ಬಲ್ನಾಡು ಸಮೃದ್ಧಿ ಸಂಜೀವಿನಿ ಒಕ್ಕೂಟದ ಈ ಮಹಿಳೆಯರು ಸ್ವಾವಲಂಬನೆಗೆ ಜೈ, ಜಾಗೃತಿಗೂ ಸೈ...

KannadaprabhaNewsNetwork |  
Published : Jun 27, 2025, 12:49 AM IST
ಇದು ಬಲ್ನಾಡು  ಸಮೃದ್ಧಿ ಸಂಜೀವಿನಿ ಒಕ್ಕೂಟದ ಯಶೋಗಾಥೆ ಇವರು ಸ್ವಾವಲಂಬನೆಗೆ ಜೈ, ಜಾಗೃತಿಗೂ ಸೈ ಎನ್ನುವ ಮಹಿಳೆಯರು | Kannada Prabha

ಸಾರಾಂಶ

ಬಲ್ನಾಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ಆರು ವರ್ಷಗಳ ಹಿಂದೆ ಹುಟ್ಟಿಕೊಂಡ ಸಮೃದ್ಧಿ ಸಂಜೀವಿನಿ ಒಕ್ಕೂಟ ಹಲವು ಸಾಧನೆಗಳಿಂದ ಗುರುತಿಸಿಕೊಂಡಿದೆ.

ಮೌನೇಶ ವಿಶ್ವಕರ್ಮಕನ್ನಡಪ್ರಭ ವಾರ್ತೆ ಪುತ್ತೂರುಆರ್ಥಿಕ ಸಬಲೀಕರಣದ ಜೊತೆಗೆ ಸ್ವಾವಲಂಬಿಯಾಗಿ ಬೆಳೆಯುತ್ತಿರುವ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸದಸ್ಯರು ಸಾಂಸ್ಕೃತಿಕ ತಂಡದ ಮುಖೇನ ಜಾಗೃತಿ ಅಭಿಯಾನ ನಡೆಸುವ ಮೂಲಕವೂ ಗಮನ ಸೆಳೆದಿದ್ದಾರೆ.ಗ್ರಾಮದ ವಿವಿಧ ಸ್ವಸಹಾಯಗುಂಪುಗಳು ಎನ್‌ಆರ್‌ಎಲ್‌ಎಂ (ನ್ಯಾಷನಲ್‌ ರೂರಲ್‌ ಲೈವ್ಲಿಹುಡ್ಸ್‌ ಮಿಷನ್‌) ಇಲಾಖೆ ಮೂಲಕ ಒಂದಾಗಿ ಗ್ರಾಮಮಟ್ಟದಲ್ಲಿ ಸಂಜೀವಿನೀ ಒಕ್ಕೂಟವಾಗಿ ಗುರುತಿಸಿಕೊಂಡಿದೆ. ಹೀಗೆ ಬಲ್ನಾಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ಆರು ವರ್ಷಗಳ ಹಿಂದೆ ಹುಟ್ಟಿಕೊಂಡ ಸಮೃದ್ಧಿ ಸಂಜೀವಿನಿ ಒಕ್ಕೂಟ ಹಲವು ಸಾಧನೆಗಳಿಂದ ಗುರುತಿಸಿಕೊಂಡಿದೆ. ಗ್ರಾಮ ಪಂಚಾಯಿತಿಮಟ್ಟದಲ್ಲಿರುವ ೨೮ ವಿವಿಧ ಸ್ವಸಹಾಯಗುಂಪುಗಳು ಈ ಒಕ್ಕೂಟದಲ್ಲಿ ಸಂಯೋಜನೆಗೊಂಡಿದ್ದು, ಒಟ್ಟು ೩೧೩ ಮಂದಿ ಸದಸ್ಯರಿದ್ದಾರೆ. ಪ್ರಸ್ತುತ ಒಕ್ಕೂಟದ ಅಧ್ಯಕ್ಷರಾಗಿ ಮಮತಾ , ಕಾರ್ಯದರ್ಶಿಯಾಗಿ ಯಮುನಾ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಒಕ್ಕೂಟದ ಮೂಲಕ ಸಾಲ ಪಡೆದುಕೊಂಡು ಜೀವನೋಪಾಯ ಚಟುವಟಿಕೆ ನಡೆಸುತ್ತಿರುವ ಈ ಗುಂಪಿನ ಸದಸ್ಯರು, ಸ್ವಾವಲಂಬನೆಗೆ ಮಾದರಿ ಎನ್ನಿಸಿಕೊಂಡಿದ್ದಾರೆ.ಸ್ವಾವಲಂಬನೆ, ಜಾಗೃತಿ: ತನ್ನ ಕ್ರಿಯಾಶೀಲತೆಯಿಂದ ಕಳೆದ ಏಪ್ರಿಲ್‌ನಲ್ಲಿ ಜಿಲ್ಲೆಯ ಅತ್ಯುತ್ತಮ ಒಕ್ಕೂಟಗಳಲ್ಲಿ ಮೂರನೇ ಸ್ಥಾನ ಪಡೆದಿರುವ ಸಮೃದ್ಧೀ ಸಂಜೀವಿನೀ ಒಕ್ಕೂಟ ಕಳೆದ ಎರಡು ವರ್ಷದಿಂದ ಸಾಂಸ್ಕೃತಿಕವಾಗಿಯೂ ಹೆಚ್ಚು ಸದ್ದು ಮಾಡಿದೆ. ಒಕ್ಕೂಟದ ಎಂಬಿಕೆ (ಮುಖ್ಯಪುಸ್ತಕ ಬರಹಗಾರರು) ಅಂಬಿಕಾ ಅವರ ವಿಶೇಷ ಮುತುವರ್ಜಿಯಲ್ಲಿ ಹುಟ್ಟಿಕೊಂಡಿರುವ ಈ ಸಾಂಸ್ಕೃತಿಕ ತಂಡ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದೆ. ಭ್ರೂಣ ಹತ್ಯೆಯಿಂದ ತೊಡಗಿ ಲಿಂಗ ತಾರತಮ್ಯ, ಅಸಮಾನ ವೇತನ, ಕೌಟುಂಬಿಕ ಕಲಹ, ಮಹಿಳಾ ದೌರ್ಜನ್ಯದ ಬಗ್ಗೆ ಈ ತಂಡ ನಡೆಸಿದ ಸಾಂಸ್ಕೃತಿ ಕ ಪ್ರದರ್ಶನಗಳು ಶ್ಲಾಘನೆಗೆ ಪಾತ್ರವಾಗಿದೆ. ಒಕ್ಕೂಟದ ಮಹಾಸಭೆಯ ಸಂದರ್ಭಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಬೇಕು ಎಂದು ಯೋಚಿಸಿದ ತಂಡಕ್ಕೆ ಹೊಳೆದದ್ದು ಸಾಮಾಜಿಕ ಸಮಸ್ಯೆಗಳ ತಲ್ಲಣ. ಅದರಂತೆ ಎಲ್ಲರೂ ಸೇರಿ ಸ್ಕ್ರಿಪ್ಟ್‌ ಬರೆದರು, ಅಭ್ಯಾಸ ಮಾಡಿದರು, ಹಾಡು ಹಾಡಿದರು, ಅವರಿಗೆ ಅವರದೇ ನಿರ್ದೇಶನ. ಹೀಗೆ ಆರಂಭಿಸಿದ ಜನಜಾಗೃತಿಯ ನಾಟಕ ಹಾಡುಗಳ ಪ್ರದರ್ಶನಗಳನ್ನು ಒಕ್ಕೂಟದ ವಾರ್ಷಿಕ ಮಹಾಸಭೆ, ಗ್ರಾಮ ಪಂಚಾಯಿತಿ ಮಹಿಳಾ ಗ್ರಾಮಸಭೆ, ವಿಟ್ಲ ಸರ್ಕಾರಿ ಕಾಲೇಜಿನ ವಾರ್ಷಿಕ ಎನ್ನೆಸ್ಸೆಸ್‌ ಶಿಬಿರ, ಮಹಿಳಾ ದಿನಾಚರಣೆಯ ಕಾರ್ಯಕ್ರಮ ಹಾಗೂ ವಿಕಸಿತ ಭಾರತ ಸಂಕಲ್ಪ ಯಾತ್ರಾ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಿದ್ದಾರೆ.ಎಲ್‌ಸಿಆರ್‌ಪಿ ಉಮಾವತಿ ಹಾಡಿನ ಮೂಲಕ ಗಮನಸೆಳೆದರೆ, ಎಲ್‌ಸಿಆರ್‌ಪಿ ಅಕ್ಷತಾ ನಟನೆಯಲ್ಲಿ ಮನ ಗೆಲ್ಲುತ್ತಾರೆ. ಸ್ವಚ್ಛವಾಹಿನಿ ಚಾಲಕಿ ಚೇತನಾ, ಪದ್ಮಿನಿ, ಕೃಷಿ ಸಖಿ ವಿಮಲ, ಘಟಕ ಸಿಬ್ಬಂದಿ ಅರುಣಾ, ಬಿ.ಸಿ.ಸಖಿ ಶೋಭಾ, ಪಶುಸಖಿ ದೀಪಿಕಾ, ವಿಜಯಲಕ್ಷ್ಮೀ, ರೇಷ್ಮಾ ಮೊದಲಾದವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಒಕ್ಕೂಟದ ಸದಸ್ಯರು ಕೇಶ ತೈಲ, ಕ್ಯಾಂಜಲ್ ತಯಾರಿಕೆ, ಬೇಕರಿ ಪದಾರ್ಥ, ಮಸಾಲಾ ಪುಡಿ, ಇತ್ಯಾದಿ ಉತ್ಪಾದನೆ ಮೂಲಕ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ತಮ್ಮ ಕುಟುಂಬಕ್ಕೆ ಆರ್ಥಿಕ ನೆಲೆ ನೀಡಿದಂತೆಯೇ, ಸಮಾಜಕ್ಕೂ ಅನನ್ಯ ಸಹಾಯ ಮಾಡುತ್ತಿದ್ದಾರೆ.

ಈ ಒಕ್ಕೂಟ ತಾಲೂಕು ಹಾಗೂ ಜಿಲ್ಲಾ ಮಟ್ಟದ ಹಂತದ ಅಧಿಕಾರಿಗಳ ನಿರ್ದೇಶನದಂತೆ ಪೋಷಣ ಅಭಿಯಾನ, ಆರೋಗ್ಯ ತಪಾಸಣಾ ಶಿಬಿರ, ಆಟಿದಕೂಟ, ಜಾನಪದ ತಿಂಡಿ ಪರಿಚಯ ಮುಂತಾದ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮಹಿಳೆಯರ ಆರೋಗ್ಯ ಮತ್ತು ಪೋಷಣೆ ಮುಖ್ಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.......................

ಮಾದಕ ವ್ಯಸನ ಜಾಗೃತಿ ವಿಡಿಯೋ

ಜೂ.೨೬ ರ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನದ ಅಂಗವಾಗಿ ಬಲ್ನಾಡು ಸಮೃದ್ಧಿ ಸಂಜೀವಿನಿ ಗ್ರಾಮಪಂಚಾಯಿತಿ ಮಟ್ಟದ ಒಕ್ಕೂಟದಿಂದ ಕಿರುನಾಟಕ ಪ್ರದರ್ಶನ ಮಾಡಲಾಗಿದ್ದು, ಈ ಜಾಗೃತಿ ವಿಡಿಯೋ ಇದೀಗ ರಾಜ್ಯಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಈ ಪ್ರದರ್ಶನದಲ್ಲಿ ಬಲ್ನಾಡು ಗ್ರಾ.ಪಂ. ಅಧ್ಯಕ್ಷೆ ಪರಮೇಶ್ವರಿ ಬಿ.ಆರ್‌. ಭಾಗವಹಿಸಿದ್ದು , ಸಿಬ್ಬಂದಿಯೂ ಅಭಿನಯದೊಂದಿಗೆ ಗಮನ ಸೆಳೆದಿದ್ದಾರೆ.

....................

ನಮ್ಮ ಚಟುವಟಿಕೆಗಳಿಗೆ ಟಿಪಿಎಂ ಜಗತ್‌ ಕೆ. , ವಲಯ ಮೇಲ್ವಿಚಾರಕಿ ನಮಿತಾ , ಬಲ್ನಾಡು ಗ್ರಾ.ಪಂ. ಅಧ್ಯಕ್ಷೆ ಪರಮೇಶ್ವರಿ ಬಿ.ಆರ್.‌, ಅಭಿವೃದ್ಧಿ ಅಧಿಕಾರಿ ದೇವಪ್ಪ ಪಿ.ಆರ್.‌ , ಕಾರ್ಯದರ್ಶಿ ಲಕ್ಷ್ಮೀ ಎಂ. ಸಹಿತ ಎಲ್ಲಾ ಸಿಬ್ಬಂದಿ ಸಹಕಾರ ನೀಡುತ್ತಾರೆ.

-ಅಂಬಿಕಾ, ಮುಖ್ಯ ಪುಸ್ತಕ ಬರಹಗಾರರು..........................ಬಲ್ನಾಡು ಸಮೃದ್ಧಿ ಸಂಜೀವಿನಿ ಒಕ್ಕೂಟ ಮಾದರಿಯಾಗಿ ಮುನ್ನಡೆಯುತ್ತಿದೆ, ಸಾಂಸ್ಕೃತಿಕವಾಗಿಯೂ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ.

-ದೇವಪ್ಪ ಪಿ.ಆರ್.‌, ಬಲ್ನಾಡು ಗ್ರಾ.ಪಂ. ಪಿಡಿಒ.

..........................

ಸಮೃದ್ಧಿ ಸಂಜೀವಿನಿ ಅತ್ಯುತ್ತಮ ಕ್ರಿಯಾಶೀಲ ಒಕ್ಕೂಟ. ಸಾಂಸ್ಕೃತಿಕ ಪ್ರದರ್ಶನಗಳನ್ನು ಸ್ವ ಇಚ್ಛೆಯಿಂದ ನೀಡುವ ಮೂಲಕ ಇತರ ಒಕ್ಕೂಟಗಳಿಗೆ ಮಾದರಿಯಾಗಿದ್ದಾರೆ.

-ಜಗತ್‌ ಕೆ., ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ, ಎನ್‌ಆರ್‌ಎಲ್‌ಎಂ ಪುತ್ತೂರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ