ಕನ್ನಡಪ್ರಭ ವಾರ್ತೆ ನಂಜನಗೂಡು
ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಸಂಭ್ರಮ, ಸಡಗರದಿಂದ ಪಾಲ್ಗೊಂಡು ರಥೋತ್ಸವಗಳ ವೈಭವವನ್ನು ಕಂಡು ಭಕ್ತಿಯಿಂದ ಹಣ್ಣು ಧವನ ಎಸೆದು ಹರಕೆ ತೀರಿಸಿದರು.
ಚಿಕ್ಕಜಾತ್ರಾ ಮಹೋತ್ಸ ಹಾಗೂ ಹುಣ್ಣಿಮೆಯ ಅಂಗವಾಗಿ ಬೆಳಗ್ಗೆ 4ರಿಂದಲೇ ದೇವಾಲಯದಲ್ಲಿ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿ ಅವರಿಗೆ ಕ್ಷೀರಾಭಿಷೇಕ, ಫಲಪಂಚಾಮೃತಾಭಿಷೇಕ ಹಾಗೂ ಮಹಾನ್ಯಾಸ ಪೂರ್ವಕವಾಗಿ ರುದ್ರಾಭಿಷೇಕವನ್ನು ನೆರವೇರಿಸಲಾಯಿತು.ನಂತರ ದೇವಾಲಯದ ಪ್ರಧಾನ ಅರ್ಚಕರಾದ ನಾಗಚಂದ್ರ ಧೀಕ್ಷಿತ್ ಅವರ ನೇತೃತ್ವದಲ್ಲಿ ಪ್ರಾತಃಕಾಲ ಪೂಜೆ, ನಿತ್ಯೋತ್ಸವ ಹಾಗೂ ಸಂಗಮಕಾಲ ಪೂಜೆ, ಮಾಧ್ಯಾನಕಾಲ ಪೂಜೆಯೊಂದಿಗೆ ಮಹಾಮಂಗಳಾರತಿಯನ್ನು ನೆರವೇರಿಸಿದ ಬಳಿಕ ದೇವಾಲಯದ ಒಳಾವರಣದಲ್ಲಿ ಗಣಪತಿಪೂಜೆ, ನವಗ್ರಹಪೂಜೆ, ಸ್ವಾಮಿಯವರ ಉತ್ಸವವನ್ನು ನೆರವೇರಿಸಿದ ನಂತರ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ, ಬೆಳಗ್ಗೆ 9 ರಿಂದ 9.30ಕ್ಕೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ರಥೋತ್ಸವದಲ್ಲಿ ದೇವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ಮಹಾಮಂಗಳಾರತಿ ನೆರವೇರಿಸುವುದರೊಂದಿಗೆ ರಥೋತ್ಸಕ್ಕೆ ಚಾಲನೆ ದೊರಕಿತು.
ರಥ ಸಂಚರಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರು ದೇವರ ದರ್ಶನ ಪಡೆದು ಹಣ್ಣು-ಧವನ ಎಸೆದು ಹರಕೆ ತೀರಿಸಿ ಭಕ್ತಿ ಮೆರೆದರು. ನಂತರ ಹಂಸವಾಹನ ಉತ್ಸವ, ಸಂಜೆ ನಟೇಶ ಉತ್ಸವಗಳು ಜರುಗುವ ಮೂಲಕ ರಥೋತ್ಸವವು ಯಶಸ್ವಿಯಾಯಿತು.
ಚಿಕ್ಕಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳು ಪ್ರಸಾದ ವಿತರಣೆ ಮಾಡಿದವು. ದೇವಾಲಯದ ದಾಸೋಹ ಭವನದಲ್ಲಿ ವಿಶೇಷವಾಗಿ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.