ಚಿನ್ನಸಂದ್ರ ಬಳಿ ಟೀ ಕುಡಿಯಲೆಂದು ಎಲೆಕ್ಟಿಕ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಇಕೋ ಕಾರು ಭೀಕರವಾಗಿ ಡಿಕ್ಕಿ ಹೊಡೆದಿದೆ.
ಚಿಂತಾಮಣಿ ಬೆಂಗಳೂರು ರಸ್ತೆಯಲ್ಲಿ ನವದಂಪತಿ ದುರ್ಮರಣ । ಬೈಕ್ ಡಿಕ್ಕಿ ಹೊಡೆದ ಪಾನ್ ಮಸಲಾ ಮಾರಾಟಗಾರನ ಕಾರು
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಟೀ ಕುಡಿಯಲು ಹೋದ ನವದಂಪತಿ ಶವವಾಗಿ ಮರಳಿದ ಹೃದಯ ವಿದ್ರಾವಕ ದುರಂತ ಚಿಂತಾಮಣಿ-ಬೆಂಗಳೂರು ರಸ್ತೆಯ ಚಿನ್ನಸಂದ್ರ ಸಮೀಪದ ಯಂಗ್ ಸೈ ಬಳಿ ಭಾನುವಾರ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ನಡೆದಿದೆ. ಎಲೆಕ್ಟ್ರೀಕ್ ಬೈಕಿನಲ್ಲಿ ತೆರಳುತ್ತಿದ್ದ ದಂಪತಿಗೆ ಇಕೋ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ನಗರದ ಎಂಜಿ ರಸ್ತೆಯ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಶ್ರೀನಿವಾಸ್ ಜ್ಯುವೆಲರ್ಸ್ ಮಾಲೀಕನ ಪುತ್ರ ಷಣ್ಮುಖ (27) ಮತ್ತು ಪತ್ನಿ ಮಿಥಿಲಾ (24 ) ಮೃತ ದುರ್ದೈವಿಗಳು. ಕೇವಲ ಆರು ತಿಂಗಳ ಹಿಂದೆ ಮದುವೆಯಾಗಿದ್ದ ಈ ಜೋಡಿ, ಎರಡೂ ಕುಟುಂಬಗಳಿಗೆ ಏಕೈಕ ವಾರಸುದಾರರಾಗಿದ್ದರು. ಮದುವೆಯಾಗಿ ವರ್ಷವೂ ಕಳೆಯುವ ಮುನ್ನವೇ ನವದಂಪತಿ ಮಣ್ಣು ಸೇರಿರುವುದು ಇಡೀ ಕುಟುಂಬವೇ ಕಣ್ಣಿರುಡುವಂತೆ ಮಾಡಿದೆ.
ಚಿನ್ನಸಂದ್ರ ಬಳಿ ಟೀ ಕುಡಿಯಲೆಂದು ಎಲೆಕ್ಟಿಕ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಇಕೋ ಕಾರು ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ರಸ್ತೆ ಪಕ್ಕದ ಕಾಲುವೆಗೆ ಬಿದ್ದಿದ್ದು. ಬೈಕ್ ಮತ್ತು ಇಕೋ ಕಾರು ಎರಡೂ ಸಂಪೂರ್ಣ ನಜ್ಜುಗುಜ್ಜಾಗಿವೆ. ಅಪಘಾತದ ತೀವ್ರತೆಗೆ ನವದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರಿನಲ್ಲಿ ಬಿಹಾರ ಮೂಲದ ಪಾನ್ ಮಸಾಲಾ ಮಾರಾಟಗಾರರಾದ ಸೂರತ್ ಮತ್ತು ಅತುಲ್ ಕುಮಾರ್ ಪ್ರಯಾಣಿಸುತ್ತಿದ್ದು, ಅವರು ಬೆಂಗಳೂರಿಗೆ ವಾಪಸ್ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಇಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ವಿಷಯ ತಿಳಿದ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಮೃತರ ಪೋಷಕರು ಮತ್ತು ಸಂಬಂಧಿಕರು ಆಸ್ಪತ್ರೆಯ ಬಳಿ ಧಾವಿಸಿ ಬಂದಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ರೋದನ ಕಂಡವರ ಕಣ್ಣಲ್ಲಿ ನೀರು ತರಿಸುತ್ತಿತ್ತು.
ನಗರದಿಂದ ರಾತ್ರಿ ಸಮಯದಲ್ಲಿ ಹಲವಾರು ಯುವಕ ಯುವತಿಯರು ಸೇರಿದಂತೆ ಸಾಕಷ್ಟು ಮಂದಿ ಟೀ ಕುಡಿಯಲೆಂದೇ ಚಿನ್ನಸಂದ್ರಕ್ಕೆ ಹೋಗುವುದು ಸಾಮಾನ್ಯವಾಗಿದೆ. ಈ ಹಿಂದೆ ಇದೇ ರಸ್ತೆಯಲ್ಲಿ ಹಲವು ಅಪಘಾತಗಳು ಉಂಟಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ರಸ್ತೆಯಲ್ಲಿ ವಾಹನಗಳು ಅತಿವೇಗ, ರಸ್ತೆ ಪಕ್ಕದಲ್ಲಿ ಬೆಳಕಿನ ಕೊರತೆ ಮತ್ತು ರಾತ್ರಿ ಹೊತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವುದು ಅಪಘಾತಕ್ಕೆ ಆಹ್ವಾನ ನೀಡಿದಂತಿದೆ. ವಾಹನಸವಾರರು ಎಚ್ಚರದಿಂದ ವಾಹನ ಚಾಲನೆ ಮಾಡಬೇಕು ಏಕೆಂದರೆ ಎದುರು ಬದುರು ಬರುವ ವಾಹನ ಸವಾರರಿಗೆ ಕುಟುಂಬಗಳಿಗೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ವಾಹನ ಚಾಲನೆ ಮಾಡಿದರೆ ಅಪಘಾತಗಳಿಗೆ ಸ್ವಲ್ಪಮಟ್ಟಿಗಾದರೂ ಕಡಿವಾಣ ಹಾಕಬಹುದೆಂಬುದು ಸಾರ್ವಜನಿಕರ ಮಾತುಗಳಿಂದ ತಿಳಿದುಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.