ಪಾರದರ್ಶಕ ಕೆಲಸ ಮಾಡದವರು ಬೇರೆಡೆ ಹೋಗಿ

KannadaprabhaNewsNetwork |  
Published : Dec 24, 2025, 04:15 AM IST
ತಾಳಿಕೋಟೆ ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. | Kannada Prabha

ಸಾರಾಂಶ

ಪಾರದರ್ಶಕವಾಗಿ ಕೆಲಸ ಮಾಡಲಾಗದ ಅಧಿಕಾರಿಗಳು ಬೇರೆಡೆ ವರ್ಗಾಯಿಸಿಕೊಂಡು ಹೋಗಬಹುದು. ಇಲ್ಲ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅಧಿಕಾರಿಗಳಿಗೆ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಾರದರ್ಶಕವಾಗಿ ಕೆಲಸ ಮಾಡಲಾಗದ ಅಧಿಕಾರಿಗಳು ಬೇರೆಡೆ ವರ್ಗಾಯಿಸಿಕೊಂಡು ಹೋಗಬಹುದು. ಇಲ್ಲ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅಧಿಕಾರಿಗಳಿಗೆ ಎಚ್ಚರಿಸಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಂಗಳವಾರ ನಡೆದ ೨೦೨೫-೨೬ನೇ ಸಾಲಿನ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರಿಗಳಲ್ಲಿ ನಿರ್ಲಕ್ಷ್ಯತನವಿರಬಾರದು. ನನ್ನ ೪೦ ವರ್ಷದ ರಾಜಕಾರಣದಲ್ಲಿ ನಾನು ಯಾವ ಅಧಿಕಾರಿಯನ್ನು ದ್ವೇಷಿಸಿಲ್ಲ, ಹಾಗಂತ ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ಎಲ್ಲ ಅಧಿಕಾರಿಗಳಿಂದ ಯಾವ ರೀತಿ ಕೆಲಸ ತೆಗೆದುಕೊಳ್ಳಬೇಕೆಂದು ಗೊತ್ತಿದೆ ಎಂದರು.

ಪಟ್ಟಣದ ಮಿಲತ ನಗರ, ಆಶ್ರಯ ಕಾಲೋನಿ ಸೇರಿದಂತೆ ಇತರೆ ಸ್ಥಳಗಳಲ್ಲಿ ನಡೆಯಬೇಕಾದ ಅಂಗನವಾಡಿ ಕೇಂದ್ರಗಳು ಮತ್ತೊಂದು ವಾರ್ಡಿನಲ್ಲಿ ಏಕೆ ನಡೆಯುತ್ತಿವೆ ಎಂದು ಪ್ರಶ್ನಿಸಿದ ಶಾಸಕರು, ಕೂಡಲೇ ಆಯಾ ವಾರ್ಡನ್‌ ಕೇಂದ್ರಗಳು ಅಲ್ಲೇ ನಡೆಸುವಂತೆ ಹೇಳಿದರು. ಗ್ರಾಮೀಣ ಭಾಗದಲ್ಲಿ ೭೩ ಅಂಗನವಾಡಿಗಳಿಗೆ ಕಟ್ಟಡಗಳೇ ಇಲ್ಲ, ಪಿಡಿಒಗಳು ಇದರ ಬಗ್ಗೆ ಗಮನ ಹರಿಸಿ ಜಾಗ ಒದಗಿಸಬೇಕು, ಅದಕ್ಕೆ ಅಗತ್ಯವಿರುವ ಅನುದಾನ ಒದಗಿಸುವುದಾಗಿ ತಿಳಿಸಿದರು.೨೧೧ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಗೆ ಬಂದಿವೆ ಎಂಬ ಅಧಿಕಾರಿಗಳ ಮಾಹಿತಿಗೆ, ಇಷ್ಟೊಂದು ಕಟ್ಟಡಗಳು ಬೀಳುವ ಹಂತಕ್ಕೆ ಬರಲು ಕಾರಣವೇನೆಂದು ಪ್ರಶ್ನಿಸಿದ ಶಾಸಕರು, ಇದಕ್ಕೆ ಕನಿಷ್ಠವೆಂದರೂ ₹೪೦ ಕೋಟಿ ತಗಲುತ್ತದೆ ಎಂದರು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಗತಿ ಸಾಧಿಸುವಂತೆ ಹೇಳಿದರು.

ತಾಳಿಕೋಟೆಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗೆ ಗುರುತಿಸಲು ತಹಸೀಲ್ದಾರ್‌ಗೆ ಹೇಳಿದರು. ತಾಳಿಕೋಟೆಗೆ ೫ ಮತ್ತು ಮುದ್ದೇಬಿಹಾಳಕ್ಕೆ ೧೦ ಹೊಸ ಬಸ್ಸಿನ ಅವಶ್ಯಕತೆ ಇದೆ ಎಂದು ಅಧಿಕಾರಿ ಚೋಕ್ಕಾವಿ ಮಾಹಿತಿ ನೀಡಿದರು. ಪಶುಪಾಲನೆ ಇಲಾಖೆಯಲ್ಲಿ ಖಾಲಿಯಿರುವ ೧೮ ಹುದ್ದೆಗಳನ್ನು ಹೊರಗುತ್ತಿಗೆ ಮೇಲೆ ಭರ್ತಿ ಮಾಡಿ ಕಾರ್ಯ ನಿರ್ವಹಿಸಲು ತಿಳಿಸಿದರು. ಹೀಗೆ ಅರಣ್ಯ, ವಿದ್ಯುತ್‌, ಅಬಕಾರಿ ವಿವಿಧ ಇಲಾಖೆಗಳ ಮಾಹಿತಿ ಪಡೆದರು. ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ತಾಪಂ ಇಒ ಅನಸೂಯಾ ಚಲವಾದಿ, ವೆಂಕಟೇಶ ವಂದಾಲ, ತಹಸೀಲ್ದಾರ್‌ ವಿನಯಾ ಹೂಗಾರ, ಕೀರ್ತಿ ಚಾಲಕ, ಸಿಪಿಐ ಮೊಹ್ಮದಪಶುದ್ದೀನ, ಪಿಎಸ್‌ಐ ಜ್ಯೋತಿ ಖೋತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ