ಕನ್ನಡಪ್ರಭ ವಾರ್ತೆ ಮಡಿಕೇರಿ ಕಟ್ಟಡ ಕೆಲಸ ಮಾಡುತ್ತಿದ್ದ ಸಂದರ್ಭ ದಿಢೀರ್ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ಮಂಗಳವಾರ ಸಂಜೆ ನಡೆದಿದೆ. ನಗರದ ಸ್ಟೀವರ್ಟ್ ಹಿಲ್ ಬಡಾವಣೆಯ ರೆಡ್‌ಕ್ರಾಸ್ ಕಟ್ಟಡ ಸಮೀಪದಲ್ಲಿ ಸಂಜೆ 5.40ರ ಸುಮಾರಿಗೆ ದುರಂತ ಸಂಭವಿಸಿದ್ದು, ಹಾವೇರಿ ಜಿಲ್ಲೆಯ ಆನಂದ್ (35), ಹುಬ್ಬಳ್ಳಿ ಜಿಲ್ಲೆಯವರಾದ ಲಿಂಗಪ್ಪ (45) ಹಾಗೂ ಬಸವರಾಜು (35) ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಂಜು (38) ಹಾಗೂ ರಾಜು (35) ಗಾಯಗೊಂಡಿದ್ದಾರೆ. ಪ್ರದೀಪ್ ಎಂಬವರಿಗೆ ಸೇರಿದ ಕಟ್ಟಡದಲ್ಲಿ ಐದಾರು ಮಂದಿ ಕಾರ್ಮಿಕರು ಕಟ್ಟಡದ ಅಡಿಪಾಯಕ್ಕಾಗಿ ಭಾರಿ ಬರೆಯನ್ನು ಅಗೆಯುತ್ತಿದ್ದರು. ಈ ವೇಳೆ ಸುಮಾರು 5 ಅಡಿ ಎತ್ತರದ ಮಣ್ಣು ಕಾರ್ಮಿಕರ ಮೇಲೆ ಕುಸಿದುಬಿದ್ದಿದೆ. ಶೋಧ ಕಾರ್ಯ: ಮಾಹಿತಿ ದೊರೆತ ಕೂಡಲೇ ಅಗ್ನಿಶಾಮಕದಳ, ಪೊಲೀಸ್ ಇಲಾಖೆಯಿಂದ ಶೋಧ ಕಾರ್ಯ ನಡೆದಿದ್ದು, ಜೆಸಿಬಿ ಬಳಸಿ ಮಣ್ಣು ತೆರವು ಕಾರ್ಯ ಮಾಡಿ ಹರಸಾಹಸದಿಂದ ಮಣ್ಣಿನಡಿ ಸಿಲುಕಿದ್ದ ಮೂವರ ದೇಹಗಳನ್ನು ಹೊರ ತೆಗೆಯಲಾಯಿತು. ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಕಟ್ಟಡ ಕಾಮಗಾರಿಯನ್ನು ಮಂಗಳವಾರ ಬೆಳಗ್ಗೆಯಷ್ಟೇ ಆರಂಭಿಸಲಾಗಿತ್ತು. ತಮ್ಮ ಸಹವರ್ತಿಗಳನ್ನು ಕಳೆದುಕೊಂಡ ಇತರೆ ಕಾರ್ಮಿಕರು ರೋದಿಸುತ್ತಿದ್ದರು. ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸ್ಥಳದಲ್ಲೇ ಇದ್ದು, ಕಾರ್ಯಾಚರಣೆಗೆ ಅಗತ್ಯ ಸಲಹೆ ನೀಡಿದರು. ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜಾ ಕೂಡ ಇದ್ದರು. ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸುದ್ದಿಗಾರರೊಂದಿಗೆ ಮಾತನಾಡಿ ಮಣ್ಣು ಕುಸಿದು ಮೂರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ನಿರ್ಲಕ್ಷ್ಯ ಪ್ರಕರಣ ಎಂದು ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದ್ದು, ಮುಂದಿನ ತನಿಖೆ ನಡೆಯಲಿದೆ ಎಂದು ತಿಳಿಸಿದರು. ಶಾಸಕ ಡಾ. ಮಂತರ್ ಗೌಡ ಮಾತನಾಡಿ ಈ ಘಟನೆ ನಡೆದಿರುವುದು ದುರಾದೃಷ್ಟಕರ. ಕಟ್ಟಡ ಕೆಲಸ ಸಂದರ್ಭ ಯಾವುದೇ ಕಾರ್ಮಿಕರು ಪ್ರಾಣ ಕಳೆದುಕೊಳ್ಳದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಬೇಜಾವ್ದಾರಿ ತೋರಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು. ಆಸ್ಪತ್ರೆಗೆ ಉಸ್ತುವಾರಿ ಸಚಿವ ಭೇಟಿ ಮಡಿಕೇರಿ: ಮಣ್ಣು ಕುಸಿತ ಘಟನೆಯಲ್ಲಿ ಗಾಯಗೊಂಡು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾರ್ಮಿಕರನ್ನು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಮಂಗಳವಾರ ರಾತ್ರಿ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಘಟನೆಯ ಬಗ್ಗೆ ಶಾಸಕ ಡಾ. ಮಂಥರ್ ಗೌಡ ಸಚಿವರಿಗೆ ಮನವರಿಕೆ ಮಾಡಿದರು.