ಮತ್ತೆ ಮೂವರು ಆರೋಪಿಗಳ ಗಡಿಪಾರು

KannadaprabhaNewsNetwork |  
Published : May 20, 2026, 01:00 AM IST
ಪೋಟೋ | Kannada Prabha

ಸಾರಾಂಶ

ಗಡಿಪಾರುಗೊಂಡವರಲ್ಲಿ ಮೇನುದ್ದೀನ್, ಫಕ್ರುಸಾಬ್ ಹಾಗೂ ಹಾಲಪ್ಪ ಎಂಬವರು ಸೇರಿದ್ದಾರೆ. ಇವರ ವಿರುದ್ಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಗಲಭೆ, ಸಾರ್ವಜನಿಕ ಆಸ್ತಿ ಹಾನಿ, ಹಲ್ಲೆ, ಬೆದರಿಕೆ, ಐಟಿ ಕಾಯ್ದೆ ಸೇರಿದಂತೆ ವಿವಿಧ ಕಲಂಗಳಡಿ ಅನೇಕ ಪ್ರಕರಣಗಳು ದಾಖಲಾಗಿವೆ.

ಗದಗ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೊಲೆ ಯತ್ನ, ಸಾರ್ವಜನಿಕ ಆಸ್ತಿ ಹಾನಿ, ಗಲಭೆ, ಬೆದರಿಕೆ, ಹಲ್ಲೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಗಡಿಪಾರು ಮಾಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ತಿಂಗಳಲ್ಲಿ ಎರಡನೇ ಬಾರಿಗೆ ಗಡಿಪಾರಿಗೆ ಮತ್ತೆ ಆದೇಶ ಹೊರಡಿಸಿದ್ದು, ಪದೇ ಪದೇ ಅಪರಾಧ ಕೃತ್ಯ ನಡೆಸುವವರಲ್ಲಿ ನಡುಕ ಹುಟ್ಟಿಸಿದೆ.

ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸಿ, ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಆರೋಪಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡುವ ಆದೇಶ ಹೊರಡಿಸಲಾಗಿದೆ.

ತಿಂಗಳಲ್ಲಿಯೇ ಎರಡನೇ ಬಾರಿಗೆ ಗಡಿಪಾರುಗೊಂಡವರಲ್ಲಿ ಮೇನುದ್ದೀನ್, ಫಕ್ರುಸಾಬ್ ಹಾಗೂ ಹಾಲಪ್ಪ ಎಂಬವರು ಸೇರಿದ್ದಾರೆ. ಇವರ ವಿರುದ್ಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಗಲಭೆ, ಸಾರ್ವಜನಿಕ ಆಸ್ತಿ ಹಾನಿ, ಹಲ್ಲೆ, ಬೆದರಿಕೆ, ಐಟಿ ಕಾಯ್ದೆ ಸೇರಿದಂತೆ ವಿವಿಧ ಕಲಂಗಳಡಿ ಅನೇಕ ಪ್ರಕರಣಗಳು ದಾಖಲಾಗಿವೆ. ಕೆಲವರ ವಿರುದ್ಧ 2017ರಿಂದ 2025ರವರೆಗೆ ನಿರಂತರವಾಗಿ ಪ್ರಕರಣಗಳು ದಾಖಲಾಗಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಮುಖವಾಗಿ 2017ರ ಗಲಭೆ ಪ್ರಕರಣ, 2023ರ ಕೊಲೆ ಯತ್ನ ಪ್ರಕರಣ, 2025ರ ಹಲ್ಲೆ ಮತ್ತು ಸಾರ್ವಜನಿಕ ಶಾಂತಿಭಂಗ ಪ್ರಕರಣಗಳಲ್ಲಿ ಆರೋಪಿಗಳ ಹೆಸರು ಕೇಳಿಬಂದಿತ್ತು. ಪೊಲೀಸರು ಹಲವು ಬಾರಿ ಎಚ್ಚರಿಕೆ ನೀಡಿದರೂ ಆರೋಪಿಗಳು ತಮ್ಮ ಚಟುವಟಿಕೆ ನಿಲ್ಲಿಸದೆ ಮತ್ತೆ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಠಿಣ ಕ್ರಮ: ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಇನ್ನೂ ಮೂವರು ವ್ಯಕ್ತಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ಮುಂದೆಯೂ ಇದೇ ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿತ್ತನೆ ಬೀಜಗಳಿಗೆ ಏಕರೂಪ ದರ ನಿಗದಿಗೊಳಿಸುವಂತೆ ಆಗ್ರಹ
ಬಿಸಿಲೂರು ಬಳ್ಳಾರಿಯಲ್ಲಿ ಮಳೆ-ಗುಡುಗಿನ ಆರ್ಭಟ