ಹುಲಿಗಳ ನೆಲೆ ಸಂರಕ್ಷಣೆ ಮಾಡಬೇಕಿದೆ: ವಿ.ತೇಜಸ್

KannadaprabhaNewsNetwork |  
Published : Aug 03, 2025, 01:30 AM IST
2ಕೆಎಂಎನ್ ಡಿ11 | Kannada Prabha

ಸಾರಾಂಶ

ಒಂದು ಕಾಡಿನಲ್ಲಿ ಹುಲಿ ಸಂತತಿ ವಾಸವಾಗಿದೆ ಎಂದರೆ ಆ ಕಾಡು ಸಮೃದ್ಧವಾಗಿದೆ ಎಂದರ್ಥ. ಹುಲಿಗಳ ಆಹಾರಕ್ಕಾಗಿ ವಾರ್ಷಿಕ ಸುಮಾರು 50ಕ್ಕೂ ಹೆಚ್ಚು ಬಲಿ ಪ್ರಾಣಿಗಳು ಬೇಕಾಗಲಿವೆ. ಹುಲಿ ಕಾಡಿನಲ್ಲಿ ಕಾಟಿ, ಜಿಂಕೆ, ಕೃಷ್ಣಾಮೃಗ, ಕಾಡು ಹಂದಿ ಸೇರಿದಂತೆ ಹಲವು ಬಗೆಯ ಬಲಿ ಪ್ರಾಣಿಗಳು ಸಮೃದ್ಧವಾಗಿ ಇದ್ದಾಗ ಹುಲಿಗಳ ಸಂತತಿ ಹೆಚ್ಚಲು ಸಾಧ್ಯ.

ಕನ್ನಡಪ್ರಭ ವಾರ್ತೆ ಹಲಗೂರು

ಮಾನವನ ದುರಾಸೆಗೆ ಸಂರಕ್ಷಿತ ಕಾಡು ನಾಶವಾಗುತ್ತಿದೆ. ಹುಲಿ ನೆಲೆಗಳು ಅಪಾಯದ ಅಂಚಿಗೆ ತಲುಪುತ್ತಿವೆ ಎಂದು ವನೋದಯ ಸ್ವಯಂ ಸೇವಾ ಸಂಸ್ಥೆ ಪ್ರಕೃತಿ ಶಿಕ್ಷಕ ವಿ.ತೇಜಸ್ ಅತಂಕ ವ್ಯಕ್ತಪಡಿಸಿದರು.

ಸಮೀಪದ ಬ್ಯಾಡರಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಬೇಡ್ಕರ್ ಸಭಾಂಗಣದಲ್ಲಿ ಕಾವೇರಿ ವನ್ಯಜೀವಿ ವಲಯ ಹಲಗೂರು ಮತ್ತು ವನೋದಯ ಸ್ವಯಂ ಸೇವಾ ಸಂಸ್ಥೆಯಿಂದ ಆಯೋಜಿಸಿದ್ದ ವಿಶ್ವ ಹುಲಿ ದಿನಾಚರಣೆಯಲ್ಲಿ ಮಾತನಾಡಿದರು.

ಒಂದು ಕಾಡಿನಲ್ಲಿ ಹುಲಿ ಸಂತತಿ ವಾಸವಾಗಿದೆ ಎಂದರೆ ಆ ಕಾಡು ಸಮೃದ್ಧವಾಗಿದೆ ಎಂದರ್ಥ. ಹುಲಿಗಳ ಆಹಾರಕ್ಕಾಗಿ ವಾರ್ಷಿಕ ಸುಮಾರು 50ಕ್ಕೂ ಹೆಚ್ಚು ಬಲಿ ಪ್ರಾಣಿಗಳು ಬೇಕಾಗಲಿವೆ. ಹುಲಿ ಕಾಡಿನಲ್ಲಿ ಕಾಟಿ, ಜಿಂಕೆ, ಕೃಷ್ಣಾಮೃಗ, ಕಾಡು ಹಂದಿ ಸೇರಿದಂತೆ ಹಲವು ಬಗೆಯ ಬಲಿ ಪ್ರಾಣಿಗಳು ಸಮೃದ್ಧವಾಗಿ ಇದ್ದಾಗ ಹುಲಿಗಳ ಸಂತತಿ ಹೆಚ್ಚಲು ಸಾಧ್ಯ ಎಂದರು.

ಕಾಡಿನಲ್ಲಿರುವ ಹಂದಿ, ಜಿಂಕೆ ಮುಂತಾದ ಪ್ರಾಣಿಗಳನ್ನು ಕಳ್ಳ ಬೇಟೆಗಾರರು ಕೊಂದು ಹಾಕುತ್ತಿದ್ದಾರೆ. ದನಗಾಹಿಗಳು ಹಸುಗಳಿಗೆ ಹೊಸ ಹುಲ್ಲು ಚಿಗರಲಿ ಎಂದು ಕಾಡಿಗೆ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಕಾಡು ನಾಶದ ಜೊತೆಗೆ ಹಲವು ಬಗೆಯ ವನ್ಯ ಜೀವಿಗಳು ಸಾವನ್ನಪ್ಪುತ್ತಿವೆ. ಪರಿಣಾಮ ಹುಲಿಗಳು ದೈನಂದಿನ ಆಹಾರ ಕೊರತೆಯಿಂದ ಸಾವನ್ನಪ್ಪಲಿವೆ ಎಂದು ವಿಷಾದಿಸಿದರು.

ದೇಶದಲ್ಲಿ ಅವನತಿಯ ಹಾದಿಯಲ್ಲಿರುವ ಹುಲಿಗಳ ಸಂತತಿಯನ್ನು ಮತ್ತೆ ಹೆಚ್ಚಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದಕ್ಕೆ ವಿಫುಲ ಅವಕಾಶಗಳಿವೆ. ಭದ್ರಾ ಅಭಯಾರಣ್ಯದ ವಾಸಿಗಳಿಗೆ ಪರ್ಯಾಯ ಬದುಕು ಕಟ್ಟಿಕೊಟ್ಟ ಪರಿಣಾಮ ಆ ಭಾಗದಲ್ಲಿ ವನ್ಯಜೀವಿ ಸಂಖ್ಯೆ ಹೆಚ್ಚಳ ಆಗಿರುವುದು ರುಜುವಾತಾಗಿದೆ ಎಂದರು.

ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಕಾಡಂಚಿನ ಗ್ರಾಮಗಳ ನಿವಾಸಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಒಗ್ಗೂಡಿ ಕೆಲಸ ಮಾಡಿದರೇ ಹುಲಿಗಳ ನೆಲೆಗಳ ಸಂರಕ್ಷಣೆ ಸಾಧ್ಯ ಎಂದರು.

ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಶೇಖರ್ ದತ್ತಾತ್ರಿ ತಯಾರಿಸಿರುವ ಸುಮಾರು 45 ನಿಮಿಷಗಳ ಅವಧಿಯ ಹುಲಿಗಳ ಜೀವನ ಶೈಲಿ, ಹುಲಿಗಳು ಎದುರಿಸುತ್ತಿರುವ ಸಮಸ್ಯೆಗಳು ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಲಾಯಿತು. ಹುಲಿ ಜೀವನ ಕುರಿತು ಕುತೂಹಲಕಾರಿ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ಪಡೆದುಕೊಂಡರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಬಿ.ಎಂ.ಸತೀಶ್, ಗಸ್ತು ಅರಣ್ಯ ಪಾಲಕ ಸಿದ್ದರಾಮ ಪೂಜಾರಿ, ವನೋದಯ ಕ್ಷೇತ್ರ ಸಂಯೋಜಕ ಮಹೇಶ್ ಕುಮಾರ್, ಶಿಕ್ಷಕರಾದ ವಿಜಯ್ ಕುಮಾರ್, ಸಂದೀಪ್, ವೆಂಕಟಸ್ವಾಮಿ, ರಂಜಿತ್, ಲಕ್ಷಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ