ಪಚ್ಚೆದೊಡ್ಡಿಯಲ್ಲಿ ಹುಲಿ ಕೊಂದು ಮೂರು ತುಂಡು ಮಾಡಿದ್ದ ದುರುಳರು
ಮಲೆ ಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿಯಲ್ಲಿ ಹುಲಿ ಹತ್ಯೆ ಪ್ರಕರಣದ ತನಿಖೆ ಅಂತಿಮ ಘಟ್ಟಕ್ಕೆ ಬಂದಿದ್ದು, ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ನಾಲ್ವರು ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಪಚ್ಚಮಲ್ಲ, ಗಣೇಶ್, ಗೋವಿಂದೇಗೌಡ, ಸಂಪು ಎಂಬವರನ್ನು ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ನಾಲ್ವರನ್ನು ಕೂಡ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡುತ್ತಿದ್ದರಿಂದ ರೊಚ್ಚಿಗೆದ್ದ ದನಗಾಹಿಗಳು ಬೇಟೆಯಾಡಿದ್ದ ಹಸುವಿಗೆ ವಿಷ ಪ್ರಾಷನ ಮಾಡಿಸುವ ಮೂಲಕ ಮತ್ತು ಅದೇ ಹಸುವನ್ನು ತಿಂದು ಹುಲಿ ಸಾಯುವಂತೆ ಮಾಡಿದ್ದರು. ಬಳಿಕ ಅದರ ಕಳೆಬರವನ್ನು ತುಂಡು ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.ಹುಲಿ ಬೇಟೆಯಾಡಿದ್ದ ಹಸುವಿನ ಕಳೆಬರಕ್ಕಾಗಿ ಅರಣ್ಯ ಇಲಾಖೆ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದು, ಶಿರಾದಿಂದ ಕುರಿಗಳನ್ನು ಮೇಯಿಸಲು ಬಂದಿದ್ದ ಕಂಬಣ್ಣ ಹಾಗೂ ಮಂಜುನಾಥ್ ವಿಚಾರಣೆ ಮುಂದುವರೆದಿದೆ. ಸದ್ಯ, ನಾಲ್ವರು ಆರೋಪಿಗಳಿಗೂ ವೈದ್ಯಕೀಯ ಪರೀಕ್ಷೆ ಮಾಡಿಸಿ ಅರಣ್ಯಾಧಿಕಾರಿಗಳು ಕರೆದೊಯ್ದಿದ್ದಾರೆ.ಘಟನೆ ಹಿನ್ನೆಲೆ:
ಪ್ರತೀಕಾರಕ್ಕೆ ಹುಲಿಯ ದೇಹ ತುಂಡು: ಹುಲಿಯ ಉಪಟಳಕ್ಕೆ ಬೇಸತ್ತು ಪ್ರತೀಕಾರಕ್ಕಾಗಿ ಹುಲಿಯನ್ನು ಕೊಲ್ಲಲಾಗಿದೆ ಎಂದು ಶಂಕಿಸಲಾಗಿದೆ. ಹುಲಿ ಕೊಂದ ಬಳಿಕ ಕೊಡಲಿಯಿಂದ ಹುಲಿಯನ್ನು ಮೂರು ಭಾಗಗಳಾಗಿ ಮಾಡಿ ಎರಡು ಭಾಗವನ್ನು ಮಣ್ಣಿನಿಂದ ಮತ್ತೊಂದು ಭಾಗವನ್ನು ಎಲೆಗಳಿಂದ ಮುಚ್ಚಲಾಗಿದ್ದನ್ನು ಪತ್ತೆ ಹಚ್ಚಲಾಗಿತ್ತು.