ರೈತರ ಸಾಲ ವಸೂಲಿ ಆದೇಶ ಹಿಂಪಡೆಯಿರಿ: ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್

KannadaprabhaNewsNetwork |  
Published : Oct 31, 2024, 02:02 AM ISTUpdated : Oct 31, 2024, 02:03 AM IST
ಸಹಕಾರ ಸಂಘಗಳ ಸುಸ್ತಿ ಸಾಲಕ್ಕೆ ದಾವ ಪ್ರಕ್ರಿಯೆ ಆದೇಶ ವಾಸ್ ಪಡೆಯಿರಿ-ಭಾಗ್ಯರಾಜ್ | Kannada Prabha

ಸಾರಾಂಶ

ರೈತರ ಸಾಲ ವಸೂಲಾತಿಗಾಗಿ ಸುಸ್ತಿ ಸಾಲಕ್ಕೆ ದಾವೆ ಪ್ರಕ್ರಿಯೆ ನಡೆಸುವ ಆದೇಶ ನೀಡಿರುವ ಕ್ರಮ ಖಂಡನೀಯ. ಈ ಆದೇಶವನ್ನು ರಾಜ್ಯ ಸರ್ಕಾರ ವಾಪಸು ಪಡೆಯಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹಿಸಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಬ್ಬು ಬೆಳೆಗಾರರ ಸಂಘದ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ । ದಾವೆ ಪ್ರಕ್ರಿಯೆ ಆದೇಶ ಖಂಡನೀಯ । ರೈತರು ಬೆಳೆ ನಷ್ಟದಲ್ಲಿದ್ದಾರೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯ ಸರ್ಕಾರ ಸಹಕಾರ ಸಂಘಗಳಲ್ಲಿರುವ ರೈತರ ಸಾಲ ವಸೂಲಾತಿಗಾಗಿ ಸುಸ್ತಿ ಸಾಲಕ್ಕೆ ದಾವೆ ಪ್ರಕ್ರಿಯೆ ನಡೆಸುವ ಆದೇಶ ನೀಡಿರುವ ಕ್ರಮ ಖಂಡನೀಯ. ಈ ಆದೇಶವನ್ನು ರಾಜ್ಯ ಸರ್ಕಾರ ವಾಪಸು ಪಡೆಯಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು ೬೦೪೦ ಸಹಕಾರ ಸಂಘಗಳಿದ್ದು, ಇದರಲ್ಲಿ ಸುಮಾರು ೨೫೦೦೦ ಕೋಟಿ ರು. ಸಾಲ ನೀಡಿದ್ದರು. ಸುಮಾರು ಐದರಿಂದ ಶೇ.೧೦ರಷ್ಟು ರೈತರು ಸುಸ್ತಿದಾರರಾಗಿದ್ದಾರೆ ಎಂದು ಹೇಳಿದರು.

ಕಳೆದ ಆರು ವರ್ಷಗಳಿಂದ ಕೊರೋನಾ, ಭೀಕರ ಮಳೆಗಾಲ ಹಾಗೂ ಬರದಿಂದ ತತ್ತರಿಸಿರುವ ರೈತರು ಸಾಲ ಮರುಪಾವತಿಯಲ್ಲಿ ವಿಫಲರಾಗಿದ್ದಾರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರು ಬೆಳೆದಂತ ಹೂವು ಹಣ್ಣು ತರಕಾರಿ ಧಾನ್ಯಗಳಿಗೆ ಸೂಕ್ತ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡುವಲ್ಲಿ ವಿಫಲರಾಗಿದ್ದು ಈ ಕೃಷಿ ಸಾಲವೂ ದೇಶದ ಆಹಾರ ಉತ್ಪಾದನೆಗೆ ಬಳಕೆಯಾಗಿದೆ. ಯಾವುದೇ ರೈತರು ಈ ಹಣವನ್ನು ಮೋಜು-ಮಸ್ತಿಗೆ ಬಳಕೆ ಮಾಡಿಲ್ಲ ಎಂದು ಕಿಡಿಕಾರಿದರು.

ಪ್ರಕೃತಿ ವಿಕೋಪ ಸಮಸ್ಯೆಯಿಂದ ರೈತರು ಸಾಲ ಮರುಪಾವತಿಯಲ್ಲಿ ವಿಫಲರಾಗಿರಬಹುದು. ಇದಕ್ಕೆ ಸರ್ಕಾರ ನೆಪವನ್ನು ಮಾಡಿಕೊಂಡು ಸಚಿವರು ಅಧಿಕಾರಿಗಳು ಸರ್ಕಾರ ಸಾಲ ಮರುಪಾವತಿ ಮಾಡದ ರೈತರ ಮೇಲೆ ದಾವೆ ಪ್ರಕ್ರಿಯೆಯನ್ನು ಸರ್ಕಾರದ ಸಹಕಾರ ಸಂಘಗಳ ಕಾಯ್ದೆ ೧೯೫೯ರ ೭೦ ಕಲಂನಡಿ ಸುಸ್ತಿಯಾದ ಸಾಲವನ್ನು ವಸೂಲಿ ಮಾಡಲು ಆರು ವರ್ಷಗಳ ಕಾಲಾವಕಾಶ ಇರುತ್ತದೆ. ಇದನ್ನು ಮನಗಂಡ ಸರ್ಕಾರ ಮತ್ತು ಸಚಿವರು ಹಾಗೂ ಅಧಿಕಾರಿಗಳು ಸಹಕಾರ ಸಂಘದಲ್ಲಿ ಸಾಲ ಪಡೆದ ರೈತರಿಗೆ ಯಾವುದೇ ನೋಟಿಸ್ ನೀಡದೆ ಮೌಖಿಕ ಹೇಳಿಕೆಯನ್ನು ಮಾತ್ರ ನೀಡಿ ನಂತರ ಕಲಂ ೭೦ ಅಡಿಯಲ್ಲಿ ದಾವೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿ ರೈತರ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ, ಹರಾಜು ಮಾಡುವಂತಿಲ್ಲ ಎಂಬ ಅಡ್ಡಗೋಡೆ ಮೇಲೆ ದೀಪ ಇಟ್ಟಂತಹ ಆದೇಶವನ್ನು ಮಾಡಿ ರೈತರನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಇದು ರೈತರ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಈ ಆದೇಶವನ್ನು ತಕ್ಷಣ ಸರ್ಕಾರ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಸರ್ಕಾರ ಮತ್ತು ಸಚಿವರ ವಿರುದ್ಧ ಹೋರಾಟದ ಹಾದಿಯನ್ನು ರೈತರು ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರ ಎಂಎಸ್‌ಪಿಯನ್ನು ಪ್ರತಿ ಕ್ವಿಂಟಲ್ ಭತ್ತಕ್ಕೆ ೨೩೦೦ ರು. ನಿಗದಿ ಮಾಡಿದ್ದು ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತಿ ಕ್ವಿಂಟಲ್‌ಗೆ ೫೦೦ ರುಪಾಯಿಯನ್ನು ನಿಗದಿ ಮಾಡಿ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡಬೇಕು, ಯಾವುದೇ ಷರತ್ತುಗಳನ್ನು ಹಾಕದೆ ರೈತರು ಬೆಳೆದ ಎಲ್ಲಾ ಭತ್ತವನ್ನು ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ರೈತರ ಬಳಿ ಇರುವ ಭೂಮಿಯನ್ನು ವಕ್ಫ್‌ ಬೋರ್ಡಿಗೆ ಸೇರಿದ್ದು ಎಂದು ಪರಿಗಣಿಸಿ ದಾಖಲೆಯನ್ನು ರೈತರಿಗೆ ಸರಿಯಾಗಿ ಮಾಡಿಕೊಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲಿಯೂರು ಹರ್ಷ, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ತಾಲೂಕು ಅಧ್ಯಕ್ಷ ಅರಳೀಕಟ್ಟೆ ಕುಮಾರ್, ಊಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್‌ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ