ರಾಜ್ಯ ಸರ್ಕಾರದ ವಿರುದ್ಧ ಬಾರುಕೋಲು ಚಳವಳಿ

KannadaprabhaNewsNetwork | Published : Oct 31, 2023 1:18 AM

ಸಾರಾಂಶ

ಪಂಪ್‌ಸೆಟ್‌ಗಳಿಗೆ ಹಗಲು ವೇಳೆ 8 ಗಂಟೆ ವಿದ್ಯುತ್ ಪೂರೈಕೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನವಯುಗ ಸಂಘಟನೆಯ ನೇತೃತ್ವದಲ್ಲಿ ರೈತರು ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ಬಾರುಕೋಲು ಚಳವಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಪಂಪ್‌ಸೆಟ್‌ಗಳಿಗೆ ಹಗಲು ವೇಳೆ 8 ಗಂಟೆ ವಿದ್ಯುತ್ ಪೂರೈಕೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನವಯುಗ ಸಂಘಟನೆಯ ನೇತೃತ್ವದಲ್ಲಿ ರೈತರು ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ಬಾರುಕೋಲು ಚಳವಳಿ ನಡೆಸಿದರು.

ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನದ ಬಳಿಯಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಕೋರ್ಟ್ ಸರ್ಕಲ್, ಹಲಗೇರ ಕ್ರಾಸ್, ಕುರುಬಗೇರಿ ಕ್ರಾಸ್ ಮಾರ್ಗವಾಗಿ ಮಿನಿ ವಿಧಾನಸೌಧ ತಲುಪಿದರು.

ಪ್ರತಿಭಟನೆ ನೇತೃತ್ವದ ವಹಿಸಿದ್ದ ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ರಾಣಿಬೆನ್ನೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಎಂದು ಘೋಷಣೆ ಮಾಡಿದೆ. ತಾಲೂಕಿನಲ್ಲಿ ಕೆಲವೊಬ್ಬರು ಬೋರ್‌ವೆಲ್ ಸಹಾಯದಿಂದ ಬೆಳೆ ಬೆಳೆಯುತ್ತಿದ್ದಾರೆ. ಆದರೆ ಹಗಲು ವೇಳೆ ಹೆಸ್ಕಾಂ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದೇ ಇರುವುದರಿಂದ ರೈತಾಪಿ ವರ್ಗದ ಜನ ದಿಕ್ಕು ತೋಚದಂತಾಗಿದ್ದಾರೆ. ಆದ್ದರಿಂದ ಕೂಡಲೇ 8 ಗಂಟೆ ಹಗಲು ವೇಳೆ ವಿದ್ಯುತ್ ಪೂರೈಕೆ ಮಾಡಬೇಕು. 2023-24ನೇ ಸಾಲಿನಲ್ಲಿ ತಾಲೂಕಿನಲ್ಲಿ ವಾಡಿಕೆಗಿಂತ ಶೇ. 40ರಷ್ಟು ಮಳೆ ಕೊರತೆಯಾಗಿದ್ದು, ಮುಂಗಾರು ಬೆಳೆ ಸಂಪೂರ್ಣ ವಿಫಲವಾಗಿದೆ. ರೈತರು ಸಾಲ ಸೂಲ ಮಾಡಿ ಬಿತ್ತನೆ ಮಾಡಿದ್ದು, ಸಂಪೂರ್ಣ ಬೆಳೆ ನಾಶವಾಗಿದೆ. ಕೂಡಲೇ ಎಕರೆಗೆ 40 ಸಾವಿರದಂತೆ ಬೆಳೆ ಪರಿಹಾರವನ್ನು ರೈತರಿಗೆ ನೀಡಬೇಕು. ಅಪ್ಪರ್ ತುಂಗಾ ಮೇಲ್ದಂಡೆ ಕಾಲುವೆ ನೀರನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದರು.

ರಾಷ್ಟ್ರೀಕೃತ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳಲ್ಲಿ ಸ್ವ-ಸಹಾಯ ಸಂಘ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಮುಂಗಾರು ಬೆಳೆ ಸಾಲವನ್ನು ಪಡೆದಂತಹ ರೈತರಿಗೆ ಬ್ಯಾಂಕಗಳು ಸಾಲ ವಸೂಲಾತಿ ನೋಟಿಸ್‌ಗಳನ್ನು ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಉಪತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಘಟನೆಯ ಮುಖಂಡರಾದ ಬಸವರಾಜ ರೊಡ್ಡನವರ, ಪ್ರಭುಸ್ವಾಮಿ ಕರ್ಜಗಿಮಠ, ಸೋಮಣ್ಣ ಹಲಗೇರಿ, ಗುಡ್ಡೇಶ್ ನಿಟ್ಟೂರ, ರಮೇಶ ಹೊನ್ನಾಳಿ, ಶಂಕರಗೌಡ ಗಂಗನ್‌ಗೌಡ್ರ, ಪ್ರಭುಗೌಡ ಚನಗೌಡ್ರ, ಮಲ್ಲಿಕ ಮಾಸಣಗಿ, ಗಂಗಾಧರ ಬೂದನೂರು, ಹನುಮಂತರಾಜ ಚನ್ನಗೌಡರ, ಈರಣ್ಣ ಬುಡಪನಹಳ್ಳಿ, ಬಸನಗೌಡ ಪಾಟೀಲ, ಗಣೇಶ ಗಡ್ಡೆರ, ಶೇಖರ್‌ಗೌಡ ಯಡಚಿ, ವೀರು ಪಾಟೀಲ. ಎಂ.ಬಿ. ಪಾಟೀಲ, ಗದಿಗೆಪ್ಪ ಬುಡಮಣ್ಣನವರ, ಸಿದ್ದನಗೌಡ ಪಾಟೀಲ, ಬಸವರಾಜ ಕುರುವತ್ತಿ, ಚಂದ್ರಪ್ಪ ಬಣಕಾರ, ಪ್ರಕಾಶ ಪಾಟೀಲ ಮತ್ತು ಇತರರಿದ್ದರು.

Share this article