ಯಲಬುರ್ಗಾಕ್ಕೆ ಮೂರು ಕೆಪಿಎಸ್ ಶಾಲೆ ಮಂಜೂರು

KannadaprabhaNewsNetwork |  
Published : Oct 22, 2025, 01:03 AM IST
೨೧ ವೈಎಲ್‌ಬಿ ೦೧ಕೆಪಿಎಸ್ ಶಾಲೆಯಾಗಿ ಉನ್ನತೀಕರಣಗೊಂಡ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊರನೋಟ. | Kannada Prabha

ಸಾರಾಂಶ

ಪ್ರಾಥಮಿಕದಿಂದ ಪ್ರೌಢಶಾಲಾ ಹಂತಕ್ಕೆ ಮುಂದುವರೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಕಡಿಮೆ ಆಗುತ್ತಿರುವುದನ್ನು ಗಮನಿಸಿದ ಸರ್ಕಾರ, ಕೆಪಿಎಸ್ ಶಾಲೆಗಳಲ್ಲಿ ಗುಣಮಟ್ಟದ ಸಾರ್ವಜನಿಕ ಶಿಕ್ಷಣಕ್ಕಾಗಿ ಅಭೂತಪೂರ್ವ ಬದಲಾವಣೆಯ ಚೌಕಟ್ಟು ಒದಗಿಸಲು ಕ್ರಮ ವಹಿಸಿದೆ

ಪಾಲಾಕ್ಷ ಬಿ. ತಿಪ್ಪಳ್ಳಿ ಯಲಬುರ್ಗಾ

ಯಲಬುರ್ಗಾ-ಕುಕನೂರು ತಾಲೂಕಿಗೆ ಹೊಸದಾಗಿ ಹಿರೇಮ್ಯಾಗೇರಿ, ಬನ್ನಿಕೊಪ್ಪ ಮತ್ತು ಗಾಣಧಾಳ ಸರ್ಕಾರಿ ಹಿರಿಯ ಮತ್ತು ಪ್ರೌಢ ಶಾಲೆಗಳು ಕೆಪಿಎಸ್‌ನಿಂದ ಪಿಯುವರೆಗೆ ಮಂಜೂರಾಗಿದ್ದು, ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗುವುದಲ್ಲದೆ ಪಠ್ಯಕ್ರಮ ಶಿಕ್ಷಣದ ಜತೆಗೆ ಕೌಶಲ ಆಧಾರಿತ ಶಿಕ್ಷಣಕ್ಕೆ ಒತ್ತು ಕೊಟ್ಟಿರುವುದು ಪಾಲಕರಲ್ಲಿ ಹರ್ಷ ಮೂಡಿಸಿದೆ.

ದಾಖಲಾತಿ ಹೆಚ್ಚಳಕ್ಕೆ ಕಸರತ್ತು: ಪ್ರಾಥಮಿಕದಿಂದ ಪ್ರೌಢಶಾಲಾ ಹಂತಕ್ಕೆ ಮುಂದುವರೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಕಡಿಮೆ ಆಗುತ್ತಿರುವುದನ್ನು ಗಮನಿಸಿದ ಸರ್ಕಾರ, ಕೆಪಿಎಸ್ ಶಾಲೆಗಳಲ್ಲಿ ಗುಣಮಟ್ಟದ ಸಾರ್ವಜನಿಕ ಶಿಕ್ಷಣಕ್ಕಾಗಿ ಅಭೂತಪೂರ್ವ ಬದಲಾವಣೆಯ ಚೌಕಟ್ಟು ಒದಗಿಸಲು ಕ್ರಮ ವಹಿಸಿದೆ. ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ ಮತ್ತು ದಾಖಲಾತಿ ಹೆಚ್ಚಳಕ್ಕೆ ಆರಂಭಿಸಿದ ಒಂದು ಸುಧಾರಣಾತ್ಮಕ ಕಾರ್ಯತಂತ್ರವೇ ಕೆಪಿಎಸ್‌ನ ಮೂಲ ಉದ್ದೇಶವಾಗಿದೆ. ಈ ಮಾದರಿಯು ಒಂದೇ ಸೂರಿನಡಿಯಲ್ಲಿ (ಕ್ಯಾಂಪಸ್‌ನಲ್ಲಿ) ಎಲ್‌ಕೆಜಿಯಿಂದ ಪಿಯುಸಿ ವರೆಗಿನ ಶಿಕ್ಷಣ ಒದಗಿಸುತ್ತದೆ. ಕೆಪಿಎಸ್ ಶಾಲೆಗಳು ಉನ್ನತ ಗುಣಮಟ್ಟದ, ಭವಿಷ್ಯ-ಕೇಂದ್ರಿತ ಶಿಕ್ಷಣವನ್ನು ಸಂಯುಕ್ತ ಹಾಗೂ ಸಮಗ್ರವಾಗಿ ಒದಗಿಸುವುದಲ್ಲದೆ ವಿದ್ಯಾರ್ಥಿಗಳ ಕಲಿಕೆ ಮತ್ತು ಫಲಿತಾಂಶ ಗಮನಾರ್ಹವಾಗಿ ಸುಧಾರಿಸುವ ಗುರಿ ಹೊಂದಿದೆ.

ರಾಜ್ಯ ಆಯವ್ಯಯದ ಅನುದಾನ ಮತ್ತು ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಾಲ ಯೋಜನೆಯಡಿ ೨೦೨೫-೨೬ ಮತ್ತು ೨೦೨೬-೨೭ನೇ ಸಾಲಿನಲ್ಲಿ ರಾಜ್ಯದಲ್ಲಿ ೫೦೦ ಸರ್ಕಾರಿ ಶಾಲೆ (ಮ್ಯಾಗ್ನೆಟ್ ಶಾಲೆಗಳು) ಗುರುತಿಸಿ ಸುಸಜ್ಜಿತ ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲು ಮತ್ತು ಕೆಕೆಆರ್‌ಡಿಬಿಯ ಶಾಲಾ ಶಿಕ್ಷಣ ಇಲಾಖೆಯ ಅನುದಾನದಲ್ಲಿ ೨೦೨೫-೨೬ ಮತ್ತು ೨೦೨೬-೨೭ನೇ ಸಾಲಿಗೆ ೨೦೦ ಸರ್ಕಾರಿ ಶಾಲೆಗಳನ್ನು (ಮ್ಯಾಗ್ನೆಟ್ ಶಾಲೆಗಳು) ಗುರುತಿಸಿ, ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲು ಕೋರಿ ಪ್ರಸ್ತಾವನೆ ಸಲ್ಲಿಸಿದ್ದು, ಪ್ರೌಢಶಾಲಾ ವಿದ್ಯಾರ್ಥಿಗಳ ಕಲಿಕಾಮಟ್ಟ ಸುಧಾರಿಸುವುದು ಹಾಗೂ ೧೦-೧೨ನೇ ತರಗತಿಯ ಮಂಡಳಿ ಪರೀಕ್ಷೆಗಳಲ್ಲಿ ಫಲಿತಾಂಶ ಹೆಚ್ಚಿಸುವ ಕಡೆ ಗಮನ ಹರಿಸಲಾಗಿದೆ.

ಪ್ರತಿ ಕ್ಲಸ್ಟರ್‌ನಲ್ಲಿ ಗ್ರೇಡ್ ಕವರೇಜ್, ದಾಖಲಾತಿ, ಸ್ಥಳ ಮತ್ತು ಮೂಲ ಸೌಕರ್ಯದ ಆಧಾರದ ಮೇಲೆ ಸ್ಕೋರಿಂಗ್ ವಿಧಾನ ಬಳಸಿ ಮ್ಯಾಗ್ನೆಟ್ ಶಾಲೆ ಗುರುತಿಸಲಾಗಿದೆ. ೩ರಿಂದ ೫ಕಿಮೀ ವ್ಯಾಪ್ತಿಯೊಳಗಿನ ಸಣ್ಣ ಗಾತ್ರದ ಶಾಲೆಗಳನ್ನು ಆಯ್ಕೆ ಮ್ಯಾಗ್ನೆಟ್ ಶಾಲೆಗೆ ಜೋಡಿಸುವ ಸಂಭಾವ್ಯ ಶಾಲೆಗಳಾಗಿ ಗುರುತಿಸಲಾಗಿದೆ.

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ೭ ಜಿಲ್ಲೆಗಳಲ್ಲಿ ಕೆಕೆಆರ್‌ಡಿಬಿ ಮಂಡಳಿಯ ಅನುದಾನದಲ್ಲಿ ೨೦೨೫-೨೬ ಮತ್ತು ೨೦೨೬-೨೭ನೇ ಸಾಲಿಗೆ ಆಯ್ದ ೨೦೦ ಸರ್ಕಾರಿ ಶಾಲೆಗಳನ್ನು (ಮ್ಯಾಗ್ನೆಟ್ ಶಾಲೆಗಳು) ಗುರುತಿಸಿ ಹೆಚ್ಚುವರಿ ಮೂಲಭೂತ ಸೌಕರ್ಯ ಒದಗಿಸುವ ಮುಂದಿನ ಕ್ರಮಗಳಿಗೆ ಒಳಪಟ್ಟು ಸುಸಜ್ಜಿತ ಕರ್ನಾಟಕ ಪಬ್ಲಿಕ್ ಶಾಲಾವಾರು ವಿಸ್ತೃತ ಯೋಜನಾ ವರದಿಯಂತೆ ಪ್ರತಿ ಶಾಲೆಗೆ ₹೨ ಕೋಟಿಯಿಂದ ₹೪ ಕೋಟಿಗಳ ಅನುದಾನ ಒದಗಿಸಲು ಈ ಷರತ್ತು ಮತ್ತು ನಿಬಂಧನೆಗಳ ಪಾಲನೆಗೆ ಒಳಪಟ್ಟು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರಿಗೆ ಅನುಮತಿ ನೀಡಿ ಆದೇಶಿಸಿದೆ.

ಗ್ರಾಮೀಣ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳದ ಜತೆಗೆ ಗುಣಾತ್ಮಕ ಶಿಕ್ಷಣ ಕೊಡಿಸಲು ಕ್ಷೇತ್ರದ ಹಿರೇಮ್ಯಾಗೇರಿ, ಬನ್ನಿಕೊಪ್ಪ ಮತ್ತು ಗಾಣಧಾಳ ಗ್ರಾಮಕ್ಕೆ ಕೆಪಿಎಸ್ ಶಾಲೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ‌. ಇದು ಎಲ್‌ಕೆಜಿಯಿಂದ ಪಿಯು ಹಂತದವರೆಗೆ ನಡೆಯಲಿದ್ದು, ಇನ್ನಷ್ಟು ಶಾಲೆಗಳು ಮಂಜೂರಾಗಲಿವೆ. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಿ ಆದೇಶಿಸಿದೆ. ಇದರಿಂದ ಗ್ರಾಮೀಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಲು ಸಹಕಾರಿಯಾಗಲಿದೆ ಎಂದು ಕೊಪ್ಪಳ ಡಿಡಿಪಿಐ ಸೋಮಶೇಖರಗೌಡ ಪಾಟೀಲ್ ಹೇಳಿದರು.

ಯಲಬುರ್ಗಾ ಕ್ಷೇತ್ರಕ್ಕೆ ೨೦೨೫-೨೬ನೇ ಸಾಲಿನಲ್ಲಿ ಗಾಣಧಾಳ, ಹಿರೇಮ್ಯಾಗೇರಿ, ಬನ್ನಿಕೊಪ್ಪ ಕೆಪಿಎಸ್ ಮಂಜೂರಾಗಿವೆ. ಶಾಲೆಗಳು ಎಲ್‌ಕೆಯಿಂದ ಪಿಯುವರೆಗೆ ಅವರಿಗೆ ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮದಲ್ಲಿ ಓದಲು ಅವಕಾಶ ಇರುತ್ತದೆ. ಕ್ಷೇತ್ರಕ್ಕೆ ಇನ್ನೂ ೮ ಕೆಪಿಎಸ್ ಮಂಜೂರಾತಿಗೆ ಶಾಸಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಯಲಬುರ್ಗಾ ಬಿಇಒ ಅಶೋಕ ಗೌಡರ ತಿಳಿಸಿದ್ದಾರೆ.

PREV

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ