ಕನ್ನಡಪ್ರಭ ವಾರ್ತೆ ಹಾಸನ
ಭಾರತೀಯ ಪರಂಪರೆಯಲ್ಲಿ ಹಬ್ಬಗಳೆಂದರೆ ಕೇವಲ ಆಚರಣೆಗಳಷ್ಟೇ ಅಲ್ಲ, ಅದೊಂದು ಭಾವನೆಗಳ ಬೆಸುಗೆ, ಸೌಹಾರ್ದತೆಯ ಸಂಕೇತ. ಪ್ರತಿಯೊಂದು ಆಚರಣೆಯು ಒಂದಲ್ಲಾ ಒಂದು ನಂಬಿಕೆಯ ಅಡಿಪಾಯದಲ್ಲಿ ಆಚರಿಸಲ್ಪಡುತ್ತವೆ. ಕೆಟ್ಟದ್ದರ ಮೇಲೆ ಒಳ್ಳೆಯದರ ಗೆಲುವು, ಅಜ್ಞಾನದ ಮೇಲೆ ಜ್ಞಾನದ ವಿಜಯ, ಹೊಸ ವರ್ಷ ಹೊಸ ಪಸಲಿನ ಸುಗ್ಗಿ ಹರುಷದ ಹಾದಿ, ಪವಿತ್ರ ತ್ಯಾಗ, ಕೃತಜ್ಞತೆಯ ಭಾವ. ಹೀಗೆ ನೂರಾರು ವೈಶಿಷ್ಟ್ಯವು ಬೀದಿಬೀದಿಗಳಲ್ಲಿ, ಮನೆ ಮನೆಗಳಲ್ಲಿ ತುಂಬುವ ಸಂಸ್ಕೃತಿ ನಮ್ಮದು. ಆಧುನಿಕತೆ ವಿದ್ಯಮಾನಗಳಲ್ಲಿ ಮರೆಯಾಗುತ್ತಿರುವ ಸಂಪ್ರದಾಯದ ಆಚರಣೆ ಹಾಗೂ ಕೃತಕತೆಯ ರೂಪ ಪಡೆಯುತ್ತಿರುವ ಮನಸುಗಳಿಗೆ ಭಾದ್ರಪದ ಮಾಸದ ಶುಕ್ಲ ಪಕ್ಷದ ತದಿಗೆಯಂದು ಗೌರಿ ಹಬ್ಬ ಮತ್ತು ಚತುರ್ಥಿಯೆಂದು ಗಣೇಶ ಚತುರ್ಥಿಯ ಸಂಭ್ರಮಾಚರಣೆ ಮಾಡಲಾಗುತ್ತಿದೆ.
ಹಬ್ಬದ ಪ್ರಮುಖ ಆಚರಣೆ ಬಾಗಿನ ನೀಡಿ ಗೌರಿಯನ್ನು ಬೆಳಗಿಕೊಳ್ಳುವ, ಸೌಭಾಗ್ಯವನ್ನು ಬೇಡುವ ಅತ್ಯಂತ ಮಹತ್ವದ ಹಬ್ಬ ಆಚರಣೆಯನ್ನು ವಿದ್ಯಾರ್ಥಿಗಳು ಪಟ್ಟಣದ ಕೇಂದ್ರ ಮಾರುಕಟ್ಟೆಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೆರಳಿ ಅಕ್ಕಿ, ಬೇಳೆ, ಬೆಲ್ಲ, ಅರಿಶಿನ, ಕುಂಕುಮ, ಬಳೆ, ತೆಂಗಿನ ಕಾಯಿ ತರಕಾರಿ ತುಂಬಿದ ಎರಡು ಮೊರಗಳ ಬಾಗಿನವನ್ನು ನೀಡಿ ಹಬ್ಬದ ಶುಭಾಶಯಗಳು ಕೋರಿ ಅವರಿಂದ ಆಶೀರ್ವಾದ ಪಡೆದರು. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ಗಣೇಶನನ್ನು ತ್ಯಜಿಸಿ ಪರಿಸರ ಸ್ನೇಹಿ ಗಣೇಶನನ್ನು ಬರಮಾಡಿಕೊಳ್ಳಿ. ಸ್ಥಳೀಯ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಿ ಎನ್ನುವ ಮಹತ್ತರವಾದ ಸಂದೇಶವನ್ನು ನೀಡುತ್ತಾ ಶಾಲಾ ಗಣೇಶೋತ್ಸವನ್ನು ಶಾಲಾ ಮಕ್ಕಳು ಅತ್ಯಂತ ಮಹತ್ವಪೂರ್ಣವಾಗಿ ಆಚರಿಸಿದರು.