲಿ 10 ಸಾವಿರ ರು. ಕೊಟ್ಟು ಕಳಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಅಂಬ್ಯುಲೆನ್ಸ್ ನಲ್ಲಿ ಬೆಂಗಳೂರಿಗೆ ಕಳಿಸಿಕೊಟ್ಟ ಶಾಸಕ ಕೆ.ಎಸ್.ಬಸವಂತಪ್ಪ ಅಲ್ಲಿನ ವೈದ್ಯರಿಗೆ ಮೊಬೈಲ್ ಮೂಲಕ ಮಾತನಾಡಿ, ಉತ್ತಮ ಚಿಕಿತ್ಸೆ ನೀಡುವಂತೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಪಡಿತರ ಚೀಟಿ ಇರುವ ಬಡ ಕುಟುಂಬಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಇದೆ. ಆದರೆ, ಈ ಕುಟುಂಬಕ್ಕೆ ಕಾರ್ಡ್ ಇಲ್ಲ. ಮಗುವಿನ ಚಿಕಿತ್ಸೆಗೆ ಹಣವೂ ಇರಲಿಲ್ಲ. ಹಾಗಾಗಿ ನಾನೇ ಕೈಯಲ್ಲೊಂದಿಷ್ಟು ಹಣ ಕೊಟ್ಟು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿಕೊಟ್ಟೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲಾಸ್ಪತ್ರೆ ಸುಟ್ಟಗಾಯ ವಿಭಾಗ ಪುನಾರಂಭಿಸಿ

ಕೊರೋನಾ ಹೋದರೂ ಆರಂಭವಾಗದ ವಾರ್ಡ್‌ ಬಗ್ಗೆ ಬಸವಂತಪ್ಪ ಕಿಡಿ

ದಾವಣಗೆರೆ: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಬಂದು, ಹೋಗಿ ವರ್ಷಗಳೇ ಕಳೆದರೂ ಇನ್ನೂ ಸುಟ್ಟ ಗಾಯಗಳ ವಿಭಾಗ ತೆರೆಯದ ಬಗ್ಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಆಸ್ಪತ್ರೆ ಅಧೀಕ್ಷಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರದ ಜಿಲ್ಲಾಸ್ಪತ್ರೆಯಲ್ಲಿ ಆಸ್ಪತ್ರೆ ಅಧೀಕ್ಷಕರು, ವೈದ್ಯರು, ಸಿಬ್ಬಂದಿ ತುರ್ತು ಸಭೆ ನಡೆಸಿದ ಶಾಸಕ ಬಸವಂತಪ್ಪ, ಕೋವಿಡ್ ಕಾಲದಲ್ಲಿ ಮುಚ್ಚಿದ್ದ ಸುಟ್ಟ ಗಾಯಗಳ ವಿಭಾಗವನ್ನು ಯಾಕೆ ಇನ್ನೂ ತೆರೆದಿಲ್ಲ? ಸುಟ್ಟ ಗಾಯವಾದವರಿಗೆ ಯಾಕೆ ಅಲ್ಲಿ ಇನ್ನೂ ಚಿಕಿತ್ಸೆ ಶುರು ಮಾಡಿಲ್ಲ ಎಂದು ಪ್ರಶ್ನಿಸಿದರು.

ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲ, ಐಸಿ ವಾರ್ಡ್ ಇಲ್ಲ. ಹೀಗಾದರೆ ರೋಗಿಗಳನ್ನು ಕಾಪಾಡುವುದಾದರೂ ಹೇಗೆ ಸಾಧ್ಯ? ತಕ್ಷಣವೇ ಸುಟ್ಟಗಾಯಗಳ ವಿಭಾಗದಲ್ಲಿ ವೆಂಟಿಲೇಟರ್ ಸಂಖ್ಯೆ ಹೆಚ್ಚಿಸಬೇಕು. ಐಸಿಯು ವಾರ್ಡ್ ಸೌಲಭ್ಯ ಕಲ್ಪಿಸಬೇಕು. ಯಾವುದೇ ಬಡ ರೋಗಿಗಳು ಆಸ್ಪತ್ರೆಗೆ ಬಂದರೆ ಇಲ್ಲಿ ಪರದಾಡುವ ಸ್ಥಿತಿ ನಿರ್ಮಾಣ ಮಾಡದೇ, ತಕ್ಷಣವೇ ಸ್ಪಂದಿಸಿ, ಸೂಕ್ತ ಚಿಕಿತ್ಸೆ ನೀಡಿ. ಚಿಕಿತ್ಸೆ ಬಯಸಿ ಬಂದವರನ್ನು ಗುಣಮುಖರಾಗಿ ಮನೆಗೆ ಕಳಿಸಿ ಕೊಡಿ ಎಂದು ಅವರು ಕಿವಿಮಾತು ಹೇಳಿದರು.

ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ, ವೈದ್ಯರು ಇಲ್ಲ, ಸಿಬ್ಬಂದಿ ಸ್ಪಂದಿಸುತ್ತಿಲ್ಲ, ಸೌಲಭ್ಯವಿಲ್ಲವೆಂದು ರೋಗಿಗಳು, ರೋಗಿಗಳ ಕಡೆ ಯವರು ಶಾಸಕರಿಗೆ, ಸಚಿವರಿಗೆ ಕರೆ ಮಾಡುವಂತಹ ಸನ್ನಿವೇಶ ಮತ್ತೆ ಸೃಷ್ಟಿ ಮಾಡಬಾರದು. ತಕ್ಷಣದಿಂದಲೇ ಆಸ್ಪತ್ರೆಯ ಎಲ್ಲಾ ಅವ್ಯವಸ್ಥೆಯನ್ನು ಸರಿಪಡಿಸಿ, ರೋಗಿಗಳಿಗೆ ಸ್ಪಂದಿಸುವ ಕೆಲಸ ಆಗಬೇಕು. ಇಲ್ಲಿನ ಚಿಕಿತ್ಸೆ, ಆರೈಕೆಯಿಂದ ಗುಣಮುಖರಾದವೆಂದು ಜನ ಹೇಳುವಂತಹ ವಾತಾವರಣ ನಿರ್ಮಾಣ ಆಗಬೇಕು.

ಕೆ.ಎಸ್.ಬಸವಂತಪ್ಪ

ಶಾಸಕ, ಮಾಯಕೊಂಡ ಕ್ಷೇತ್ರ

Share this article