- ಮೌಲಾನಾ ಸಾಬ್‌ಕನ್ನಡಪ್ರಭ ವಾರ್ತೆ ಬೀದರ್
ಬೀದರ್ ನಗರ ಅಂಧ ಜಾನಪದ ಸಂಗೀತ ಹಾಗೂ ಶಾಸ್ತ್ರಿಯ ಸಂಗೀತ ಕಲಾವಿದರಾದ ಶ್ರೀ ನರಸಿಂಹಲು (60) ಹಾಗೂ ಅಪ್ಪಟ ಗಾಂಧಿವಾದಿ ಹೀರಾಚಂದ ವಾಘ್ಮಾರೆಗೆ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.ನರಸಿಂಹಲು ಅವರು ಅಂಧನಾಗಿದ್ದರೂ ಕೂಡ ಮೈಸೂರು ವಿಶ್ವ ವಿದ್ಯಾಲಯದಿಂದ ಕರ್ನಾಟಕ ಶಾಸ್ತ್ರಿಯ ಸಂಗೀತ, ಹಿಂದುಸ್ತಾನಿ ಸಂಗೀತದಲ್ಲಿ ಪದವಿ ಪಡೆದಿದ್ದಾರೆ ಸುಮಾರು 30 ವರ್ಷಗಳಿಂದ ಜಾನಪದ ಗಾಯನ, ತತ್ವಪದ, ಹಂತಿ ಪದ, ಮೋಹರಂ ಪದ ಮತ್ತು ಸುಗಮ ಸಂಗೀತದಲ್ಲಿ ರಾತ್ರಿ ಹಗಲು ಎನ್ನದೆ ಸತತವಾಗಿ ಸಂಗೀತ ಸೇವೆಯಲ್ಲಿ ತೊಡಗಿ ಕೊಂಡಿದ್ದಾರೆ.
ಈಗಾಗಲೇ ಅವರಿಗೆ ಡಾ.ಪಂಡಿತ ಪುಟ್ಟರಾಜ ಗವಾಯಿ ಪುರಸ್ಕಾರ, ಕಲ್ಯಾಣ ಕರ್ನಾಟಕ ಕಲಾರತ್ನ ಪ್ರಶಸ್ತಿ, ಜಿಲ್ಲಾಡಳಿತದ ಕರ್ನಾಟಕ ರಾಜ್ಯೋತ್ಸವ, ವಿಶೇಷ ಚೇತನ ಕಲಾವಿದರಿಂದ ರಾಜ್ಯ ಮಟ್ಟದ ಕಲಾ ಪ್ರತಿಭೋತ್ಸವ, ರಾಜ್ಯ ಮಟ್ಟದ ಜನಪದ ಉತ್ಸವದಲ್ಲಿ ಪ್ರಮಾಣ ಪತ್ರ ಹೀಗೆ ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.ಅವರು ಕನ್ನಡ, ಹಿಂದಿ ಹಾಗೂ ಇಗ್ಲೀಷ ಭಾಷೆಯ ಜ್ಞಾನ ಹೊಂದಿದ್ದ ನರಸಿಂಹಲು ರಾಜ್ಯೋತ್ಸವ ಪ್ರಶಸ್ತಿ ಬಂದಿದಕ್ಕೆ ಸಂತೋಷ ವ್ಯಕ್ತಪಡಿಸಿದ್ದು ರಾಜ್ಯ ಸರ್ಕಾರ ನನ್ನಂತಹ ಅಂಧ ಕಲಾವಿದರನ್ನು ಗುರಿತಿಸಿದಕ್ಕೆ ಅಭಿನಂದನೆಗಳು ತಿಳಿಸಿದ್ದಾರೆ.
ವಿಜಯಕುಮಾರ ಸೋನಾರೆ ಅಭಿನಂದನೆರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಅಂಧ ಜಾನಪದ ಕಲಾವಿದರಾದ ನರಸಿಂಹಲು ಅವರಿಗೆ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಅಪ್ಪಟ ಗಾಂಧಿವಾದಿ ಹೀರಾಚಂದ ವಾಘ್ಮಾರೆಬೀದರ್: ಸದಾ ದೇಶದ ಬಗ್ಗೆ ಚಿಂತನೆ ಹಾಗೂ ಯುವಕರನ್ನು ದುಶ್ಚಟಗಳಿಂದ ದೂರ ಹೇಗೆ ಮಾಡಬೇಕೆಂಬ ಆಸೆಯೊಂದಿಗೆ ಜೀವನ ಸಾಗಿಸುತ್ತಿರುವ ಅಪ್ಪಟ ಗಾಂಧಿವಾದಿ, ಸನ್ಯಾಸಿ ಭಾಲ್ಕಿ ಪಟ್ಟಣದ ಹಿರಿಯ ಜೀವಿ ಹೀರಾಚಂದ ವಾಘ ಮಾರೆ (94) ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿದೆ.ಮನೆ-ಮಠ ಇಲ್ಲದ ಹೀರಾಚಂದ ವಾಘಮಾರೆ ಸದ್ಯ ಭಾಲ್ಕಿ ಪಟ್ಟಣದ ಭಾಲ್ಕೇಶ್ವರ ಮಂದಿರ ಬಳಿಯ ರಾಮದಾಸ ಮಠದಲ್ಲಿ ವಾಸವಾಗಿದ್ದು, ಶಿಕ್ಷಕ ವೃತ್ತಿಯಿಂದ ಹೊರಬಂದು ಪಿಂಚಣಿಗೂ ಕೂಡ ಅರ್ಜಿ ಹಾಕದ ಅವರು, ಸಮಾಜ ಸೇವೆಯಲ್ಲಿ ತೊಡಗಿ ಹೊಟ್ಟೆಗೆ ಒಂದು ತುತ್ತು ಅನ್ನ ಇಲ್ಲದಿದ್ದರೂ ಅಳ್ಳು-ಪುಟಾಣಿ. ಪೆರಳೆ ಹಣ್ಣು ತಿಂದು ದಿನ ಕಳೆಯುತ್ತ ದೇಶದ ಹಾಗೂ ಯುವಕರ ಬಗ್ಗೆ ಚಿಂತನೆ ಮಾಡುತ್ತಲೇ ಇರುವವರು. ಜಿಲ್ಲೆಯಲ್ಲಿ ಬರಗಾಲದ ಸಮಯದಲ್ಲಿ ಜಾನರುವಾರುಗಳಿಗಾಗಿ ಮೇವು, ನೀರು ಪೂರೈಸಬೇಕೆಂದು ಅಂದು ಜಿಲ್ಲೆಗೆ ಬಂದಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು
ಗ್ರಾಮ ಮಟ್ಟದಲ್ಲಿ ಅಧಿಕಾರ ಸಿಗಬೇಕೆಂದು ಆಗ್ರಹಿಸಿ ಜನ ಜಾಗರಣ ಮಂಚ ಎಂಬ ಹೆಸರಿನ ಮೇಲೆ 25-30 ವರ್ಷಗಳ ಹಿಂದೆ ಬೀದರ್ ನಗರದ ಪ್ರವಾಸಿ ಮಂದಿರದಿಂದ ಒಬ್ಬರೆ ಹೋರಾಟಕ್ಕಾಗಿ ರಸ್ತೆಯ ಮೇಲೆ ಇಳಿಯುತಿದ್ದರು.ಇಲ್ಲಿ ಯಾರ ಬೆಂಬಲ ಸಿಗದೆ ಇದ್ದ ಕಾರಣ ಬೆಂಗಳೂರಿನ ಗಾಂಧಿ ಭವನದಲ್ಲಿದ್ದುಕೊಂಡು ಹೋರಾಟಕ್ಕೆ ಕರೆ ಕೊಡುತಿದ್ದರು. ಪಂಚಾಯತಕ್ಕೆ ಅಧಿಕಾರ ಸಿಗಲಿ ಎಂದು ಇಂಗ್ಲೀಷನಲ್ಲಿ ಪುಸ್ತಕ ಬರೆದಿದ್ದರು ನಂತರ ಅದನ್ನು ಬೆಂಗಳೂರಿನವರೇ ಯಾರೋ ಕನ್ನಡಕ್ಕೆ ಅನುವಾದ ಮಾಡಿದರು.ನಾನು ಅರ್ಜಿ ಹಾಕಿಲ್ಲ, ನನಗೆ ಪ್ರಶಸ್ತಿ ಮಾಹಿತಿಯೂ ಇಲ್ಲ!:
ಪ್ರಶಸ್ತಿಗಾಗಿ ನಾನು ಯಾರ ಬಳಿಯು ಅರ್ಜಿ ಹಾಕಿಲ್ಲ, ನನಗೆ ಯಾರು ಪರಿಚಯು ಇಲ್ಲ. ಇದರ ಬಗ್ಗೆ ಮಾಹಿತಿಯು ಇಲ್ಲ. ಬುಧವಾರ ಸಾಯಂಕಾಲ 5 ಗಂಟೆಯ ಸುಮಾರಿಗೆ ರಂಜಾನ್ ದರ್ಗಾ ಅವರು ದೂರವಾಣಿ ಮೂಲಕ ಮಾತನಾಡಿ ಅಭಿನಂದನೆ ಸಲ್ಲಿಸಿದಾಗ ಮಾತ್ರ ಪ್ರಶಸ್ತಿ ಬಂದಿದ್ದು ಗೊತ್ತಾಗಿದೆ ಎಂದು ತಿಳಿಸಿದರು.