ಸಹಕಾರಿ ಸಂಘಗಳಲ್ಲಿ ರಾಜಕಾರಣ ಇರಬಾರದು: ಶಾಸಕ ಭೀಮಾನಾಯ್ಕ

KannadaprabhaNewsNetwork | Published : Nov 24, 2024 1:47 AM

ಸಾರಾಂಶ

ಅಡಕೆಗೆ ಹಲವು ಬಗೆಯ ರೋಗಗಳು ಬರುತ್ತಿದ್ದು, ಇದರಿಂದ ಅಡಕೆ ಮರಗಳು ನಾಶವಾಗುವ ಭೀತಿ ಕಾಡುತ್ತಿದೆ. ಅದಕ್ಕೆ ಕೇಂದ್ರ ಸರ್ಕಾರ ಸಮರ್ಪಕ ಔಷಧ ಸಂಶೋಧಿಸಲು ಕ್ರಮ ವಹಿಸಬೇಕು.

ಸಿದ್ದಾಪುರ:

ರಾಜ್ಯದಲ್ಲೇ ನಮ್ಮ ಜಿಲ್ಲೆಯ ಸಹಕಾರಿ ಸಂಘಗಳು ಮುಂಚೂಣಿಯಲ್ಲಿವೆ. ಬಡವರ, ನೊಂದವರ ನೆರವಿಗೆ ಸದಾ ಸಿದ್ಧವಿದೆ. ಸಂಘಗಳು ಸದೃಢವಾಗಲು ಸರ್ವಸದಸ್ಯರ ಸಹಕಾರ ಅತ್ಯಗತ್ಯ. ಸಂಘಗಳಲ್ಲಿ ರಾಜಕಾರಣದ ಕಪ್ಪುಚುಕ್ಕೆ ಬರಬಾರದು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಅವರು ತಾಲೂಕಿನ ಲಂಬಾಪುರದ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡದಲ್ಲಿ ಸೂಪರ್ ಮಾರ್ಕೆಟ್ ಉದ್ಘಾಟಿಸಿ ಮಾತನಾಡಿ, ಹಲವು ಹಿರಿಯರ ಪರಿಶ್ರಮದಿಂದ ಇಲ್ಲಿಯ ಸಹಕಾರಿ ಸಂಘವು ಅತ್ಯುತ್ತಮವಾಗಿ ಬೆಳೆದುಬಂದು, ಸದಸ್ಯರಿಗೆ ಆರ್ಥಿಕ ಸಹಕಾರದ ಜತೆಗೆ ನಿತ್ಯೋಪಯೋಗಿ ವಸ್ತುಗಳನ್ನು ಒದಗಿಸುವ ಕಾರ್ಯಮಾಡುತ್ತ ಬಂದಿದೆ. ಹೀಗೆಯೇ ಮುಂದೆಯೂ ಅಭಿವೃದ್ಧಿಹೊಂದಲಿ ಎಂದರು.

ಅಡಕೆಗೆ ಹಲವು ಬಗೆಯ ರೋಗಗಳು ಬರುತ್ತಿದ್ದು, ಇದರಿಂದ ಅಡಕೆ ಮರಗಳು ನಾಶವಾಗುವ ಭೀತಿ ಕಾಡುತ್ತಿದೆ. ಅದಕ್ಕೆ ಕೇಂದ್ರ ಸರ್ಕಾರ ಸಮರ್ಪಕ ಔಷಧ ಸಂಶೋಧಿಸಲು ಕ್ರಮ ವಹಿಸಬೇಕು. ನಮ್ಮಲ್ಲಿ ಗುಣಮಟ್ಟದ ಅಡಕೆ ಬೆಳೆದರೂ ಹೊರರಾಷ್ಟ್ರಗಳಿಂದ ಅಡಕೆ ಆಮದು ಮಾಡಿಕೊಳ್ಳುವ ಕಾರಣ ಅಡಕೆ ದರ ಕುಸಿಯುತ್ತಿದೆ. ಹೀಗಾದರೆ ಬೆಳೆಗಾರರ ಗತಿಯೇನು? ಬೆಟ್ಟ ಪ್ರದೇಶ ಬೆಳೆಗಾರರರಿಂದ ಕೈತಪ್ಪುವ ಸಾಧ್ಯತೆ ಇದೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ರೈತರು ಬದುಕುವುದು ಕಷ್ಟವಾಗುತ್ತದೆ. ಈ ಎಲ್ಲ ಸಮಸ್ಯೆ ಹಾಗೂ ಅತಿಕ್ರಮಣ ಸಕ್ರಮವಾಗುವ ಬಗ್ಗೆ ಸಂಸದರು ಅಧಿವೇಶನದಲ್ಲಿ ಗಮನ ಸೆಳೆಯಬೇಕು ಹಾಗೂ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಬೇಕು ಎಂದು ಭೀಮಣ್ಣ ನಾಯ್ಕ ಹೇಳಿದರು.

ಸಂಘದ ಸಭಾಭವನ ಉದ್ಘಾಟಿಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಹಕಾರ ಸಂಘಗಳು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾಗಿರದೇ ಕೌಟುಂಬಿಕ, ಭಾವನಾತ್ಮಕ ಸಂಬಂಧಗಳನ್ನೂ ಒಳಗೊಂಡಿವೆ. ಜಿಲ್ಲೆಯ ಸಹಕಾರಿ ಪ್ರಾವಿತ್ಯತೆ ಬೆಳೆಸುವ ನಿಶ್ಚಯ ನಮ್ಮಲ್ಲಿರಬೇಕು. ಸರ್ಕಾರಿ ಹಸ್ತಕ್ಷೇಪವಾದರೆ ಸಹಕಾರಿ ತತ್ವಕ್ಕೆ ಧಕ್ಕೆಯಾಗುತ್ತದೆ ಎಂದರು.

ಕಸ್ತೂರಿ ರಂಗನ್ ವರದಿಯಾಗಲೀ, ಅತಿಕ್ರಮಣ ಸಮಸ್ಯೆಯಾಗಲೀ ಜನಜೀವನಕ್ಕೆ ಕೆಟ್ಟ ಪರಿಣಾಮ ಆಗದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ನಿಮ್ಮ ಜತೆಗಿರುತ್ತದೆ. ಅಡಕೆಗೆ ಪ್ರಾಕೃತಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳಿವೆ. ಕೇಂದ್ರ ಸರ್ಕಾರ ಹೊರದೇಶದಿಂದ ಆಮದಾಗುವ ಅಡಕೆಗೆ ತೆರಿಗೆ ಹೆಚ್ಚಿಸಿ ಕ್ರಮ ತೆಗೆದುಕೊಂಡಿದೆ. ಕದ್ದು ತರುವ ಅಡಕೆಯನ್ನು ಇಲ್ಲಿನ ಅಡಕೆ ಜತೆಗೆ ಬೆರೆಸಿ ಮಾರಾಟಮಾಡುತ್ತಿರುವುದರಿಂದ ದರ ಏರಿಳಿತವಾಗುತ್ತಿದೆ. ರಾಜ್ಯ ಸರ್ಕಾರ ಅಡಕೆ ಹಾನಿಕರ ಅಲ್ಲ ಎನ್ನುವುದನ್ನು ವಿಜ್ಞಾನಿ, ತಜ್ಞರ ಮೂಲಕ ವರದಿಯನ್ನು ಕೇಂದ್ರಕ್ಕೆ ತಲುಪಿಸಬೇಕು. ಬೆಳಗಾವಿ ಅಧಿವೇಶನದಲ್ಲಿ ಅಡಕೆ ಬೆಳೆಯುವ ಭಾಗದ ಎಲ್ಲ ಶಾಸಕರು ಒಟ್ಟಾಗಿ ಈ ಎಲ್ಲದರ ಕುರಿತು ಚರ್ಚಿಸುವಂತಾಗಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಐ. ನಾಯ್ಕ ಕೆಳಗಿನಸಸಿ ಪ್ರಾಸ್ತಾವಿಕ ಮಾತನಾಡಿ, ಸಂಘ ಬೆಳೆದುಬಂದ ದಾರಿಯನ್ನು ವಿವರಿಸಿದರು. ಟಿಎಂಎಸ್ ಅಧ್ಯಕ್ಷ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಎಂ. ಹೆಗಡೆ ಬಾಳೇಸರ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ, ಟಿ.ಎಂ.ಎಸ್. ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಗ್ರಾಪಂ ಅಧ್ಯಕ್ಷ ಸರಸ್ವತಿ ಗೌಡ, ಸಂಘದ ಉಪಾಧ್ಯಕ್ಷ ಜಿ.ಜಿ. ಭಟ್ಟ, ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಆರ್.ಎಸ್. ಹೆಗಡೆ, ಕಾಲಭೈರವೇಶ್ವರ ದೇವಾಲಯದ ಅಧ್ಯಕ್ಷ ಎನ್.ಡಿ. ನಾಯ್ಕ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಜಿ. ನಾಗರಾಜ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕ ಎಂ.ಎನ್. ಹೆಗಡೆ ತಲೆಕೆರೆ ಸ್ವಾಗತಿಸಿದರು. ವಿನೋದಾ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಆದಿತ್ಯ ಹೆಗಡೆ ಗಣೇಶ ಸ್ತುತಿ ಹಾಡಿದರು.

Share this article