ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ಆತಂಕ ಹೆಚ್ಚಾಗಿದ್ದು, ರಾತ್ರಿ ಶಾಲಾ ಮೈದಾನದಲ್ಲಿ ಹುಲಿ ಓಡಾಡಿದ ಘಟನೆ ಪೊನ್ನಂಪೇಟೆ ತಾಲೂಕಿನಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮದ ಸರ್ಕಾರಿ ಶಾಲಾ ಮೈದಾನದಲ್ಲಿ ಬುಧವಾರ ರಾತ್ರಿ 10.30ರ ಸಮಯದಲ್ಲಿ ಹುಲಿ ಓಡಾಡಿದ್ದು, ಮೈದಾನದ ಮೂಲಕ ಸಾಗಿ ಕಾಫಿ ತೋಟದೊಳಕ್ಕೆ ಹೋಗಿದೆ.
ಹುಲಿ ಓಡಾಟದಿಂದ ಗ್ರಾಮದ ಜನರು ಆತಂಕಗೊಂಡಿದ್ದಾರೆ.ಕಣದಲ್ಲಿ ಹಾಕಿರುವ ಕಾಫಿ ನೋಡಲು ಹೋದಾಗ, ರವಿ ಎಂಬವರಿಗೆ ಹುಲಿ ಕಾಣಿಸಿಕೊಂಡಿದ್ದು, ಭಯಭೀತರಾಗಿದ್ದಾರೆ.
ಹುಲಿ ಓಡಾಟದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಸ್ಥಳಕ್ಕೆ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ದಿವಾಕರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯಕುಶಾಲನಗರ: ಬೆಳಗಿನ ಜಾವ ಮನೆಯಿಂದ ಹೊಲಕ್ಕೆ ತೆರಳಿದ್ದ ಮಹಿಳೆ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ ಘಟನೆ ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.
ಕಾಡಾನೆಯ ದಾಳಿಯಿಂದ ಹೆಬ್ಬಾಲೆ ಗ್ರಾಮ ವ್ಯಾಪ್ತಿಯ ಚಿನ್ನೇನಹಳ್ಳಿ ನಿವಾಸಿ ಅಂದಾಜು 65ರ ಪ್ರಾಯದ ವೆಂಕಟಮ್ಮ ಅವರ ಬಲಗಾಲು ಸಂಪೂರ್ಣ ಜಖಂ ಗೊಂಡಿದೆ.
ವಿಷಯ ತಿಳಿದು ವೆಂಕಟಮ್ಮ ಪುತ್ರ ವೆಂಕಟೇಶ ತನ್ನ ಸ್ನೇಹಿತರೊಂದಿಗೆ ಹೊಲಕ್ಕೆ ತೆರಳಿ ನೋಡಿದಾಗವೆಂಕಟಮ್ಮ ತೀವ್ರ ರಕ್ತ ಸ್ರಾವದೊಂದಿಗೆ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡುಬಂತು.
ಕೂಡಲೇ ವೆಂಕಟಮ್ಮ ಅವರನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಚೇತನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ . ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಕೆಲವರು ಪ್ರತಿಭಟನೆ ನಡೆಸಿ ಕಾಡಾನೆ ದಾಳಿ ಶಾಶ್ವತವಾಗಿ ತಪ್ಪಿಸುವಂತೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.