ಸೂಡಾ ವತಿಯಿಂದ ವಾಜಪೇಯಿ ಬಡಾವಣೆಯಿಂದ 3.70 ಕೋಟಿ ರು. ವೆಚ್ಚದಲ್ಲಿ ಸುಮಾರು 1200 ಮೀಟರ್ ಉದ್ದದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು ಗೆಜ್ಜೇನಹಳ್ಳಿ-ಸೋಮಿನಕೊಪ್ಪ ರಸ್ತೆಗೆ ಲಿಂಕ್ ಮಾಡಲಾಗುವುದು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೂಡಾ ವತಿಯಿಂದ ವಾಜಪೇಯಿ ಬಡಾವಣೆಯಿಂದ 3.70 ಕೋಟಿ ರು. ವೆಚ್ಚದಲ್ಲಿ ಸುಮಾರು 1200 ಮೀಟರ್ ಉದ್ದದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು ಗೆಜ್ಜೇನಹಳ್ಳಿ-ಸೋಮಿನಕೊಪ್ಪ ರಸ್ತೆಗೆ ಲಿಂಕ್ ಮಾಡಲಾಗುವುದು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.
ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಗುರುವಾರ 60 ಮೀ ಅಗಲದ ಮಹಾಯೋಜನೆಯ ಹೊರ ವರ್ತುಲ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ವಾಜಪೇಯಿ ಬಡಾವಣೆಯ ರಿಂಗ್ ರಸ್ತೆ ಅಭಿವೃದ್ದಿ ಕಾಮಗಾರಿಗೆ ಸುಮಾರು 5 ಕೋಟಿ ರು. ಮೊತ್ತದ ಟೆಂಡರ್ ಕರೆಯಲಾಗಿದ್ದು, 3.70 ಕೊಟಿ ರು. ಕರಾರು ಮೊತ್ತದಲ್ಲಿ ಕಾಮಗಾರಿ ಆರಂಭವಾಗಲಿದೆ. 34 ಕಿ.ಮೀ. ರಿಂಗ್ ರಸ್ತೆ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ಸಿದ್ದಪಡಿಸಲಾಗಿದ್ದು, ಹಂತ ಹಂತವಾಗಿ ರಸ್ತೆ ನಿರ್ಮಾಣ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಅಪಾರ್ಟ್ಮೆಂಟ್ ನಿರ್ಮಾಣ:
ನಗರ ವೇಗವಾಗಿ ಬೆಳೆಯುತ್ತಿದ್ದು, ನಿವೇಶನ, ಜಾಗಗಳು ದುಬಾರಿಯಾಗಿವೆ. ಸಾಮಾನ್ಯ ಜನರಿಗೆ ನಿವೇಶನ ಕೊಂಡು ಮನೆ ಕಟ್ಟಿಸುವುದು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಊರಗಡೂರಿನಲ್ಲಿ 4 ಎಕರೆ ಜಾಗದಲ್ಲಿ 1, 2 ಮತ್ತು 3 ಬಿಎಚ್‌ಕೆಯ ಸುಮಾರು 1000 ಫ್ಲಾಟ್‌ಗಳನ್ನು ನಿರ್ಮಿಸುವ ಯೋಜನೆಯು ಆಡಳಿತಾತ್ಮಕ ಮಂಜೂರಾತಿಗೆ ಹೋಗಿದ್ದು, ಇನ್ನು 15 ರಿಂದ 20 ದಿನಗಳಲ್ಲಿ ಮಂಜೂರಾತಿ ದೊರೆತು ಕಾಮಗಾರಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.
ಜೆ.ಎಚ್. ಪಟೇಲ್ ಬಡಾವಣೆಯ ಒಂದೂಕಾಲು ಎಕರೆಯಲ್ಲಿ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆಯಿದ್ದು ಖಾಸಗಿ ಅಪಾರ್ಟ್ಮೆಂಟ್‌ನಲ್ಲಿರುವಂತೆ ಸ್ವಿಮ್ಮಿಂಗ್ ಪೂಲ್, ಪಾರ್ಕ್, ಕ್ಲಬ್ ಹೌಸ್, ಸಭಾಂಗಣ ಇರಲಿವೆ ಎಂದರು.
ಮಾಲ್‌ಗಳ ನಿರ್ಮಾಣ:
ಸಾಮಾನ್ಯ ಜನರ ಅನುಕೂಲಕ್ಕಾಗಿ ಗೋಪಾಲಗೌಡ ಬಡಾವಣೆಯ ವಿವೇಕಾನಂದ ಬಡಾವಣೆಯಲ್ಲಿ ಒಂದೂಕಾಲು ಎಕರೆ ಜಾಗದಲ್ಲಿ 1 ಮಾಲ್ ಮತ್ತು ಸೋಮಿನಕೊಪ್ಪ 200 ಮೀ ರಸ್ತೆಯಲ್ಲಿ 1 ಒಟ್ಟು 2 ಮಾಲ್‌ಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದರು.
ಶಿವಮೊಗ್ಗ ನಗರವನ್ನು ಸುಂದರಗೊಳಿಸಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸೂಡಾ ವತಿಯಿಂದ ಪಾರ್ಕುಗಳ ಅಭಿವೃದ್ದಿ, ಕೆರೆಗಳ ಅಭಿವೃದ್ದಿ, ಅಪಾರ್ಟ್ಮೆಂಟ್ ನಿರ್ಮಾಣ ಹೀಗೆ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ನಗರದ ನಾಗರಿಕರು, ಹಿರಿಯ ನಾಗರೀಕರು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ 100 ಪಾರ್ಕುಗಳನ್ನು ಅಭಿವೃದ್ದಿಪಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ವಾಕಿಂಗ್ ಪಾಥ್, ಲೈಟಿಂಗ್, ಗಿಡ ನೆಡಲು ಸ್ಥಳಾವಕಾಶ ಸೇರಿ 50 ಪಾರ್ಕ್ ಅಭಿವೃದ್ದಿಪಡಿಸಲಾಗಿದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸೂಡಾ ವತಿಯಿಂದ ಜನ ಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ಹಂಚಿಕೆ ಮಾಡುವ ಆಗುತ್ತಿದೆ. ಜೊತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ದಿ, ಕೆರೆಗಳು, ಪಾರ್ಕ್‌ಗಳ ಅಭಿವೃದ್ದಿ ಕಾರ್ಯವೂ ಆಗುತ್ತಿದೆ ಎಂದರು.
ನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 12 ಎಕರೆ ಜಾಗ ಮಂಜೂರಾಗಿದ್ದು, ವೇಗವಾಗಿ ಕಾಮಗಾರಿ ನಡೆಯಬೇಕಿದೆ. ಜತೆಗೆ ಫುಟ್‌ಬಾಲ್ ಕ್ರೀಡಾಂಗಣ ಮಂಜೂರಾತಿ ಬಗ್ಗೆಯೂ ಕ್ರೀಡಾ ಸಚಿವರ ಬಳಿ ಮಾತನಾಡುವುದಾಗಿ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.