ಜಿಲ್ಲೆಯ ಮೂರು ತಾಲೂಕುಗಳು ’ಮಧ್ಯಮ ಬರ ಪೀಡಿತ’

KannadaprabhaNewsNetwork |  
Published : Sep 18, 2026, 02:30 AM IST
ಚಿತ್ರ :  17ಎಂಡಿಕೆ3 : ಪೊನ್ನಂಪೇಟೆ ತಾಲೂಕಿನಲ್ಲಿ ಬಿರುಕು ಬಿಟ್ಟಿರುವ ಭತ್ತದ ಗದ್ದೆ.  | Kannada Prabha

ಸಾರಾಂಶ

ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಶೇ.35ರಷ್ಟು ಮಳೆ ಕೊರತೆ ಉಂಟಾಗಿದ್ದು, ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಇದೀಗ ಜಿಲ್ಲೆಯಾದ್ಯಂತ ಒಣಹವೆ ಮುಂದುವರೆದಿದೆ. ಹವಾಮಾನದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಗುರುವಾರ ಮತ್ತೆ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಕೊಡಗು ಜಿಲ್ಲೆಯ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕನ್ನು ಸರ್ಕಾರ ಮಧ್ಯಮ ಬರಪೀಡಿತ ಪ್ರದೇಶ ಎಂದು ಘೋಷಿಸಿದೆ.

ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಶೇ.35ರಷ್ಟು ಮಳೆ ಕೊರತೆ ಉಂಟಾಗಿದ್ದು, ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಇದೀಗ ಜಿಲ್ಲೆಯಾದ್ಯಂತ ಒಣಹವೆ ಮುಂದುವರೆದಿದೆ. ಹವಾಮಾನದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಗುರುವಾರ ಮತ್ತೆ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಕೊಡಗು ಜಿಲ್ಲೆಯ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕನ್ನು ಸರ್ಕಾರ ಮಧ್ಯಮ ಬರಪೀಡಿತ ಪ್ರದೇಶ ಎಂದು ಘೋಷಿಸಿದೆ.

ಈಗಾಗಲೇ ಆ.27ರಂದು ಸೋಮವಾರಪೇಟೆ ತಾಲೂಕನ್ನು ಮಧ್ಯಮ ಬರ ಪೀಡಿತ ಪ್ರದೇಶ ಎಂದು ಮೊದಲ ಹಂತದ ಪಟ್ಟಿಯಲ್ಲಿ ಘೋಷಣೆ ಮಾಡಲಾಗಿತ್ತು. ಇದೀಗ ಎರಡನೇ ಹಂತದ ಪಟ್ಟಿಯಲ್ಲಿ ಮಧ್ಯಮ ಬರ ಪೀಡಿತ ತಾಲೂಕೆಂದು ಕೊಡಗು ಜಿಲ್ಲೆಯ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕುಗಳನ್ನು ಘೋಷಿಸಲಾಗಿದೆ. ಇದರೊಂದಿಗೆ, ಇಲ್ಲಿಯವರೆಗೆ ಬರಪೀಡಿತ ಎಂದು ಘೋಷಿಸಲಾದ ಒಟ್ಟು ತಾಲೂಕುಗಳ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.

ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಳನ್ವಯ ಅಗತ್ಯ ಪರಿಹಾರ ಮತ್ತು ತುರ್ತು ಸ್ಪಂದನಾ ಕ್ರಮಗಳನ್ನು ಕೈಗೊಳ್ಳಲು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ಮುಖ್ಯಸ್ಥರಾಗಿರುವ ಆಯಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಅಧಿಕಾರ ನೀಡಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು ನಡೆಸಿದ ಸಮಗ್ರ ಮೌಲ್ಯಮಾಪನ ಮತ್ತು ಸ್ಥಳ ಪರಿಶೀಲನೆ ಆಧಾರದ ಮೇಲೆ, ಕಂದಾಯ ಇಲಾಖೆಯು (ವಿಪತ್ತು ನಿರ್ವಹಣೆ) ಈ ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಗುರುವಾರ ಆದೇಶ ಹೊರಡಿಸಿದೆ.

ಮೊದಲ ಹಂತದಲ್ಲಿ, ಆ.27 ರಂದು ಸರ್ಕಾರ ಖಾರಿಫ್ ಹಂಗಾಮಿನ ಹಿನ್ನೆಲೆಯಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ನಂತರ, ರಾಜ್ಯದ ಹಲವು ಭಾಗಗಳಲ್ಲಿ ಮಳೆಯಿಲ್ಲದ ಪರಿಸ್ಥಿತಿ ಮುಂದುವರಿದ ಹಿನ್ನೆಲೆಯಲ್ಲಿ, ಉಳಿದ 139 ತಾಲೂಕುಗಳ ವೈಜ್ಞಾನಿಕ ಮೌಲ್ಯಮಾಪನವನ್ನು ನಡೆಸಿತು. ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ನೇತೃತ್ವದ ನೈಸರ್ಗಿಕ ವಿಕೋಪಗಳ ಕುರಿತ ಸಚಿವ ಸಂಪುಟ ಉಪ-ಸಮಿತಿಯ ನಿರ್ದೇಶನದ ಮೇರೆಗೆ, 24 ತಾಲೂಕುಗಳ ವ್ಯಾಪ್ತಿಯ 214 ಹಳ್ಳಿಗಳಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ಥಳ ಪರಿಶೀಲನೆ ನಡೆಸಲಾಯಿತು.

ಬೆಳೆ ನಷ್ಟದ ಸಮೀಕ್ಷೆಯನ್ನು ಜಂಟಿಯಾಗಿ ನಡೆಸುವಂತೆ ಹಾಗೂ ಪರಿಹಾರದ ಅಂದಾಜು ವರದಿಗಳನ್ನು ಆದಷ್ಟು ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಕೃಷಿ ಆಯುಕ್ತರು, ತೋಟಗಾರಿಕೆ ನಿರ್ದೇಶಕರು ಮತ್ತು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಕೆಎಸ್‌ಎನ್‌ಡಿಎಂಸಿ ಪ್ರತಿ ವಾರ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ ಎಂದು ಸರ್ಕಾರ ತಿಳಿಸಿದೆ.

ಬಿರುಕು ಬಿಟ್ಟ ಭತ್ತದ ಗದ್ದೆಗಳು :

ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಬತ್ತದ ಕೃಷಿಗೆ ಅಪಾರ ಪ್ರಮಾಣದಲ್ಲಿ ಪೆಟ್ಟು ಬಿದ್ದಿದೆ. ಬತ್ತದ ಗದ್ದೆಗಳಲ್ಲಿ ನೀರಿಲ್ಲದ ಪರಿಣಾಮ ಗದ್ದೆಗಳು ಬಿರುಕು ಬಿಟ್ಟಿವೆ. ಇದರಿಂದ ಬೋರ್ ವೆಲ್ ನೀರನ್ನು ಬಳಸಿ ಬತ್ತದ ಗದ್ದೆಗಳಿಗೆ ಬಿಡುವಂತಹ ಪರಿಸ್ಥಿತಿ ಉಂಟಾಗಿದೆ. ಕೆಲವು ಕಡೆಗಳಲ್ಲಿ ನೀರಿಲ್ಲದೆ ನಾಟಿ ಮಾಡಿದ ಬತ್ತದ ಬೆಳೆ ಒಣಗುತ್ತಿದೆ. ಜಿಲ್ಲೆಯಲ್ಲಿ ಮಳೆಯ ಸಂದರ್ಭದಲ್ಲಿ ಮಾತ್ರ ಬತ್ತದ ಕೃಷಿ ಮಾಡಲಾಗುತ್ತದೆ. ಆದರೆ ಈ ಬಾರಿ ಮಳೆಗಾಲದಲ್ಲಿ ಮಳೆಯೇ ಇಲ್ಲದ ಪರಿಣಾಮ ಬರದ ಛಾಯೆ ಉಂಟಾಗಿದೆ. ಹುತ್ತರಿ ಸಂಭ್ರಮಕ್ಕೂ ಬತ್ತ ಇರುವುದಿಲ್ಲ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಫಿ, ಕಾಳು ಮೆಣಸಿಗೂ ಬರೆ :

ಜಿಲ್ಲೆಯಲ್ಲಿ ಮಳೆ ಕೊರತೆಯ ಪರಿಣಾಮ ಕಾಫಿ ಹಾಗೂ ಕಾಳು ಮೆಣಸು ಕೃಷಿಯ ಮೇಲೆ ಪ್ರಭಾವ ಬೀರಿದೆ. ಕಾಳು ಮೆಣಸಿಗೆ ನೀರಿಲ್ಲದ ಪರಿಣಾಮ ಮುಂದಿನ ಫಸಲು ತೀರಾ ಕುಂಠಿತಗೊಳ್ಳುವ ಸಾಧ್ಯತೆಯಿದೆ. ಅಲ್ಲದೆ ಕಾಫಿ ಕೂಡ ಈಗ ಫಸಲಿನ ಅವಧಿಯಾಗಿದ್ದು, ಸಣ್ಣ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇತ್ತು. ಇದೀಗ ಮಳೆ ಇಲ್ಲದ ಪರಿಣಾಮ ಕೆಲವೆಡೆ ಗಿಡಗಳು ಬಾಡುತ್ತಿದೆ. ಅಲ್ಲದೆ ಫಸಲಿನಲ್ಲಿ ಗುಣಮಟ್ಟ ಕಡಿಮೆಯಾಗುವ ಆತಂಕ ಉಂಟಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಸರ್ವೇ ನಡೆಸಿ ಕಾಫಿ ಹಾಗೂ ಕಾಳು ಮೆಣಸು ಬೆಳೆಗಾರರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಹಾರಂಗಿಯಲ್ಲಿ ನೀರು ಕೊರತೆ!

ಕೊಡಗು ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿಯಲ್ಲೂ ಕೂಡ ಮಳೆ ಕೊರತೆಯ ಪರಿಣಾಮ ಜಲಾಶಯದ ನೀರು ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ. ತಿಂಗಳ ಹಿಂದಷ್ಟೇ ಹಾರಂಗಿ ಜಲಾಶಯ ಭರ್ತಿಯಾಗಿತ್ತು. ಆದರೆ ತೀವ್ರ ಮಳೆ ಕೊರತೆ ಕಾರಣ ಹಾಗೂ ಪ್ರತಿನಿತ್ಯ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದ ನೀರಿನ ಮಟ್ಟ ಏಳು ಅಡಿಗಳಷ್ಟು ಕುಸಿದಿದೆ. 2859 ಗರಿಷ್ಠ ಅಡಿಯಾಗಿದ್ದು, ಪ್ರಸ್ತತ 2852.70 ಅಡಿಗಳಷ್ಟು ನೀರಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕನ್ನು ಮೊದಲ ಪಟ್ಟಿಯಲ್ಲಿ ಹಾಗೂ ಇದೀಗ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕನ್ನು ಎರಡನೇ ಹಂತದ ಪಟ್ಟಿಯಲ್ಲಿ ಮಧ್ಯಮ ಬರ ಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಮೊಬೈಲ್ ಅಪ್ಲಿಕೇಶನ್ ಮೂಲಕ ಮೌಲ್ಯಮಾಪನ ಮತ್ತು ಸ್ಥಳ ಪರಿಶೀಲನೆ ನಡೆಸಲಾಗಿದೆ. ಭತ್ತದ ಗದ್ದೆಗಳನ್ನು ಪರಿಶೀಲನೆ ಮಾಡಿ ಸರ್ವೇ ಮಾಡಲಾಗಿದೆ. ಈ ಸಂದರ್ಭ ಭತ್ತದ ಗದ್ದೆಗಳಲ್ಲಿ ನೀರು ಇರಲಿಲ್ಲ. ಅಲ್ಲದೆ ಮೂರು ವಾರಗಳು ಮಳೆಯಾಗದ ಕಾರಣ ಮಧ್ಯಮ ಬರ ಪೀಡಿತ ಪ್ರದೇಶಗಳು ಘೋಷಿಸಿದೆ.

-ಚಂದ್ರಶೇಖರ್, ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆ ಮಡಿಕೇರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಪೋಷಣೆಯೇ ಬಾಲ್ಯದ ಅಡಿಪಾಯ: ಸುಮಂಗಲ
ಸಂಸ್ಕಾರಯುತ ಸಮಾಜ ಕಟ್ಟಲು ಗಣೇಶೋತ್ಸವ ಪ್ರೇರಣೆ: ಕಾಮತ್