ಸೂರ್ಯ, ಚಂದ್ರರಿರೋವರೆಗೆ ಶರಣರು ಅಜರಾಮರ

KannadaprabhaNewsNetwork |  
Published : Jul 06, 2025, 01:48 AM IST
ನಗರದ ಬಂಥನಾಳದ ಶ್ರೀ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಡಾ. ಫ.ಗು. ಹಳಕಟ್ಟಿಯವರ ೧೪೫ನೇ ಜನ್ಮ ದಿನೋತ್ಸವ ಮತ್ತು ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ  ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬಂಥನಾಳದ ಸಂಗನಬಸವ ಸ್ವಾಮೀಜಿ, ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿ ಸೇರಿದಂತೆ ಹಲವಾರು ಶರಣರು ಭೂಮಿ, ಸೂರ್ಯ, ಚಂದ್ರರು ಇರುವವರೆಗೆ ಅಜರಾಮರ ಎಂದು ಯರನಾಳ, ಉಕ್ಕಲಿಯ ಸಂಸ್ಥಾನ ವಿರಕ್ತಮಠದ ಗುರುಸಂಗನಬಸವ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಂಥನಾಳದ ಸಂಗನಬಸವ ಸ್ವಾಮೀಜಿ, ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿ ಸೇರಿದಂತೆ ಹಲವಾರು ಶರಣರು ಭೂಮಿ, ಸೂರ್ಯ, ಚಂದ್ರರು ಇರುವವರೆಗೆ ಅಜರಾಮರ ಎಂದು ಯರನಾಳ, ಉಕ್ಕಲಿಯ ಸಂಸ್ಥಾನ ವಿರಕ್ತಮಠದ ಗುರುಸಂಗನಬಸವ ಮಹಾಸ್ವಾಮಿಗಳು ಹೇಳಿದರು.

ನಗರದ ಬಂಥನಾಳದ ಶ್ರೀಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಸಿದ್ಧೇಶ್ವರ ಸಹಕಾರಿ ಬ್ಯಾಂಕ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಸಹಯೋಗದೊಂದಿಗೆ ವಚನ ಪಿತಾಮಹ ರಾವಬಹಾದ್ದೂರ ಡಾ.ಫ.ಗು.ಹಳಕಟ್ಟಿಯವರ ೧೪೫ನೇ ಜನ್ಮ ದಿನೋತ್ಸವ ಮತ್ತು ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಂಥನಾಳದ ಸಂಗನಬಸವ ಸ್ವಾಮಿಜಿ ಹಾಗೂ ಸಿದ್ಧೇಶ್ವರ ಮಹಾಸ್ವಾಮೀಜಿಯವರು ಮತ್ತು ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿ ಇವರೆಲ್ಲರು ಮಣ್ಣಿಗಾಗಿ ಹೊನ್ನುಗಾಗಿ ದುಡಿದವರಲ್ಲ. ನಾಡಿನ ಒಳಿತಿಗಾಗಿ ದುಡಿದವರು. ಇಂತಹ ಹಲವಾರು ಶರಣರು ಭೂಮಿ, ಸೂರ್ಯ, ಚಂದ್ರರು ಇರುವವರೆಗೂ ಅಜರಾಮರವಾಗಿ ಇರುತ್ತಾರೆ. ತನಗಾಗಿ ಬದುಕುತ್ತಿರುವವರನ್ನು ನೆನಸುವದಿಲ್ಲ, ನಾಡಿಗಾಗಿ ದುಡಿದವರನ್ನು ದಿನನಿತ್ಯ ಕಾಯಕದಲ್ಲಿ ನೆನೆಯಬೇಕಾಗುತ್ತದೆ. ಇಂತಹ ಹಿರಿಯರ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಲಿ ಎಂದು ಆಶಿರ್ವಚನ ನೀಡಿದರು.

ವಿಜಯಕುಮಾರ ಇಜೇರಿ ಮಾತನಾಡಿ, ಡಾ.ಪ.ಗು.ಹಳಕಟ್ಟಿಯವರು ಸ್ಮರಣಿಯ ಪುಣ್ಯ ಪುರುಷರು, ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂಶೋಧಿಸಿ, ಸಂಸ್ಕರಿಸಿ, ಪ್ರಕಟಿಸಿದ ಭಗೀರಥ ಸಾಹಿತಿಗಳು. ಅವರ ಸೇವೆ ಅಷ್ಟಕ್ಕೆ ಸಿಮಿತವಾಗದೆ ವಚನ ಸಾಹಿತ್ಯವನ್ನು ಮನೆಮನೆಗೆ ತಲುಪಿಸಿದ ಹಳಕಟ್ಟಿಯವರ ಸೇವಾ ಕಾರ್ಯ ಸ್ಮರಣಿಯವಾಗಿದೆ. ರಾಜಕೀಯ, ಸಾಮಾಜಿಕ, ಔದ್ಯೋಗಿಕ, ಶೈಕ್ಷಣಿಕ ಮುಂತಾದ ವಿಷಯಗಳನ್ನು ಒಳಗೊಂಡು ಕರ್ನಾಟಕ ಏಕಿಕರಣಕ್ಕೆ ನವಕರ್ನಾಟಕ ವಾರ ಪತ್ರಿಕೆ ಆರಂಭಿಸಿದರು. ಕೇವಲ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅರಿತ ಅವರು ಆರ್ಥಿಕ ಸ್ವಾವಲಂಬನೆಗಾಗಿ ೧೯೧೨ರಲ್ಲಿ ₹ ೨೫೦೦ ಶೇರು ಬಂಡವಾಳದೊಂದಿಗೆ ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌ ಸ್ಥಾಪಿಸಿದ್ದು, ಅದು ಈಗ ಸಾವಿರಾರು ಕೋಟಿ ವ್ಯವಹಾರ ನಡೆಸುತ್ತಿದೆ ಎಂದರು.

ಬ್ಯಾಂಕ್‌ ಉಪಾಧ್ಯಕ್ಷೆ ಸೌಭಾಗ್ಯ ಭೋಗಶೆಟ್ಟಿ ಮಾತನಾಡಿ, ಶರಣರ, ಹಿರಿಯರ, ಗ್ರಾಹಕರ ಮಾರ್ಗದರ್ಶನದಿಂದ ಬ್ಯಾಂಕ್‌ ಪ್ರಗತಿಯಲ್ಲಿದೆ. ಸದಾ ತಮ್ಮೆಲ್ಲರ ಮಾರ್ಗದರ್ಶನ ಇರಲಿ ಎಂದು ಕೋರಿದರು.

ಸಾಹಿತಿ ಅಶೋಕ ಹಂಚಲಿ ಮಾತನಾಡಿ, ೧೨ನೇ ಶತಮಾನದಲ್ಲಿ ಶರಣರು ಬರೆದ ವಚನಗಳನ್ನು ಸಂರಕ್ಷಣೆ ಮಾಡುವುದೆ ಒಂದು ಸವಾಲಾಗಿತ್ತು. ಡಾ.ಪ.ಗು. ಹಳಕಟ್ಟಿಯವರು ಅದಕ್ಕಾಗಿ ಜೀವನನ್ನೇ ಮುಡುಪಿಟ್ಟವರು. ಗೋಳಗುಮ್ಮಟ ಹೆಸರಾದಂತೆ ಜಗತ್ತಿನಲ್ಲಿಯೆ ಶರಣರ ವಚನಗಳು ಬೆಳಕಿಗೆ ಬಂದಿವೆ. ತುತ್ತಿಗಾಗಿ ಬದುಕಿದವರಲ್ಲ ತತ್ವಕ್ಕಾಗಿ ಬದುಕಿವರು ಎಂದು ಸ್ಮರಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಯಲಿಗಾರ ಮಾತನಾಡಿ, ಹಲವಾರು ಮಹನಿಯರಂತೆ ಸುಮ್ಮನೆ ಬಂದು ಹೋದವರಲ್ಲ ಡಾ.ಬಾಬಾಸಹೇಬ ಅಂಬೇಡ್ಕರ್‌, ಎಂ.ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ, ಚಂದ್ರಗುಪ್ತ ಮೌರ್ಯ, ಡಾ.ಪ.ಗು.ಹಳಕಟ್ಟಿ ಹಲವಾರು ಮಹನಿಯರು ಕಷ್ಟದ ಜೀವನದ ಜೊತೆ ಹೆಸರು ಮಾಡಿದವರು ಎಂದು ಹೇಳಿದರು.

ವಿ.ಸಿ.ನಾಗಠಾಣ, ಜಂಬೂನಾಥ ಕಂಚಾಣಿ, ಸುರೇಶ ಗಚ್ಚಿನಕಟ್ಟಿ, ವಿಶ್ವನಾಥ ಪಾಟೀಲ, ಈರಣ್ಣ ಪಟ್ಟಣಶೆಟ್ಟಿ, ರಾಜೇಂದ್ರ ಪಾಟೀಲ, ರಮೇಶ ಬಿದನೂರ, ರವೀಂದ್ರ ಬಿಜ್ಜರಗಿ, ವೈಜನಾಥ ಕರ್ಪೂರಮಠ ಮುಂತಾದವರು ಇದ್ದರು.

PREV