ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಬಾರದು: ಜಿಲ್ಲಾಧಿಕಾರಿ ಜಿ.ಪ್ರಭು

KannadaprabhaNewsNetwork |  
Published : Apr 16, 2026, 01:15 AM IST
ಸಿಕೆಬಿ-3 ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ  ನಡೆದ “ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ”ಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿದರು | Kannada Prabha

ಸಾರಾಂಶ

ಗ್ರಾಮಾಂತರ ಪ್ರದೇಶ ಹಾಗೂ ನಗರ ಪ್ರದೇಶದ ಯಾವುದೇ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಕಂಡು ಬಂದರೆ ತುರ್ತು ಕ್ರಮವಾಗಿ ಕೂಡಲೆ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲು ಕ್ರಮ ವಹಿಸಬೇಕು.

ಯಾವುದೇ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಕ್ರಮವಹಿಸಲು ಸೂಚನೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕುಡಿಯುವ ನೀರಿನ ಪೂರೈಕೆಯಲ್ಲಿ ಯವುದೇ ಕಾರಣಕ್ಕೂ ಜಿಲ್ಲೆಯಲ್ಲಿ ವ್ಯತ್ಯಯ ಆಗಬಾರದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶ ಹಾಗೂ ನಗರ ಪ್ರದೇಶದ ಯಾವುದೇ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಕಂಡು ಬಂದರೆ ತುರ್ತು ಕ್ರಮವಾಗಿ ಕೂಡಲೆ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲು ಕ್ರಮ ವಹಿಸಬೇಕು. ಬೇಸಿಗೆಯ ತೀವ್ರತೆ ಹೆಚ್ಚುತ್ತಿದ್ದು, ಯಾವ ಕೊಳವೆ ಬಾವಿ ನೀರು ಯಾವ ಸಂದರ್ಭದಲ್ಲಿ ನಿಂತು ಹೋಗಲಿದೆ ಹೇಳಲಿಕ್ಕೆ ಆಗುವುದಿಲ್ಲ.

ಆದ್ದರಿಂದ ಟ್ಯಾಂಕರ್ ಮೂಲಕವಾಗಲಿ ಅಥವಾ ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಸುವ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು. ಆ ನಂತರ ಜಲಜೀವನ್ ಮಿಷನ್ ಯೋಜನೆಯಡಿ ಅಥವಾ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಅನುಮೋದನೆ ಪಡೆದುಕೊಂಡು ಕೊಳವೆ ಬಾವಿ ಕೊರೆದು ನೀರಿನ ಸಮಸ್ಯೆ ನೀಗಿಸಬೇಕು. ಈ ನಿಟ್ಟಿನಲ್ಲಿ ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಹಣಾಧಿಕಾರಿಗಳು, ನಗರಾಡಳಿತ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು ಹಾಗೂ ತಾಲೂಕು ತಹಸೀಲ್ದಾರರು ಹೆಚ್ಚಿನ ನಿಗಾವಹಿಸಿ ದಿನ ನಿತ್ಯದ ನೀರಿನ ಪೂರೈಕೆ ಬಗ್ಗೆ ಮಾಹಿತಿ ಪಡೆಯಬೇಕು ಎಂದರು.ಪ್ರಸ್ತುತ ಚಿಕ್ಕಬಳ್ಳಾಪುರ ತಾಲೂಕಿನ ಕವರನಹಳ್ಳಿ, ಕಣಿತಹಳ್ಳಿ, ನಕ್ಕಲಹಳ್ಳಿ ಮತ್ತು ಮಧುರೇನಹಳ್ಳಿ. ಚಿಂತಾಮಣಿ ತಾಲೂಕಿನ ಗೌಡನಹಳ್ಳಿ, ಶೆಟ್ಟಿಹಳ್ಳಿ, ಮಲ್ಕಪುರ ಮತ್ತು ಕೃಷ್ಣಮ್ಮನ ಹೊಸಹಳ್ಳಿ, ಬಾಗೇಪಲ್ಲಿ ತಾಲೂಕಿನ ಚಾಮಲವಾರಿಪಲ್ಲಿ, ಯಲಗಲಪಲ್ಲಿ, ವೀರಾಪುರ, ಮಲ್ಲೆಪಲ್ಲಿ ಮತ್ತು ಗಂಗರೆಡ್ಡಿಪಲ್ಲಿ. ಶಿಡ್ಲಘಟ್ಟ ತಾಲೂಕಿನ ವಲ್ಲಪ್ನಹಳ್ಳಿ, ಚೀಮಂಗಲ, ಹೇಮಾರ್ಲಹಳ್ಳಿ, ಜಂಗಮಕೋಟೆ, ಭಕ್ತರಹಳ್ಳಿ, ಪಲಿಚೆರ್ಲು, ತದೂರು ಮತ್ತು ಮುಗಲಪಡಿ. ಗೌರಿಬಿದನೂರು ತಾಲೂಕಿನ ಸಿದ್ದೇನಹಳ್ಳಿ. ಗುಡಿಬಂಡೆ ತಾಲೂಕಿನ ಚಿನ್ನಹಳ್ಳಿ ಸೇರಿದಂತೆ ಒಟ್ಟು 23 ಗ್ರಾಮಗಳಿಗೆ ಕುಡಿಯುವ ನೀರನ್ನು ಖಾಸಗಿ ಕೊಳವೆ ಬಾವಿಗಳ ಮಾಲೀಕರ ಸಹಕಾರ ಪಡೆದು ನೀರು ಪೂರೈಸಲಾಗುತ್ತಿದೆ. ಬಾಗೇಪಲ್ಲಿ ತಾಲೂಕಿನ ಮಲ್ಲೆಪಲ್ಲಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಪ್ರಸ್ತುತ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ ಗ್ರಾಮಗಳನ್ನು ಮುನ್ನೆಚ್ಚರಿಕೆಯಾಗಿ ಗುರ್ತಿಸಲು ನಿರಂತರ ನಿಗಾ ಇಡಲು ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚಿಸಿದರು.ಇನ್ನೂ ನಗರ ಪ್ರದೇಶ ವ್ಯಾಪ್ತಿಯಲ್ಲಿ ಗೌರಿಬಿದನೂರು ನಗರದ 4 ವಾರ್ಡ್‌ಗಳು, ಶಿಡ್ಲಘಟ್ಟ ನಗರದ 6 ವಾರ್ಡ್‌ಗಳು, ಚಿಂತಾಮಣಿಯ 4 ವಾರ್ಡ್‌ಗಳು ಹಾಗೂ ಬಾಗೇಪಲ್ಲಿಯ 4 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸದ್ಯಕ್ಕೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ನಗರ ಪ್ರದೇಶ ವ್ಯಾಪ್ತಿಯಲ್ಲಿ ಈ ವರೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಪರಿಸ್ಥಿತಿ ಎದುರಾಗಿಲ್ಲ ಎಂದು ತಿಳಿಸಿದರು.ಈ ವೇಳೆ ಜಿಪಂ ಸಿಇಒ ಡಾ. ವೈ.ನವೀನ್ ಭಟ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಎಲ್ಲ ತಾಲೂಕುಗಳ ತಹಸೀಲ್ದಾರರು, ಎಲ್ಲಾ ತಾಪಂ ಇಒಗಳು, ನಗರಾಡಳಿತ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು ಇದ್ದರು. ಸಿಕೆಬಿ-3 ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ “ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ”ಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ವರದಾನ
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೆರೆಗಳ ಪಾತ್ರ ಅತಿಮುಖ್ಯ