ಹಾನಗಲ್ಲ: ಕೇಸರಿ, ಬಿಳಿ, ಹಸಿರು ಬಣ್ಣಗಳ ಆಧಾರದಲ್ಲಿ ಸಮಾಜ ಒಡೆಯುವ ಷಡ್ಯಂತ್ರಕ್ಕೆ ಯುವ ಸಮೂಹ ಬಲಿಯಾಗಬಾರದು. ಎಲ್ಲ ಧರ್ಮಗಳ ಸಾರವೂ ಒಂದೇ. ಶರಣರು, ಸಂತರು, ಸೂಫಿಗಳೆಲ್ಲರೂ ಸಮಾನತೆಯ ಸಂದೇಶ ಸಾರಿದ್ದಾರೆ. ಯಾವುದೇ ಧಾರ್ಮಿಕ ವೇದಿಕೆ, ಪ್ರವಚನಗಳಲ್ಲಿ ಸಹ ಮಾನವೀಯ ಮೌಲ್ಯಗಳನ್ನೇ ಬೋಧಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಮಾನವ ಧರ್ಮಕ್ಕೆ ಜಯವಾಗಬೇಕು. ಆ ಮಾರ್ಗದಲ್ಲಿಯೇ ಪ್ರತಿಯೊಬ್ಬರೂ ನಡೆಯಬೇಕು. ಹಾನಗಲ್ ಮಣ್ಣಿಗೆ ವಿಶೇಷ ಇತಿಹಾಸವಿದೆ. ಲಿಂ.ಕುಮಾರ ಸ್ವಾಮೀಜಿ ೧೨ನೇ ಶತಮಾನದ ಬಸವಣ್ಣನವರ ನಂತರ ಸಮ ಸಮಾಜದ ಪರಿಕಲ್ಪನೆಯನ್ನು ಸಮುದಾಯದಲ್ಲಿ ಬಿತ್ತಿದರು. ಶಿವಯೋಗ ಮಂದಿರ, ಅಖಿಲ ಭಾರತ ವೀರಶೈವ ಮಹಾಸಭೆಯ ಮೂಲಕ ಧಾರ್ಮಿಕ ಜಾಗೃತಿ ಮೂಡಿಸಿದರು. ಆ ಪುಣ್ಯ ಪರಂಪರೆಯ ಮುಂದುವರೆದ ಭಾಗವಾಗಿ ಬಾಳೂರಿನ ಅಡವಿಸ್ವಾಮಿ ಮಠ ಧಾರ್ಮಿಕ ಮಾರ್ಗದರ್ಶನ ಮಾಡುತ್ತಿದೆ. ಮಠದ ಈಗಿನ ಪೀಠಾಧ್ಯಕ್ಷರಾದ ಕುಮಾರ ಸ್ವಾಮೀಜಿ ಜಪ, ತಪ, ಅನುಷ್ಠಾನಗಳ ಮೂಲಕ ಭಕ್ತರನ್ನು ಉದ್ಧರಿಸುತ್ತಾ ಬಂದಿದ್ದಾರೆ. ಈಗ ಪಟ್ಟಾಧಿಕಾರ ಹೊಂದುತ್ತಿರುವ ಗುರುಪ್ರಸಾದ ದೇವರ ಶ್ರೀಮಠದ ಪರಂಪರೆ ಮುಂದುವರೆಸಿಕೊಂಡು ಹೋಗಲು ಸನ್ನದ್ಧರಾಗಿದ್ದಾರೆ ಎಂದರು. ಹಾವೇರಿಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್ ಪದವಿ ಪಡೆದ ಹಿನ್ನೆಲೆಯಲ್ಲಿ ಅಭಿನಂದನೆ ಸ್ವೀಕರಿಸಿದ ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಕನ್ನಡ ನಾಡಿನ ಮಠಗಳು ಸಮಾಜದ ಅವಿಭಾಜ್ಯ ಅಂಗ. ಸಮಾಜ ಮತ್ತು ಸಮಾಜ ಬಾಂಧವರ ಸಹಕಾರವಿದ್ದರೆ ಮಾತ್ರ ಮಠಗಳು ಬೆಳೆದು, ಸಮಾಜಕ್ಕೆ ಬೆಳಕಾಗಲಿವೆ. ಬಾಳೂರಿನ ಅಡವಿಸ್ವಾಮಿ ಮಠದ ಕುಮಾರ ಸ್ವಾಮೀಜಿ ಸ್ವಾಮಿತ್ವದ ಗೌರವ ಹೆಚ್ಚಿಸಿದ್ದಾರೆ. ತಮ್ಮ ನಡೆ, ನುಡಿಗಳಿಂದ ಆದರ್ಶರಾಗಿದ್ದಾರೆ ಎಂದು ಹೇಳಿದ ಅವರು, ಶಾಸಕ ಶ್ರೀನಿವಾಸ ಮಾನೆ ಅವರು ಹಲವಾರು ಮಹತ್ವದ ನಿರ್ಣಯಗಳ ಮೂಲಕ ರಾಜಕಾರಣಿಗಳಿಗೆ ಮಾದರಿ ಎನಿಸಿದ್ದಾರೆ. ಸನ್ಮಾನ ಸ್ವೀಕರಿಸುವ ಬದಲಿಗೆ ಶಾಲು, ಮಾಲೆ, ನೆನಪಿನ ಕಾಣಿಕೆಗೆ ಖರ್ಚು ಮಾಡದೇ ಅದೇ ಹಣವನ್ನು ಸರ್ಕಾರಿ ಶಾಲೆಗಳಿಗೆ ನೀಡಿ ಎನ್ನುವ ನಿರ್ಣಯವನ್ನು ರಾಜ್ಯದ ಎಲ್ಲರೂ ಪಾಲಿಸಿದರೆ ಇಡೀ ದೇಶಕ್ಕೆ ಒಳ್ಳೆ ಸಂದೇಶ ನೀಡಿದಂತಾಗಲಿದೆ ಎಂದರು. ಅಡವಿಸ್ವಾಮಿ ಮಠದ ಕುಮಾರ ಸ್ವಾಮೀಜಿ ಮಾತನಾಡಿ, ಮನದ ಅಜ್ಞಾನ-ಅಂಧಕಾರ ದೂರವಾಗಬೇಕಿದೆ. ತಪ್ಪಿ ನಡೆದಾಗ ತಿದ್ದಿ ಬುದ್ಧಿ ಹೇಳುವ ನಿಷ್ಠುರತೆ ಪ್ರತಿಯೊಬ್ಬರೂ ಸಹ ಪ್ರದರ್ಶಿಸಿದರೆ ಸಾಮಾಜಿಕ ಪರಿವರ್ತನೆಯ ಗಾಳಿ ಬೀಸಲಿದೆ. ಸಮಾಜ ತಿಳಿ ಆಗದೇ ಇದ್ದರೆ ಕೌಟುಂಬಿಕ ಸ್ವಾಸ್ಥ್ಯವೇ ಹದಗೆಡಲಿದೆ ಎಂದರು. ಸೂಗೂರಿನ ಸಂಸ್ಥಾನ ಹಿರೇಮಠದ ಡಾ. ಚನ್ನರುದ್ರಮುನಿ ಸ್ವಾಮೀಜಿ ಪ್ರವಚನ ಹೇಳಿದರು. ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಹತ್ತಿಮತ್ತೂರಿನ ವಿರಮಠದ ನಿಜಗುಣಿ ಸ್ವಾಮೀಜಿ, ಗುರುಪ್ರಸಾದ ದೇವರು, ವಿನಾಯಕ ದೇವರು, ನೇತೃತ್ವ, ಅಖಿಲ ಭಾರತ ವೀರಶೈವ ಮಹಾಸಭೆಯ ತಾಲೂಕಾಧ್ಯಕ್ಷ ಶಿವಕುಮಾರ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಹಾವೇರಿಯ ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಮುಖಂಡರಾದ ಈರಣ್ಣ ಬೈಲವಾಳ, ರಾಜಣ್ಣ ಅಂಕಸಖಾನಿ, ಷಣ್ಮುಖಪ್ಪ, ಉದಯಕುಮಾರ ವಿರಪಣ್ಣನವರ ಇದ್ದರು.