ಕನ್ನಡಪ್ರಭ ವಾರ್ತೆ ಮಂಡ್ಯ
ಕೇರಳಂ ರಾಜ್ಯದ ಕೋಜಿಕೋಡ್ ಮೂಲದವರಾದ ಬಾಸಿಲ್ (೨೧), ಸಪ್ನಾ (೨೨), ಲಿಫೈಲ್ (೨೫) ಮೃತ ದುರ್ದೈವಿಗಳು, ಥಾರ್ ಜೀಪು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅಪಘಾತ ಸಂಭವಿಸುತ್ತಿದ್ದಂತೆ ಆರ್‌ಟಿಓ ಅಧಿಕಾರಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನದ ವರ್ತನೆಗೆ ಇಂಡುವಾಳು ಗ್ರಾಮಸ್ಥರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ವಿವರ:ಕೋಜಿಕೊಡ್ ಮೂಲದವರಾದ ಬಾಸಿಲ್, ಲಿಫೈಲ್ ಮತ್ತು ಸಪ್ನಾ ಅವರು ತಮ್ಮ ಥಾರ್ ಕಾರಿನಲ್ಲಿ ಕ್ಯಾಲಿಕಟ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಬೆಂಗಳೂರು- ಮೈಸೂರು ಹೆದ್ದಾರಿಯ ಎಕ್ಸ್‌ಪ್ರೆಸ್-ವೇನಲ್ಲಿ ಇಂಡುವಾಳು ಸಮೀಪ ಹೆದ್ದಾರಿಯ ಒಂದು ಪಥದಲ್ಲಿ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿ ಸಾಗುತ್ತಿತ್ತು. ನಿಗದಿಗಿಂತ ಹೆಚ್ಚು ಜಲ್ಲಿ ತುಂಬಿದೆ ಎಂಬ ಕಾರಣಕ್ಕೆ ಆರ್‌ಟಿಓ ಅಧಿಕಾರಿಗಳು ತಮ್ಮ ವಾಹನದಲ್ಲಿ ಟಿಪ್ಪರ್ ಲಾರಿಯನ್ನು ಬೆನ್ನಟ್ಟಿ ಚಾಲಕನಿಗೆ ಪಕ್ಕಕ್ಕೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದಾರೆ.
ಟಿಪ್ಪರ್ ಲಾರಿಗೆ ಹೊಡೆದ ಡಿಕ್ಕಿಯ ರಭಸಕ್ಕೆ ಬಾಸಿಲ್, ಸಪ್ನಾ ಅವರು ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಲಿಫೈಲ್ ಎಂಬಾತನನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಘಟನೆಯಿಂದ ಎಕ್ಸ್‌ಪ್ರೆಸ್ ವೇನಲ್ಲಿ ಕೆಲಸಮಯದವರೆಗೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
----
ಎಕ್ಸ್‌ಪ್ರೆಸ್-ವೇನಲ್ಲಿ ಚಲಿಸುವ ವಾಹನಗಳು ಅತಿ ವೇಗದಲ್ಲಿರುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾನೂನುಬಾಹಿರವಾಗಿ ಗಣಿ ಸಾಮಗ್ರಿಗಳನ್ನು ತುಂಬಿಕೊಂಡು ಸಾಗುವ ವಾಹನಗಳನ್ನು ನಿರ್ಗಮನ ದ್ವಾರ ಅಥವಾ ಟೋಲ್‌ಗಳಲ್ಲಿ ಹಿಡಿಯುವುದು ಸರಿಯಾದ ಕ್ರಮ. ಅದನ್ನು ಬಿಟ್ಟು ಎಕ್ಸ್‌ಪ್ರೆಸ್-ವೇನಲ್ಲಿ ಬೆನ್ನಟ್ಟಿಕೊಂಡು ಬಂದು ವಾಹನಗಳನ್ನು ನಿಲ್ಲಿಸುವಂತಹ ದುಂಡಾವರ್ತನೆ ಪ್ರದರ್ಶಿಸಿದ್ದರಿಂದ ಮೂವರು ಅಮಾಯಕ ಜೀವಗಳು ಬಲಿಯಾಗುವಂತಾಗಿದೆ.
ಸಂಚಾರ ನಿಯಂತ್ರಣ ಮತ್ತು ವಾಹನಗಳ ತಪಾಸಣೆ ಹೆಸರಿನಲ್ಲಿ ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆದು ನಡೆಸುವ ಕಾರ್ಯಾಚರಣೆಗಳು ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವಂತಿರಬಾರದು. ಅಧಿಕಾರಿಗಳ ಕರ್ತವ್ಯ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ ಅಥವಾ ನಿಯಮ ಉಲ್ಲಂಘನೆ ಯಾರದೇ ಆಗಿದ್ದರೂ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.