ರಾಮನಗರ: ಯಾವುದೇ ಗಣ್ಯರು, ರಾಜಕಾರಣಿಗಳು ಹಾಗೂ ಸಚಿವರನ್ನು ಭೇಟಿ ಮಾಡಿದರು ಸಾಲುಮರದ ತಿಮ್ಮಕ್ಕನ ಮನವಿ ಒಂದೇ ಇರುತ್ತಿತ್ತು. ಅದು ನನ್ನೂರಿಗೊಂದು ಹೆರಿಗೆ ಆಸ್ಪತ್ರೆ ಕಟ್ಟಿಸಿಕೊಡಿ ಎಂಬುದಾಗಿತ್ತು.
ತಿಮ್ಮಕ್ಕನ ಮಾತುಗಳನ್ನು ಗಂಭೀರವಾಗಿ ಪರಿಗಣಿಸದ ಗಣ್ಯರು, ರಾಜಕಾರಣಿಗಳು ಹಾಗೂ ಸಚಿವರು ಆಯ್ತು ಬಿಡಿ ಮಾಡಿಕೊಡೋಣ, ನೋಡೋಣ ಎಂದು ಹಾರಿಕೆ ಉತ್ತರ ಕೊಟ್ಟು ಸುಮ್ಮನಾಗುತ್ತಿದ್ದರು. ಆದರೆ, ತಿಮ್ಮಕ್ಕ ಮಾತ್ರ ತನ್ನ ಹಠವನ್ನು ಬಿಡಲೇ ಇಲ್ಲ. ನನ್ನೂರಿಗೆ ಆಸ್ಪತ್ರೆ ಕಟ್ಟಿಸಿಕೊಡಲೇಬೇಕು ಎಂಬ ಬೇಡಿಕೆಯೊಂದನ್ನು ಬಿಟ್ಟು ಬೇರೆ ಯಾವುದೇ ಮನವಿ ಮಾಡುತ್ತಿರಲಿಲ್ಲ.ಸರ್ಕಾರಕ್ಕೆ ದುಡ್ಡು ಕೊಡ್ತೀನಿ ಎಂದ ತಿಮ್ಮಕ್ಕ:
ಹುಲಿಕಲ್ಲು ಗ್ರಾಮದಲ್ಲಿ ಕಾಮಗಾರಿಗಳು ಉದ್ಘಾಟನಾ ಸಮಾರಂಭ ಆಯೋಜನೆಗೊಂಡಿತ್ತು. ಆ ಕಾರ್ಯಕ್ರಮದಲ್ಲಿ ಅಂದು ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ, ಎಚ್.ಎಂ.ರೇವಣ್ಣ ಅವರೊಂದಿಗೆ ಉಮಾಶ್ರೀ ಕೂಡಾ ಪಾಲ್ಗೊಂಡಿದ್ದರು.ಆ ಸಭೆಯಲ್ಲಿ ತಿಮ್ಮಕ್ಕ ಮತ್ತದೇ ಮನವಿ ನಮ್ಮೂರಿಗೊಂದು ಆಸ್ಪತ್ರೆ ಕಟ್ಟಿಸಿಕೊಡಿ ಬುದ್ದಿ ಎಂದು ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದರು. ಕಾಗೋಡು ತಿಮ್ಮಪ್ಪರವರು ಅಜ್ಜಿ, ಆಸ್ಪತ್ರೆ ಕಟ್ಟಿಸೋದಕ್ಕೆ ತುಂಬಾ ಹಣ ಬೇಕಾಗತ್ತೆ. ಇದರಿಂದಾಗಿ ಸರ್ಕಾರಕ್ಕೆ ಕಷ್ಟ ಆಗತ್ತೆ. ಆಸ್ಪತ್ರೆ ಪಕ್ಕದ ಕುದೂರು ಗ್ರಾಮದಲ್ಲೇ ಇದೆ. ಅಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಿ ಭಾಷಣ ಮುಂದುವರೆಸಿದರು.
ಸಚಿವರ ಭಾಷಣ ಮುಗಿದ ನಂತರ ತಿಮ್ಮಕ್ಕ ನಾನೊಂದೆರೆಡು ಮಾತನಾಡಬೇಕು ಎಂದು ಮನವಿ ಮಾಡಿ ಮೈಕ್ ಪಡೆದರು. ಸ್ವಾಮಿ, ಆಸ್ಪತ್ರೆ ಕಟ್ಟಿಸೋಕೆ ತುಂಬಾ ದುಡ್ಡು ಬೇಕು. ನಿಮ್ಮ ಹತ್ರ ದುಡ್ಡಿಲ್ಲ ಅಂತೀರಿ. ನನಗೆ ಒಂದಷ್ಟು ಜನರು ಕರೆದು ಹಾರ ಹಾಕಿ ಸನ್ಮಾನ ಮಾಡಿ ಜೀವನಕ್ಕೆ ಅನುಕೂಲ ಆಗಲಿ ಅಂತ ಒಂದಿಷ್ಟು ದುಡ್ಡು ಕೊಟ್ಟಿದ್ದಾರೆ. ಅದನ್ನು ಬ್ಯಾಂಕಲ್ಲಿ ಇಟ್ಟಿದ್ದೀನಿ. ಅದನ್ನು ನಿಮಗೆ ಕೊಟ್ ಬಿಡ್ತೀನಿ. ಆ ಹಣ ತೊಗೊಂಡು ನನ್ನೂರಿಗೆ ಆಸ್ಪತ್ರೆ ಕಟ್ಟಿಸಿ ಎಂದು ಹೇಳಿದರು.ಸಭೆಗೆ ಸಭೆ ದೊಡ್ಡ ಕರತಾಡನ ಮಾಡಿತು. ಆದರೆ, ಸಚಿವರು ಮಾತ್ರ ಕಕ್ಕಾಬಿಕ್ಕಿಯಾಗಿದ್ದರು. ನಂತರ ಸಾವರಿಸಿಕೊಂಡು ದುಡ್ಡೇನು ಬೇಡ ಆಸ್ಪತ್ರೆ ಕಟ್ಟಿಸಿಕೊಡ್ತೀವಿ ಎಂದು ಆಶ್ವಾಸನೆ ನೀಡಿದರು. ಆದರೆ ಈವರೆವಿಗೂ ಆಸ್ಪತ್ರೆ ಕನಸು ಕನಸಾಗಿಯೇ ಉಳಿಯಿತೆ ಹೊರತು ನನಸಾಗಲಿಲ್ಲ.
ತಿಮ್ಮಕ್ಕನಿಗೆ ಆಸ್ಪತ್ರೆ ಕಟ್ಟಿಸಲೇ ಬೇಕೆಂಬ ಹಠ ಯಾಕೆ ಬಂತು? :ತಿಮ್ಮಕ್ಕ ಒಮ್ಮೆ ಸುಗ್ಗನಹಳ್ಳಿ ಗ್ರಾಮದಿಂದ ಹುಲಿಕಲ್ಲಿಗೆ ನಡೆದು ಬರುವಾಗ ಎತ್ತಿನ ಗಾಡಿಯಲ್ಲಿ ಗರ್ಭಿಣಿಯೊಬ್ಬಳ ನೋವನ್ನು ಕಣ್ಣಾರೆ ಕಂಡರು. ಅವರಿಗೆ ಆಸ್ಪತ್ರೆ ಸೌಲಭ್ಯ ಇಲ್ಲದ ಕಾರಣ ಕುದೂರು ಗ್ರಾಮಕ್ಕೆ ಹೋಗಬೇಕು ಎಂದು ಅವರ ಪೋಷಕರು ಗಾಬರಿಯಾಗಿದ್ದರು.
ಗರ್ಭಿಣಿ ಹೆಂಗಸು ನೋವಿನಿಂದ ನರಳುತ್ತಿದ್ದರಂತೆ. ಈ ಘಟನೆ ತಿಮ್ಮಕ್ಕನ ಮನಸಿನ ಮೇಲೆ ತೀವ್ರ ಪರಿಣಾಮ ಬೀರಿತು. ಆಗಿನಿಂದ ನನ್ನೂರಿಗೊಂದು ಆಸ್ಪತ್ರೆ ಕಟ್ಟಿಸಲೇಬೇಕು. ನನ್ನೂರಿನ ಹೆಣ್ಣು ಮಕ್ಕಳಿಗೆ ಇಂತಹ ತೊಂದರೆ ಆಗುವುದು ಬೇಡ ಎಂದು ಆಸ್ಪತ್ರೆಯ ಕನಸು ಕಾಣತೊಡಗಿದರು.ಜಾಗ ಮಂಜೂರಾದರೂ ಆಸ್ಪತ್ರೆ ನಿರ್ಮಾಣಗೊಳ್ಳಲಿಲ್ಲ :
ಸರ್ಕಾರ ತಿಮ್ಮಕ್ಕನ ಮನವಿಗೆ ಓಗೊಟ್ಟು ಹುಲಿಕಲ್ಲು ಬಳಿಯ ಜಾಗವೊಂದನ್ನು ಜಿಲ್ಲಾಧಿಕಾರಿಗಳ ಸಲಹೆಯನ್ನು ಪಡೆದು ಜಾಗ ಮಂಜೂರು ಮಾಡಿಕೊಟ್ಟಿತ್ತು. ಆದರೆ, ತಿಮ್ಮಕ್ಕ ನನ್ನ ಮನೆಯ ಸುತ್ತಳೆತೆಯಲ್ಲೇ ಜಾಗ ಬೇಕು. ಒಂದು ಮೈಲಿ ದೂರದ ಜಾಗದಲ್ಲಿ ಆಸ್ಪತ್ರೆ ಕಟ್ಟುವುದು ಬೇಡ ಎಂದು ಹಠ ಹಿಡಿದರು. ಹಾಗಾಗಿ ಅದು ನೆನೆಗುದಿಗೆ ಬಿದ್ದು ಮಂಜೂರಾದ ಜಾಗವೂ ಕೂಡಾ ಪರರ ಪಾಲಾಗಿದೆ.(ಇದಕ್ಕೂ ಒಂದು ತಿಮ್ಮಕ್ಕನ ಫೋಟೋ ಬಳಸಿ)