ಬಿಜೆಪಿಯಲ್ಲೀಗ ದುಡ್ಡಿಲ್ಲದವರು ಸ್ಪರ್ಧಿಸುವ ಹಾಗಿಲ್ಲ: ರಘುಪತಿ ಭಟ್

KannadaprabhaNewsNetwork |  
Published : Jun 09, 2024, 01:36 AM IST
11 | Kannada Prabha

ಸಾರಾಂಶ

ಉಡುಪಿ, ದ.ಕ., ಶಿವಮೊಗ್ಗದ ಅನೇಕ ಬಿಜೆಪಿ ನಾಯಕರು ಕರೆ ಮಾಡಿ ಬೆಂಬಲ ವ್ಯಕ್ತಪಡಿಸಿದ್ದರು. ಸಾತ್ವಿಕವಾಗಿ ಚುನಾವಣೆಯನ್ನು ಎದುರಿಸಿದ್ದೇನೆ. ಸೋಲನ್ನು ಸವಾಲಾಗಿ ಸ್ವೀಕರಿಸಿ, ಸಕ್ರಿಯವಾಗಿ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದರು.

ಕನ್ನಡಪ್ರಭ ವಾರ್ತೆ ಉಡುಪಿ

ಬಿಜೆಪಿಯಲ್ಲಿ ಇನ್ನು ದುಡ್ಡಿಲ್ಲದ ಸಾಮಾನ್ಯ ಕಾರ್ಯಕರ್ತರು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವುದು ಕನಸಿನ ಮಾತು ಎಂಬುದು ಸಾಬೀತಾಗಿದೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಆರೋಪಿಸಿದ್ದಾರೆ.

ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಸೋತ ಬಳಿಕ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು.

ಹಿಂದೆ ಪಕ್ಷಕ್ಕಾಗಿ ಹತ್ತಿಪ್ಪತ್ತು ವರ್ಷ ದುಡಿದು ಅವಕಾಶ ವಂಚಿತರಾದವರಿಗೆ ವಿಧಾನ ಪರಿಷತ್ತಿನ ಟಿಕಟ್‌ ಸಿಗುತ್ತಿತ್ತು, ಆದರೆ ಇನ್ನು ಮುಂದೆ ಹಾಗಿಲ್ಲ, ಹಣ ಇದ್ದವರು ಮಾತ್ರ ಸ್ಪರ್ಧಿಸಬಹುದು, ಇದೇ ಮೊದಲ ಬಾರಿಗೆ ಕ್ಷೇತ್ರಾದ್ಯಂತ ಮತದಾರರಿಗೆ ಹಣ ಹಂಚಲಾಗಿದೆ ಎಂದರು. ಹೆಚ್ಚು ಮತಗಳಿಂದ ಗೆಲ್ಲುತ್ತೇನೆ ಎಂಬ ಭರವಸೆ ಇತ್ತು, ಆದರೆ ಈ ಮಟ್ಟದ ಸೋಲನ್ನು ನಾನು ನಿರೀಕ್ಷಿಸಿರಲಿಲ್ಲ. ಉಡುಪಿ, ದ.ಕ., ಶಿವಮೊಗ್ಗದ ಅನೇಕ ಬಿಜೆಪಿ ನಾಯಕರು ಕರೆ ಮಾಡಿ ಬೆಂಬಲ ವ್ಯಕ್ತಪಡಿಸಿದ್ದರು. ಸಾತ್ವಿಕವಾಗಿ ಚುನಾವಣೆಯನ್ನು ಎದುರಿಸಿದ್ದೇನೆ. ಸೋಲನ್ನು ಸವಾಲಾಗಿ ಸ್ವೀಕರಿಸಿ, ಸಕ್ರಿಯವಾಗಿ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದರು. ನನ್ನ ಸಂದೇಶ ತಲುಪಿದೆ: ಪಕ್ಷ ತಪ್ಪು ನಿರ್ಧಾರಗಳನ್ನು ಮಾಡಬಾರದು, ಮಾಡಿದರೆ ಕಾರ್ಯಕರ್ತರು ಪ್ರತಿಭಟಿಸುತ್ತಾರೆ ಎಂಬ ಸಂದೇಶವನ್ನು ಪಕ್ಷಕ್ಕೆ ನೀಡುವುದಕ್ಕಾಗಿ ನಾನು ಸ್ಪರ್ಧಿಸಿದ್ದೆ. ಈ ಸಂದೇಶ ತಲುಪಿದೆ. ಆದ್ದರಿಂದಲೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಾರದ ಬಿಜೆಪಿ ರಾಜ್ಯಾಧ್ಯಕ್ಷರು, ಆರ್‌ಎಸ್‌ಎಸ್‌ ಮುಖಂಡರು ಕೂಡ ವಿಧಾನ ಪರಿಷತ್ ಚುನಾವಣಾ ಪ್ರಚಾರಕ್ಕೆ ಫೀಲ್ಡಿಗೆ ಬಂದಿದ್ದರು ಎಂದರು.

ಎಚ್ಚರಿಕೆ ಕೆಲಸ ಮಾಡಿದೆ: ಚುನಾವಣೆಯಲ್ಲಿ ಬಂಡಾಯವಾಗಿ ಸ್ಪರ್ಧಿಸುವ ಮೂಲಕ ನಾನು ಪಕ್ಷಕ್ಕೆ ನೀಡಿದ್ದ ಎಚ್ಚರಿಕೆ ಕೆಲಸ ಮಾಡಿದೆ. ಆದ್ದರಿಂದಲೇ ಹಿಂದುತ್ವದ ಪರ ಗಟ್ಟಿಯಾಗಿ ಧ್ವನಿ ಎತ್ತುವ ಸಿ. ಟಿ. ರವಿ ಅವರನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿ ಅವರಿಗೆ ನ್ಯಾಯ ನೀಡಿದೆ. ಇದು ನನಗೆ ಸಂತೋಷ ನೀಡಿದೆ ಎಂದು ಭಟ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷರಾದ ಉಪೇಂದ್ರ ನಾಯಕ್, ಜೆರಾಲ್ಡ್ ಫೆರ್ನಾಂಡಿಸ್, ಬೆಂಬಲಿಗರಾದ ಶಿವರಾಮ ಉಡುಪ, ರೋಶನ್ ಶೆಟ್ಟಿ, ಮಹೇಶ್ ಠಾಕೂರ್ ಇದ್ದರು.ನನಗೆ ಕೋಟ ಸೀಟ್ ನ ಆಫರ್ ಇತ್ತು...

ನಾನು ನಾಮಪತ್ರ ಸಲ್ಲಿಸಿದ ಮೇಲೆ, ನಾಮಪತ್ರ ಹಿಂಪಡೆಯಲು, ತೆರವಾಗುವ ಕೋಟ ಶ್ರೀನಿವಾಸ ಪೂಜಾರಿ ಅವರ ಸ್ಥಾನವನ್ನು ನೀಡುವುದಾಗಿ ಬಿಜೆಪಿಯಿಂದ ಆಫರ್ ಬಂದಿತ್ತು. ಆದರೆ ನಾನು ವಿಚಲಿತನಾಗಲಿಲ್ಲ, ಕೋಟ ಅವರಿಂದ ತೆರವಾಗುವ ಸ್ಥಾನಕ್ಕೆ ಆಸೆ ಪಡುವುದಿದ್ದರೆ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಲೇ ಇರಲಿಲ್ಲ ಎಂದು ರಘುಪತಿ ಭಟ್ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ