ಕನ್ನಡಪ್ರಭ ವಾರ್ತೆ, ದಾವಣಗೆರೆಸಮಾಜದ ದುಡ್ಡು ತಿಂದವರು, ದುರ್ಬಳಕೆ ಮಾಡಿಕೊಂಡವರು ಎಂದಿಗೂ ಉದ್ಧಾರ ಆಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ನಗರದ ಹಳೇ ಪಿಬಿ ರಸ್ತೆಯ ಖಬರಸ್ಥಾನದಲ್ಲಿ ಭಾನುವಾರ 25 ಲಕ್ಷ ರು. ವೆಚ್ಚದ ವಜುಖಾನ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ, ಸಮಾಜದ ದುಡ್ಡನ್ನು ಯಾರೇ ತಿಂದರು, ದುರ್ಬಳಕೆ ಮಾಡಿಕೊಂಡರು ಅಂತಹವರು ಉದ್ಧಾರವಾಗುವುದಿಲ್ಲ. ಸಮಾಜದ ದುಡ್ಡು ಸಮಾಜಕ್ಕೆ ಮೀಸಲಿಟ್ಟರೆ, ಸಮಾಜದ ಏಳಿಗೆಗೆ ಸದ್ಭಳಕೆಯಾದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಖಬರಸ್ಥಾನದ ಮುಂದೆ ಪ್ರಾರ್ಥನೆಗೆ ಉತ್ತಮ ಸಿಸಿ ರಸ್ತೆ ಮಾಡಲಾಗಿದೆ. ಖಬರಸ್ತಾನ ಅಭಿವೃದ್ದಿಗೆ 2005 ಮತ್ತು 2013ರಲ್ಲಿ ಸಭೆ, ಚರ್ಚೆ ನಡೆಸಲಾಗಿತ್ತು. ನಂತರ ನೆನೆಗುದಿಗೆ ಬಿದ್ದಿದ್ದ ಖಬರಸ್ಥಾನ ಅಭಿವೃದ್ಧಿಗೆ 25 ವರ್ಷದ ನಂತರ ಕಾಂಗ್ರೆಸ್ ಸಂಸದರೇ ಬರಬೇಕಾಯಿತು. ಜಿಲ್ಲೆಯಲ್ಲಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವಲ್ಲಿ ಮುಸ್ಲಿಮ್ ಸಮುದಾಯದ ಪಾತ್ರ ಹೆಚ್ಚಾಗಿದ್ದು, ಕೊಟ್ಟ ಮಾತಿನಂತೆ ಖಬರಸ್ಥಾನ ಅಭಿವೃದ್ಧಿಗೆ 25 ಲಕ್ಷ ಮೀಸಲಿಡಲಾಗಿದೆ. ಸಮಾಜದ ಬೇಡಿಕೆಯಂತೆ ಇನ್ನೂ 25 ಲಕ್ಷ ಅನುದಾನ ನೀಡಲು ಸಿದ್ಧ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಅಭಿವೃದ್ಧಿಯಾಗಬೇಕಿದ್ದು, ಶಿಕ್ಷಣ, ಉದ್ಯೋಗ, ಮೂಲ ಸೌಕರ್ಯಕ್ಕೆ ಆದ್ಯತೆ ನೀಡಬೇಕು. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಬಾತಿ ಗ್ರಾಮದ ದರ್ಗಾವನ್ನು 3 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ನಿಟುವಳ್ಳಿ ದರ್ಗಾ ಅಭಿವೃದ್ಧಿಪಡಿಸಲಾಗುವುದು. ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಹಳೆ ಹೆರಿಗೆ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡಲಾಗುವುದು. 30 ಹಾಸಿಗೆಗಳ ಆಸ್ಪತ್ರೆಯನ್ನು 120 ಹಾಸಿಗೆಗೆ ಹೆಚ್ಚಿಸಿದ್ದು, ಹೆಚ್ಚುವರಿ ಭೂಮಿ ಪಡೆದು, 700-800 ಹಾಸಿಗೆಗಳ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಎಲ್ಲರಿಗೂ ಉತ್ತಮ ಆರೋಗ್ಯ ಲಭಿಸಲು ಬಾಪೂಜಿ ಆಸ್ಪತ್ರೆಯ ಸಹಯೋಗದಲ್ಲಿ ಅಗತ್ಯ ಕಾರ್ಯಗಳನ್ನು ಕೈಗೊಳ್ಳುವಂತೆ ಆರೋಗ್ಯ ಸಚಿವದಿನೇಶ ಗುಂಡೂರಾವ್ ಜೊತೆಗೆ ಚರ್ಚಿಸುವುದಾಗಿ ಭರವಸೆ ನೀಡಿದರು.ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ಹಿರಿಯರಾದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಮಲ್ಲಿಕಾರ್ಜುನರ ಕೊಡುಗೆ ಅಪಾರವಾಗಿದೆ. ಸಂಸದರ ಕೋಟಾದಡಿ ₹3.25 ಕೋಟಿ ಬಂದಿದ್ದು, ಖಬರಸ್ಥಾನ ಅಭಿವೃದ್ಧಿಗೆ ₹25 ಲಕ್ಷ ನೀಡಿದೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ರಸ್ತೆ, ಆರೋಗ್ಯ, ರೈತರ ಸಮಸ್ಯೆ, ಮೂಲಸೌಕರ್ಯ ಸೇರಿದಂತೆ ಅನೇಕ ಕೊರತೆ ನಿವಾರಣೆಗೆ ಎರಡೂವರೆ ದಶಕದ ನಂತರ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವಲ್ಲಿ ನಿಮ್ಮ ಪಾತ್ರ ದೊಡ್ಡದಿದೆ. ಜಿಲ್ಲೆಯನ್ನು ವಿಶ್ವ ಪ್ರಸಿದ್ಧವಾಗಿಸಲು ನಿಮ್ಮೆಲ್ಲರ ಸಹಕಾರ ಇರಲಿ. ಹೊಸ ಚೈತನ್ಯದೊಂದಿಗೆ ಎಲ್ಲರೂ ಜಿಲ್ಲೆಯ ಅಭಿವೃದ್ಧಿಗೆ ಪಣ ತೊಡೋಣ ಎಂದರು.
ನಿರ್ಮಿತಿ ಕೇಂದ್ರದ ಕಾಮಗಾರಿಗೆ ಎಸ್ಸೆಸ್ಸೆಂ ಕ್ಲಾಸ್:ಗಾರಿಗಳು ಕೈಗೆತ್ತಿಕೊಂಡ ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಕ್ಲಾಸ್ ತೆಗೆದುಕೊಂಡರು. ಕಳಪೆ ಕಾಮಗಾರಿ ಮಾಡಬೇಡಿ, ಉತ್ತಮ ಕಾಮಗಾರಿ ಮಾಡಿ. ಖಬರಸ್ಥಾನದ ವಜುಕಾನ ನಿರ್ಮಾಣ ಸೇರಿದಂತೆ ಜಿಲ್ಲೆಯ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಬೇಕು ಎಂದು ಸೂಚಿಸಿದರು.
ಸಂಸದರ ಹಿಂದಿ ಭಾಷಣ, ಎಸ್ಸೆಸ್ಸೆಂಗೆ ಪ್ಯಾರ್‌ಗೆ ಆಗ್ಬಿಟ್ತು!:ರಂಜಾನ್ ಹಬ್ಬಕ್ಕೆ ಮುಸ್ಲಿಂ ಧರ್ಮೀಯರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಶುಭಾರೈಸಿ ಹಿಂದಿಯಲ್ಲೇ ಭಾಷಣ ಮಾಡುವ ಮೂಲಕ ಗಮನ ಸೆಳೆದರು. ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ, ಅನೇಕ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭಾಷಣವನ್ನು ಪತಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕುತೂಹಲದಿಂದ ಆಲಿಸಿದರು.
ತಂಜಿಮುಲ್ ಮುಸ್ಲಿಂಮೀನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ಶೇಕ್ ದಾದಾಪೀರ್, ಮಾಜಿ ಮೇಯರ್ ಕೆ.ಚಮನ್ ಸಾಬ್, ಮಾಜಿ ಸದಸ್ಯರಾದ ಎ.ಬಿ ರಹೀಂ ಸಾಬ್, ಮೌಲಾನ ಮಹಮ್ಮದ್ ಅಲಿಸಾಬ್, ಅಲ್ಲಮಾನ್ ನಿರಾಜ್, ಖಾದ್ರಿಸಾಬ್, ಮಸೀದ್ ಮೌಲಾನ, ನಜೀರ್ ಸಾಬ್, ಖಜಾಂಚಿ ಶಂಶುದ್ದಿನ್, ಶ್ರೀನಿವಾಸ ನಂದಿಗಾವಿ ಇದ್ದರು.