ಹೂವಿನಹಡಗಲಿ: ಮೈಲಾರ ಪುಣ್ಯಭೂಮಿ ಡೆಂಕಣ ಮರಡಿಯಲ್ಲಿ ನಮ್ಮ ಹರಕೆಯ ಆಕೃತಿ ಮಾಡಿದರೆ ಸಾಕು ಅದು ಈಡೇರುತ್ತೆ ಎಂಬ ನಂಬಿಕೆಯಿಂದ, ನೆರೆದಿದ್ದ ಲಕ್ಷಾಂತರ ಭಕ್ತರು ತಮ್ಮಿಷ್ಟದ ಆಕೃತಿ ಮಾಡಿದ್ದು ಕಂಡು ಬಂತು.
ಯುವಕರು ಮದುವೆ ಆಗಲು ಹೆಣ್ಣು ಸಿಗದ ಕಾರಣ ಡೆಂಕಣಮರಡಿಯಲ್ಲಿ ಕಟ್ಟಿಗೆ, ತೆಂಗಿನ ಗರಿಗಳಿಂದ ಹಂದರ ಹಾಕಿದ್ದರು. ಮರಡಿ ತುಂಬೆಲ್ಲ ಹೆಚ್ಚಾಗಿ ಕನ್ಯೆ ಸಿಗುವಂತೆ ಮಾಡಪ್ಪ ದೇವರೇ ಎಂದು ಬೇಡಿಕೊಳ್ಳುವ ಭಕ್ತರೇ ಹೆಚ್ಚಾಗಿದ್ದರು.
ನಾನು ಎರಡು ವರ್ಷದಿಂದ ಮೈಲಾರ ಜಾತ್ರೆ ಬರುತ್ತಿದ್ದೇನೆ. ನನ್ನ ಸ್ನೇಹಿತೆಯೊಬ್ಬಳು ಕಾರ್ಣಿಕದ ಸ್ಥಳದಲ್ಲೇ ಆಕೃತಿ ಮಾಡಿದರೆ ಆಸೆ ಈಡೇರುತ್ತದೆ ಎಂದು ಹೇಳಿದ್ದಳು. ಆ ಕಾರಣಕ್ಕಾಗಿ ನನಗೆ ವರ ಸಿಕ್ಕು ಮದುವೆ ಆಗಲಿ ಎಂದು ಹಸಿರು ಹಂದಿರ ಹಾಕಿ ಬೇಡಿಕೊಂಡಿದ್ದೇನೆ ಎಂದು ಜಗಳೂರಿನಿಂದ ಬಂದಿದ್ದ ಮಮತಾ ಹೇಳಿದರು.ಬಾಬುದಾರರಿಗೆ ಪೊಲೀಸರು ತಡೆ
ಸ್ಥಳಕ್ಕೆ ಬಂದ ದೇವಸ್ಥಾನದ ಸಿಬ್ಬಂದಿಯೊಂದಿಗೆ ಚರ್ಚೆಗಿಳಿದ ಬಾಬುದಾರರು, ಬ್ಯಾರಿಕೇಡ್ ಒಳಗೆ ವಿಐಪಿ, ವಿವಿಐಪಿ ಪಾಸ್ ಕೊಟ್ಟು ಸಾವಿರಾರು ಜನರನ್ನು ಬಿಟ್ಟಿದ್ದೀರಿ. ದೇವರ ಸೇವೆ ಮಾಡುವ ನಮಗೆ ಕಸ ಹೊಡೆಯುವ ಕಾರ್ಮಿಕರಿಗೆ ಕೊಡುವ ಪಾಸ್ ನೀಡಿದ್ದೀರಿ ಎಂದು ಬಾಬುದಾರರು ಆಕ್ರೋಶ ವ್ಯಕ್ತಪಡಿಸಿದರು.
ಡೆಂಕಣ ಮರಡಿಯ ಬ್ಯಾರಿಕೇಡ್ ಒಳಗೆ ಹೊಗಲು ಪತ್ರಕರ್ತರಿಗೆಂದು ಮಾಧ್ಯಮ ಪಾಸ್ ನೀಡಿದ್ದರು. ಪತ್ರಕರ್ತರ ಹೆಸರಿನಲ್ಲಿ 500ಕ್ಕೂ ಹೆಚ್ಚು ಮಾಧ್ಯಮ ಪಾಸ್ ಪಡೆದು ಬ್ಯಾರಿಕೇಡ್ ಒಳಗೆ ಭಕ್ತರು ನುಗ್ಗಿದ್ದರು. ಇದನ್ನು ಗಮನಿಸಿದ ಪೊಲೀಸರು ಮಾಧ್ಯಮದವರನ್ನೇ ಎಷ್ಟು ಜನ ಮಾಧ್ಯಮದವರು ಇದ್ದೀರಿ? ನಿಮ್ಮ ಕಾರ್ಡ್ ತೋರಿಸಿ. ಇಲ್ಲದಿದ್ದರೆ ಹೊರಗೆ ಹೋಗಿ ಎಂದು ಗದರಿಸಿದ ಘಟನೆ ಜರುಗಿತು.
ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ತಾವೇ ಫೀಲ್ಡ್‌ಗೆ ಇಳಿದು ಮಾಧ್ಯಮ ಪಾಸ್ ಹಾಕಿಕೊಂಡವರನ್ನು ಚೆಕ್ ಮಾಡುವ ಜತೆಗೆ ಮಾಧ್ಯಮದ ಕಾರ್ಡ್‌ಗಳನ್ನು ಪರಿಶೀಲನೆ ಮಾಡಿದ್ದು ಕಂಡು ಬಂತು.ಟ್ರಾಫಿಕ್ ಜಾಮ್
ಮೈಲಾರ ಸೇತುವೆ ಬಳಿ ಹಾವೇರಿ ಜಿಲ್ಲೆಯ ಕಡೆಗೆ 8 ರಿಂದ 10 ಕಿ.ಮೀ ದೂರ, ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಾವೇರಿ, ರಾಣಿಬೆನ್ನೂರು, ಹುಬ್ಬಳ್ಳಿ, ಧಾರವಾಡ ಕಡೆಯಿಂದ ಬರುವ ಭಕ್ತರು ಮೈಲಾರ ಸೇತುವೆ ಮೂಲಕವೇ ಬರಬೇಕಿದೆ. ಆದರೆ. ಸಾಕಷ್ಟು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕು ಹಾಕಿಕೊಂಡ ಭಕ್ತರು ಕೊನೆಗೂ ಕಾರ್ಣಿಕ ಸ್ಥಳಕ್ಕೆ ತೆರಳು ಸಾಧ್ಯವಾಗಲಿಲ್ಲ.