ಜ್ಯುವೆಲ್ಲರಿ ಶಾಪ್‌ನಲ್ಲಿ 35 ಕೆಜಿ ಬೆಳ್ಳಿ ಕದ್ದ ಮೂವರು ಸೆರೆ

KannadaprabhaNewsNetwork |  
Published : May 27, 2026, 04:30 AM IST
ಕಳ್ಳತನ  | Kannada Prabha

ಸಾರಾಂಶ

ಇತ್ತೀಚಿಗೆ ಹೆಸರಘಟ್ಟ ಮುಖ್ಯರಸ್ತೆಯ ಚಿನ್ನಾಭರಣ ಮಾರಾಟ ಮಳಿಗೆ ಕನ್ನ ಪ್ರಕರಣ ಸಂಬಂಧ ಮೂವರು ದುಷ್ಕರ್ಮಿಗಳನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚಿಗೆ ಹೆಸರಘಟ್ಟ ಮುಖ್ಯರಸ್ತೆಯ ಚಿನ್ನಾಭರಣ ಮಾರಾಟ ಮಳಿಗೆ ಕನ್ನ ಪ್ರಕರಣ ಸಂಬಂಧ ಮೂವರು ದುಷ್ಕರ್ಮಿಗಳನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತೆಲಂಗಾಣ ರಾಜ್ಯ ರಂಗರೆಡ್ಡಿ ಜಿಲ್ಲೆಯ ಜಾಟ್ ಸುರೇಶ್‌, ರಾಜಸ್ಥಾನದ ಧನ್‌ರಾಮ್ ಹಾಗೂ ನೇಮಿಚಂದ್ ಪಟೇಲ್ ಬಂಧಿತರಾಗಿದ್ದು, ಆರೋಪಿಗಳಿಂದ 98.39 ಲಕ್ಷ ರು.ಮೌಲ್ಯದ 35.8 ಕೆಜಿ ಬೆಳ್ಳಿ ವಸ್ತುವನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮಹೇಂದ್ರ ಪತ್ತೆಗೆ ಪೊಲೀಸರು ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಕೆಲ ದಿನಗಳ ಹಿಂದೆ ಹೆಸರಘಟ್ಟ ಮುಖ್ಯರಸ್ತೆಯ ಚಿನ್ನದ ವ್ಯಾಪಾರಿ ಜೆ.ಮಹೇಂದ್ರ ಕುಮಾರ್‌ಗೆ ಸೇರಿದ ಮಳಿಗೆಯ ಹಿಂಬದಿಯ ಗೋಡೆ ಕೊರೆದು ಆರೋಪಿಗಳು ಕನ್ನ ಹಾಕಿದ್ದರು. ಈ ದರೋಡೆಕೋರರ ಪತ್ತೆಗೆ ವಾಯುವ್ಯ ವಿಭಾಗದ ಡಿಸಿಪಿ ಡಿ.ಎಲ್.ನಾಗೇಶ್‌ ಮಾರ್ಗದರ್ಶನದಲ್ಲಿ ಚಿಕ್ಕಬಾಣವರ ಉಪ ವಿಭಾಗದ ಎಸಿಪಿ ಕೆ.ವೈ.ರವಿಕುಮಾರ್‌ ನೇತೃತ್ವದ ಬಾಗಲಗುಂಟೆ ಠಾಣೆ ಇನ್ಸ್‌ಪೆಕ್ಟರ್‌ ಪಿ.ಗಂಗರುದ್ರಯ್ಯ ತಂಡವು ತನಿಖೆಗಿಳಿಯಿತು. ಎರಡು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಕೊನೆಗೆ ಮೂವರನ್ನು ಬಂಧಿಸಿ ಪೊಲೀಸರು ಕರೆತಂದಿದ್ದಾರೆ.

ಹೇಗೆ ಕನ್ನ?

ಈ ಕೃತ್ಯ ಮಾಸ್ಟರ್‌ ಮೈಂಡ್ ಮಹೇಂದ್ರ ಆಗಿದ್ದು, ಆತ ಪತ್ತೆಯಾದರೆ ಇಡೀ ಸಂಚು ಬಯಲಾಗುತ್ತದೆ. ಈತ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ದರೋಡೆ ಕೃತ್ಯಗಳಿಗೆ ಮಹೇಂದ್ರ ಕುಖ್ಯಾತನಾಗಿದ್ದಾನೆ. ಜನನಿಬಿಡ ಪ್ರದೇಶದಲ್ಲಿ ಚಿನ್ನಾಭರಣ ಮಳಿಗೆಗೆ ಗುರಿಯಾಗಿಸಿ ತನ್ನ ಸಹಚರರ ಮೂಲಕ ಕನ್ನ ಹಾಕುತ್ತಿದ್ದ. ಅಂತೆಯೇ ಹೆಸರಘಟ್ಟದ ಎಂ.ಡಿ.ಜ್ಯುವಲ್ಲರ್ಸ್‌ಗೆ ದರೋಡೆಗೆ ಮಹೇಂದ್ರ ಸಂಚು ರೂಪಿಸಿದ್ದ. ಹಣದಾಸೆ ತೋರಿಸಿ ತನ್ನೂರಿನ ಮೂವರು ಸ್ನೇಹಿತರನ್ನು ಆತ ಬಳಸಿಕೊಂಡಿದ್ದಾನೆ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಆರೋಪಿಗಳಿಗೆ ಮಹೇಂದ್ರ ಕಾಂಚಾಣದ ಆಮಿಷವೊಡ್ಡಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಸರಘಟ್ಟ ರಸ್ತೆಯಲ್ಲಿ ಎಂ.ಡಿ.ಜ್ಯುವೆಲ್ಲರ್ಸ್ ಹೆಸರಿನಲ್ಲಿ ರಾಜಸ್ಥಾನ ಮೂಲದ ಮಹೇಂದ್ರ ಕುಮಾರ್ ಚಿನ್ನಾಭರಣ ಮಾರಾಟ ಮಳಿಗೆ ಇಟ್ಟಿದ್ದಾರೆ. ತಮ್ಮ ಕುಟುಂಬದ ಜತೆ ಗೋಕುಲ 1ನೇ ಹಂತದಲ್ಲಿ ಅವರು ನೆಲೆಸಿದ್ದು, ಪ್ರತಿ ದಿನ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆವರೆಗೆ ಮಹೇಂದ್ರ ಅಂಗಡಿ ವಹಿವಾಟು ನಡೆಸುತ್ತಿದ್ದರು. ಈ ಅಂಗಡಿಗೆ ಏ.27 ರಂದು ರಾತ್ರಿ ಹಿಂಬದಿಯಿಂದ ಗೋಡೆ ಕೊರೆದು ಮಹೇಂದ್ರ ತಂಡ ಕನ್ನ ಹಾಕಿತ್ತು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ದರೋಡೆಕೋರರ ಸುಳಿವು ಸಿಕ್ಕಿದೆ. ಈ ಬಾತ್ಮಿದಾರರ ಮಾಹಿತಿ ಆಧರಿಸಿ ಬೆನ್ನತ್ತಿದ ತನಿಖಾ ತಂಡ, ಕೊನೆಗೆ ರಾಜಸ್ಥಾನದಲ್ಲಿ ಧನ್ ರಾಮ್ ಹಾಗೂ ಪಟೇಲ್‌ನನ್ನು ಸೆರೆ ಹಿಡಿದಿದ್ದಾರೆ. ಈ ಇಬ್ಬರು ನೀಡಿದ ಮಾಹಿತಿ ಮೇರೆಗೆ ಆಂಧ್ರಪ್ರದೇಶದಲ್ಲಿ ಮತ್ತೊಬ್ಬನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಗ್ರಾಹಕನ ಸೋಗಿನಲ್ಲಿ ಮಾಹಿತಿ ಕಲೆ ಹಾಕಿ ಸಂಚು

ಹೆಸರಘಟ್ಟ ರಸ್ತೆಯ ಎಂ.ಡಿ.ಜ್ಯುವೆಲರ್ಸ್ ದರೋಡೆಗೆ ನಿರ್ಧರಿಸಿ ಮಹೇಂದ್ರ ತಂಡ ಬಂದಿತ್ತು. ಕೃತ್ಯಕ್ಕೂ 3 ದಿನಗಳ ಮುನ್ನ ನಗರಕ್ಕೆ ಆರೋಪಿಗಳ ಬಂದಿದ್ದರು. ಆಗ ಚಿನ್ನಾಭರಣ ಖರೀದಿಸುವ ಸೋಗನಲ್ಲಿ ಆ ಮಳಿಗೆಗೆ ತೆರಳಿ ಅಲ್ಲಿನ ಭದ್ರತಾ ವ್ಯವಸ್ಥೆ ಬಗ್ಗೆ ಮಹೇಂದ್ರ ಮಾಹಿತಿ ಕಲೆ ಹಾಕಿದ್ದ. ಎರಡು ದಿನ ಸುತ್ತಾಡಿ ರೇಖಿ ಮಾಡಿ ಕೊನೆಗೆ ಏ.27 ರಂದು ರಾತ್ರಿ ಸಂಚು ಕಾರ್ಯರೂಪಕ್ಕಿಳಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಜೆ ಧಾರಾಕಾರ ಮಳೆಗೆ 57 ಮರಗಳು ಧರೆಗೆ
ಕಾಶಿಗೆ ಹೋಗಿದ್ದ ಅಧಿಕಾರಿ ಮನೇಲಿಚಿನ್ನ ದೋಚಿದ್ದ ಇಬ್ಬರು ಕಳ್ಳರ ಸೆರೆ