ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಭಾನುವಾರ ಬಂಡೀಪುರ ರಾತ್ರಿ ಸಂಚಾರ ತೆರವು ವಿರೋಧಿಸಿ ಪರಿಸರವಾದಿಗಳು ಬಂಡೀಪುರದ ಮದ್ದೂರು ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ಪ್ರತಿಭಟನೆ ನಡೆದ ಹಿನ್ನೆಲೆ ಕೇರಳ ರಾಜ್ಯಕ್ಕೆ ತಾಲೂಕಿನ ಕ್ರಷರ್ ಉತ್ಪನ್ನ ಹಾಗೂ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ್‌ಗಳ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ನಾನಾ ಚರ್ಚೆ, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಕೇರಳ ರಾಜ್ಯಕ್ಕೆ ಕ್ರಷರ್‌ನ ಉತ್ಪನ್ನಗಳಾದ ಎಂ.ಸ್ಯಾಂಡ್, ಜಲ್ಲಿ ಹಾಗೂ ಕಲ್ಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಎಂಡಿಪಿ ಹಾಗೂ ಪರ್ಮಿಟ್ ಪಡೆದು ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸುತ್ತಿದ್ದರು. ಆದರೆ ಭಾನುವಾರ ಪರಿಸರವಾದಿಗಳು ನಡೆಸಿದ ಪ್ರತಿಭಟನೆ ಹಿನ್ನೆಲೆ ಭಾನುವಾರ ಬೆಳಿಗ್ಗೆಯಿಂದ ಸಂಜೆ ತನಕ ಒಂದು ಟಿಪ್ಪರ್ ಸಹ ಕೇರಳ ರಾಜ್ಯದತ್ತ ಕ್ರಷರ್ ಉತ್ಪನ್ನಗಳ ಸಾಗಾಣಿಕೆ ಮಾಡಲಿಲ್ಲ.ಕೇರಳ ರಾಜ್ಯಕ್ಕೆ ಕ್ರಷರ್ ಹಾಗೂ ಕ್ವಾರಿ ಉತ್ಪನ್ನ ಸಾಗಾಣಿಕೆ ಕಾನೂನು ಬದ್ಧವಾಗಿ ಮಾಡುತ್ತಿದ್ದರೆ ಭಾನುವಾರ ಪ್ರತಿಭಟನೆ ಇದೆ ಅಂತ ಯಾಕೆ ಸಂಚರಿಸಲಿಲ್ಲ. ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದರಿದಂಲೇ ಟಿಪ್ಪರ್ ನಿಲ್ಲಿಸಿದ್ದಾರೆ ಎಂದು ಸಾರ್ವಜನಿಕರು ಹೇಳಿದ್ದಾರೆ. ರಾಯಲ್ಟಿ, ಎಂಡಿಪಿ ಜೊತೆ ಟಿಪ್ಪರ್‌ಗೆ ನಿಗದಿಪಡಿಸಿದ ಟನ್‌ನಷ್ಟು ಕ್ರಷರ್, ಕ್ವಾರಿ ಉತ್ಪನ್ನ ಸಾಗಿಸಲು ಅವಕಾಶವಿದ್ದರೂ ಪ್ರತಿಭಟನೆ ಹಾಗೂ ಅಧಿಕಾರಿಗಳು ಬರುತ್ತಾರೆಂಬ ಮಾಹಿತಿ ದೊರೆತ ತಕ್ಷಣದಿಂದಲೇ ಟಿಪ್ಪರ್‌ಗಳ ಸಂಚಾರ ಸ್ಥಗಿತಗೊಂಡಿವೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಗದಿ ಪಡಿಸಿದ ರಾಯಲ್ಟಿ, ಎಂಡಿಪಿ ಜೊತೆಗೆ ಟಿಪ್ಪರ್‌ನ ಟನ್ ಕೆಪಾಸಿಟಿಗೆ ಅನುಗುಣವಾಗಿ ಕ್ರಷರ್ ಹಾಗೂ ಕ್ವಾರಿ ಉತ್ಪನ್ನ ಹಾಕಿಕೊಂಡು ಪ್ರತಿಭಟನೆ ವೇಳೆ ಟಿಪ್ಪರ್ ಹೋಗಿದ್ದರೆ ಯಾರು ತಡೆಯುತ್ತಿರಲಿಲ್ಲ? ಕಾರಣ ಕಾನೂನು ಬದ್ಧವಾಗಿದೆ ಎಂದರ್ಥವಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.ದಿನನಿತ್ಯ ಸಾವಿರಾರು ಟನ್ ಕ್ರಷರ್ ಉತ್ಪನ್ನ ಹಾಗೂ ಕ್ವಾರಿಯ ಕಲ್ಲು ರಾಯಲ್ಟಿ, ಎಂಡಿಪಿ ವಂಚಿಸಿ ಕೇರಳಕ್ಕೆ ಟಿಪ್ಪರ್ ಹೋಗುತ್ತಿವೆ ಎಂಬುದಕ್ಕೆ ಭಾನುವಾರ ಪರಿಸರವಾದಿಗಳು ನಡೆಸಿದ ಪ್ರತಿಭಟನೆ ವೇಳೆ ಟಿಪ್ಪರ್‌ಗಳು ಸ್ಥಬ್ಧವಾಗಿದ್ದೇ ಪ್ರಮುಖ ಸಾಕ್ಷಿ. ಕೇರಳಕ್ಕೆ ಕ್ರಷರ್, ಕ್ವಾರಿ ಉತ್ಪನ್ನ ಸಾಗಿಸಲು ಕೇರಳ ಮೂಲದ ವ್ಯಕ್ತಿಯೊಬ್ಬ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿರುವ ಕಾರಣ ಅರಣ್ಯ ಇಲಾಖೆ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಪೊಲೀಸ್, ಅರಣ್ಯ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವುದೇ ಯಥೇಚ್ಛವಾಗಿ ಎಗ್ಗಿಲ್ಲದೆ ರಾಯಲ್ಟಿ, ಎಂಡಿಪಿ ವಂಚಿಸಲು ಕೇರಳಕ್ಕೆ ಎಂ.ಸ್ಯಾಂಡ್, ಜಲ್ಲಿ, ಕಲ್ಲು ತೆರಳುತ್ತಿದೆ ಎಂಬ ಆರೋಪಕ್ಕೆ ಜಿಲ್ಲಾಡಳಿತ ಜನತೆಗೆ ವಾಸ್ತವ ಸಂಗತಿ ಹೇಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಬೆಳಿಗ್ಗೆಯಿಂದಲೇ ಟಿಪ್ಪರ್‌ಗಳ ಸಂಚಾರ:ಭಾನುವಾರ ಪರಿಸರವಾದಿಗಳ ಪ್ರತಿಭಟನೆ ಹಿನ್ನೆಲೆ ಕೇರಳ ರಾಜ್ಯಕ್ಕೆ ತಾಲೂಕಿನಿಂದ ಎಂ.ಸ್ಯಾಂಡ್, ಜಲ್ಲಿ, ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ್‌ಗಳ ಸದ್ದಡಗಿತ್ತು. ಆದರೆ ಸೋಮವಾರ ಬೆಳಗ್ಗೆಯಿಂದಲೇ ಟಿಪ್ಪರ್‌ಗಳು ಕೇರಳ ರಾಜ್ಯದತ್ತ ಮುಖ ಮಾಡಿವೆ.