ವೈರಿ ರಾಷ್ಟ್ರ ಪಾಕಿಸ್ತಾನದ ಮೇಲೆ ಯಾರಿಗೆ ಪ್ರೀತಿ ಜಾಸ್ತಿಯಾಗಿದೆ ಅವರಿಗೆ ಕೈ ಮುಗಿಯುತ್ತೇವೆ, ಅಂತಹವರು ಪಾಕಿಸ್ತಾನಕ್ಕೆ ಹೋಗಿ, ನಿಮಗೆ ಪುಣ್ಯ ಬರುತ್ತದೆ ಎಂದು ಬಿಜೆಪಿ ಮುಖಂಡ ಅಶೋಕ ವನ್ನಾಲ ಹೇಳಿದರು.
ಗಜೇಂದ್ರಗಡ: ವೈರಿ ರಾಷ್ಟ್ರ ಪಾಕಿಸ್ತಾನದ ಮೇಲೆ ಯಾರಿಗೆ ಪ್ರೀತಿ ಜಾಸ್ತಿಯಾಗಿದೆ ಅವರಿಗೆ ಕೈ ಮುಗಿಯುತ್ತೇವೆ, ಅಂತಹವರು ಪಾಕಿಸ್ತಾನಕ್ಕೆ ಹೋಗಿ, ನಿಮಗೆ ಪುಣ್ಯ ಬರುತ್ತದೆ ಎಂದು ಬಿಜೆಪಿ ಮುಖಂಡ ಅಶೋಕ ವನ್ನಾಲ ಹೇಳಿದರು.ರಾಜ್ಯದಲ್ಲಿ ನಡೆಯುತ್ತಿರುವ ದೇಶವಿರೋಧಿ ಕೃತ್ಯಗಳನ್ನು, ಘೋಷಣೆಗಳು ಹಾಗೂ ದೇಶ ವಿಭಜನೆಯ ಹೇಳಿಕೆಗಳನ್ನು ಮತ್ತು ದೇಶ ಭಕ್ತಿ ಜಾಗೃತಿ ಹಿನ್ನೆಲೆ ಸ್ಥಳೀಯ ಬಿಜೆಪಿ ಯುವ ಘಟಕದಿಂದ ಮಂಗಳವಾರ ನಡೆದ ತಿರಂಗಾ ಯಾತ್ರೆಯಲ್ಲಿ ಮಾತನಾಡಿದರು.
ಒಡೆದಾಳುವ ನೀತಿ, ಅಲ್ಪಸಂಖ್ಯಾತರ ತುಷ್ಟಿಕರಣದ ರಾಜಕಾರಣ ಮಾಡುತ್ತಾ ಬಂದಿರುವ ಕಾಂಗ್ರೆಸ್‌ನ ದುರಾಡಳಿತದಿಂದ ರಾಜ್ಯ ಹಾಗೂ ದೇಶದಲ್ಲಿ ಭಾರತ ವಿರೋಧಿ ಮನಸ್ಥಿತಿಗಳ ಸಂಖ್ಯೆ ಉಲ್ಬಣಿಸುತ್ತಿದೆ ಎನ್ನುವುದಕ್ಕೆ ನಡೆದ ಬಾಂಬ್ ಸ್ಫೋಟ ಹಾಗೂ ದೇಶ ವಿರೋಧಿ ಘೋಷಣೆಗಳ ಘಟನೆಗಳು ಸಾಕ್ಷಿಯನ್ನು ಹೇಳುತ್ತಿವೆ. ಆದರೆ ಇಂತಹ ದೇಶ ವಿರೋಧಿ ಘಟನೆಗಳ ಸಂದರ್ಭದಲ್ಲಿಯೂ ಸಹ ಕಾಂಗ್ರೆಸ್ ದಿಟ್ಟ ನಿರ್ಧಾರವನ್ನು ಕೈಗೊಳ್ಳುವಲ್ಲಿ ಸಂಫೂರ್ಣವಾಗಿ ವಿಫಲವಾಗಿದೆ. ಪರಿಣಾಮ ಬೆಂಗಳೂರು, ಮಂಗಳೂರು ಸೇರಿ ದೇಶದ ವಿವಿಧೆಡೆ ನಡೆದ ದೇಶ ವಿರೋಧಿ ಘಟನೆಗಳಿಂದಾಗಿ ವಿಶ್ವಮಟ್ಟದಲ್ಲಿ ದೇಶಕ್ಕೆ ಹಿನ್ನಡೆಯಾಗಿದೆ ಎಂದು ಅವರು, ಬಿಜೆಪಿ ಎಂದರೆ ದೇಶ ಭಕ್ತರ, ರಾಷ್ಟ್ರವಾದಿಗಳ ಪಕ್ಷ. ಪ್ರಧಾನಿ ಮೋದಿ ಅವರ ೧೦ ವರ್ಷದ ಆಡಳಿತ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಹೀಗಾಗಿ ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ನಾವೆಲ್ಲ ಒಂದಾಗಿ ಸದೃಢ ಭಾರತ ರಾಷ್ಟ್ರದ ನಿರ್ಮಾಣಕ್ಕೆ ಮುಂದಾಗಬೇಕಿದೆ. ದೇಶ ಮೊದಲು ಎನ್ನುವ ಸಂಸ್ಕೃತಿ ನಮ್ಮಲ್ಲಿದೆ. ಆದರೆ ವಿಧಾನ ಸೌಧದ ಪಡಸಾಲೆಯಲ್ಲಿಯೇ ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರ ಮೇಲೆ ಸೂಕ್ತ ಹಾಗೂ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗುವುದರ ಜತೆಗೆ ಘಟನೆಯನ್ನು ಸಮರ್ಥಿಸುವವರ ರಾಜೀನಾಮೆ ಪಡೆದು ಜನತೆಯ ಕ್ಷಮೆಯನ್ನು ಸರ್ಕಾರ ಕೇಳಲಿ ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಪಟ್ಟಣದ ಬಿಜೆಪಿ ಕಾರ್ಯಾಲಯದಿಂದ ಆರಂಭವಾದ ಮೆರವಣಿಗೆಗೆ ಮಾಜಿ ಸಚಿವ ಕಳಕಪ್ಪ ಬಂಡಿ ಚಾಲನೆ ನೀಡಿ ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪಿಗಳಿಗೆ ತಕ್ಷಣವೇ ಶಿಕ್ಷೆ ಪ್ರಕಟಿಸಬೇಕು ಎಂದರು.
ಬಳಿಕ ತಿರಂಗಾ ಯಾತ್ರೆಯು ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದಿಂದ ಕಾಲಕಾಲೇಶ್ವರ ವೃತ್ತ ತಲುಪಿದ ನಂತರ ಸಭೆಯಾಗಿ ಮಾರ್ಪಟ್ಟಿತು.ಪುರಸಭೆ ಹಂಗಾಮಿ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಸ್ಥಾಯಿ ಸಮಿತಿ ಮಾಜಿ ಚೇರ್ಮನ್ ಕನಕಪ್ಪ ಅರಳಿಗಿಡದ, ಸದಸ್ಯರಾದ ಮುದಿಯಪ್ಪ ಮುಧೋಳ, ಸುಭಾಸ ಮ್ಯಾಗೇರಿ ಹಾಗೂ ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ, ನಗರ ಘಟಕ ರಾಜೇಂದ್ರ ಘೋರ್ಪಡೆ, ಆರ್.ಕೆ. ಚವ್ಹಾಣ, ಸಂಜೀವ ಜೋಶಿ, ಶ್ರೀನಿವಾಸ ಸವದಿ, ಸೂಗುರೇಶ ಕಾಜಗಾರ, ಬುಡ್ಡಪ್ಪ ಮೂಲಿಮನಿ, ಡಿ.ಜಿ.ಕಟ್ಟಿಮನಿ, ಸಂಜೀವ ದೇಸಾಯಿ, ಗುಲಾಂ ಹುನಗುಂದ ಸೇರಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.