ಹಾಸನ: ಎಲ್ಲಾ ಕಾಲಘಟ್ಟದಲ್ಲಿಯೂ ಮೀರ್ ಸಾಧಿಕ್, ಮಲ್ಲಪ್ಪಶೆಟ್ಟಿ ಅಂತಹವರು ಇದ್ದೇ ಇರುತ್ತಾರೆ. ಸಿದ್ಧರಾಮಯ್ಯನವರು ಮೀರ್ ಸಾಧಿಕ್, ಮಲ್ಲಪ್ಪಶೆಟ್ಟಿ ಅಂತಹವರು ನಮ್ಮಲ್ಲೇ ಇದ್ದಾರೆ ಎಂದು ಹೇಳಿರುವುದು ಈ ಸರ್ಕಾರದ ಬಗ್ಗೆ ಅಲ್ಲ. ಈ ರಾಜಕೀಯ ಸನ್ನಿವೇಶಕ್ಕೆ ಅದನ್ನು ಹೋಲಿಕೆ ಮಾಡಲು ಹೋಗಬೇಡಿ ಎಂದು ಸಹಕಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೆ.ಎನ್.ರಾಜಣ್ಣ ಹೇಳಿದರು.
ಚನ್ನಪಟ್ಟಣದ ಉಪಚುನಾವಣೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡುವ ವಿಚಾರ ಕುರಿತಾಗಿ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ನಿಲ್ಲಿಸುತ್ತಾರೋ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಬಿ ಫಾರಂ ಕೋಡೊರು ಹೈಕಮಾಂಡ್‌ನವರು. ಶಿವಕುಮಾರ್ ಅಪೇಕ್ಷೆ ವ್ಯಕ್ತಪಡಿಸಿದರೆ, ಶಿವಕುಮಾರ್‌ಗೆ ಅವಕಾಶ ಕೊಡಬಹುದು. ಇನ್ನೊಬ್ಬರು ಅಪೇಕ್ಷೆ ವ್ಯಕ್ತಪಡಿಸಿದರೆ ಇನ್ನೊಬ್ಬರಿಗೆ ಕೊಡಬಹುದು. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು, ಅವರ ಜಿಲ್ಲೆಗೆ ಸೇರಿರುವ ಚನ್ನಪಟ್ಟಣ ಕ್ಷೇತ್ರ ಅವರ ಜನಪ್ರಿಯತೆ ಪರೀಕ್ಷೆಗೆ ಒಡ್ಡುತ್ತದೆ. ಚನ್ನಪಟ್ಟಣದ ಉಪಚುನಾವಣೆಯನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಆ ಚುನಾವಣೆ ಗೆಲ್ಲಲು ಎಲ್ಲಾ ಮುಖಂಡರು ಪ್ರಯತ್ನ ಮಾಡುತ್ತೇವೆ. ಚನ್ನಪಟ್ಟಣ ಉಪಚುನಾವಣೆ ಕಾಂಗ್ರೆಸ್ ಪಕ್ಷದ ಮಾನ, ಮರ್ಯಾದೆ, ಗೌರವದ ಪ್ರಶ್ನೆ. ಹಾಗಾಗಿ ಯಾರೇ ನಿಂತರೂ ಕಾಂಗ್ರೆಸ್ ಅಭ್ಯರ್ಥಿ ಎಂದು ತಿಳಿದುಕೊಂಡು ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಪ್ರಶ್ನೆಗೆ, ಸದ್ಯದಲ್ಲಿ ಆಗುತ್ತೆ ಅಂತ ನಾನೇನು ಅಂದುಕೊಂಡಿಲ್ಲ. ಯಾವತ್ತಿದ್ದರೂ ಒಂದು ದಿನ ಬದಲಾವಣೆ ಆಗಬೇಕು. ಯಾವತ್ತೋ ಒಂದು ದಿನ ಬದಲಾವಣೆ ಆಗುತ್ತದೆ. ಈಗ ಸದ್ಯದಲ್ಲಿ ಬದಲಾವಣೆ ಇಲ್ಲ ಅಂತ ಎಂದುಕೊಂಡಿದ್ದೇನೆ ಎಂದರು.ಮುಡಾ ಪ್ರಕರಣ ಕೋರ್ಟ್ ಮುಂದೆ ಇದೆ. ಮುಡಾದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಯಾವ ಹಂತದಲ್ಲೂ ಇಲ್ಲ. ನಿವೇಶನ ಹಂಚಿಕೆ ಆಗುವಾಗ ಇವರು ಅಧಿಕಾರದಲ್ಲಿ ಇರಲಿಲ್ಲ. ವಿರೋಧ ಪಕ್ಷದಲ್ಲಿ ಇದ್ದರು. ಹಾಗಾಗಿ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತೆ ಎಂದು ನಂಬಿದ್ದೇವೆ ಎಂದು ಸಚಿವ ರಾಜಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಪಕ್ಷದ ಅಧ್ಯಕ್ಷರು, ಶಾಸಕರು, ಜೆಡಿಎಸ್, ಕಾಂಗ್ರೆಸ್ ಶಾಸಕರು ಇರುವ ಸಭೆಯಲ್ಲಿ ಸೈಟ್ ಕೊಟ್ಟಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರದ್ದು ಏನಿದೆ. ರಾಜಕೀಯ ದುರುದ್ದೇಶದಿಂದ ರಾಜ್ಯಪಾಲರ ಮೇಲೆ ಪ್ರಭಾವ ಬೀರಿ ಈ ರೀತಿ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರು.ಸಿಎಂ ಕುರ್ಚಿ ಖಾಲಿ ಇದೆಯಾ, ಖಾಲಿ ಇದ್ದರೆ ಕೇಳಬೇಕು. ಸಿಎಂ ಕುರ್ಚಿ ಒಂದೇ ಇರೋದು, ಕುರ್ಚಿ ಭರ್ತಿಯಾಗಿದೆ. ಬಹಳಷ್ಟು ಕುರ್ಚಿಗಳಿದ್ದರೆ ಕೇಳಬಹುದು. ಸಿಎಂ ಕುರ್ಚಿ ಒಂದೇ ಇರೋದು. ಸಿಎಂ ಕುರ್ಚಿ ಖಾಲಿ ಆದ ಮೇಲೆ ಕೇಳಲಿ. ದೇಶಪಾಂಡೆ ಅವರೊಬ್ಬರೆ ಅಲ್ಲಾ ಇರೋದು. ದೇಶಪಾಂಡೆ ಅವರಂತಹ ಆಕಾಂಕ್ಷಿಗಳ ಒಂದು ಪಟ್ಟಿಯೇ ಇದೆ. ಅವರ ಹೇಳಿಕೆಯನ್ನು ಗಮನಿಸಿ, ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದೆ. ಈಗ ಅದರ ಬಗ್ಗೆ ಆಸಕ್ತಿ ಇಲ್ಲ. ಸಿದ್ದರಾಮಯ್ಯ ಒಪ್ಪಿದರೆ ಮುಖ್ಯಮಂತ್ರಿ ಆಗ್ತೀನಿ ಅಂದಿದ್ದಾರೆ. ಸಿದ್ದರಾಮಯ್ಯ ಒಪ್ಪಿದರೆ ಮುಖ್ಯಮಂತ್ರಿ ಆಗ್ತಾರಾ? ಎಂದು ಪ್ರಶ್ನಿಸಿದರು.