ಶಾಂತಿಯುತ, ಪರಿಸರಸ್ನೇಹಿ ಹಬ್ಬ ಆಚರಣೆಗೆ ಸಲಹೆ

KannadaprabhaNewsNetwork |  
Published : Aug 24, 2025, 02:00 AM IST
ಹಾವೇರಿಯಲ್ಲಿ ಗಣೇಶ ಚತುರ್ಥಿ, ಈದ್‌ ಮಿಲಾದ್‌ ಪ್ರಯುಕ್ತ ಡಿಸಿ ನೇತೃತ್ವದಲ್ಲಿ ಶಾಂತಿಸಭೆ ನಡೆಯಿತು. | Kannada Prabha

ಸಾರಾಂಶ

ದೇಶದ ಸಂಸ್ಕೃತಿ, ಪರಂಪರೆ, ವೈವಿಧ್ಯತೆಯಿಂದ ಕೂಡಿದೆ. ಧರ್ಮಗಳು ನ್ಯಾಯದ ಬದುಕು ನಡೆಸುವುದನ್ನು ಹೇಳಿಕೊಟ್ಟಿವೆ. ಪೈಗಂಬರ್ ಅವರು ಸಹಾನುಭೂತಿ, ಸಮಾನತೆ ಬೋಧಿಸಿದ್ದಾರೆ.

ಹಾವೇರಿ: ಹಬ್ಬಗಳು ಸಮಾನತೆ ಹಾಗೂ ಸಹೋದರತೆ ಸಂಕೇತವಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತ ಹಾಗೂ ಪರಿಸರಸ್ನೇಹಿಯಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಸಲಹೆ ನೀಡಿದರು.

ಗುರುವಾರ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಜರುಗಿದ ಗೌರಿ ಗಣೇಶ ಹಾಗೂ ಈದ್‌ ಮಿಲಾದ್‌ ಹಬ್ಬದ ಶಾಂತಿಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶದ ಸಂಸ್ಕೃತಿ, ಪರಂಪರೆ, ವೈವಿಧ್ಯತೆಯಿಂದ ಕೂಡಿದೆ. ಧರ್ಮಗಳು ನ್ಯಾಯದ ಬದುಕು ನಡೆಸುವುದನ್ನು ಹೇಳಿಕೊಟ್ಟಿವೆ. ಪೈಗಂಬರ್ ಅವರು ಸಹಾನುಭೂತಿ, ಸಮಾನತೆ ಬೋಧಿಸಿದ್ದಾರೆ. 12ನೇ ಶತಮಾನದಲ್ಲಿ ಸಂತರು, ಶರಣರು ಹಾಗೂ ಸೂಫಿಗಳು ಸಮಾಜದಲ್ಲಿ ಸಾಮರಸ್ಯ ಬೆಸುಯುವ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಆಗದ ಹಾಗೆ ಎಲ್ಲರೂ ಸೌಹಾರ್ದದಿಂದ ಹಬ್ಬ ಆಚರಿಸೋಣ ಎಂದರು.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ಅನುಕೂಲವಾಗುವಂತೆ ನಗರಸಭೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುವುದು. ಗಣೇಶ ಮಂಡಳಿಗಳು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಆಯೋಜನೆ ಮಾಡಬೇಕು. ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಡಿಜೆ ಬದಲಾಗಿ ಸಾಂಪ್ರದಾಯಿಕ ವಾದ್ಯಗಳಿಗೆ ಹಾಗೂ ಮಣ್ಣಿನ ಮೂರ್ತಿ ಪ್ರತಿಷ್ಠಾಪನೆಗೆ ಆದ್ಯತೆ ನೀಡಬೇಕು. ಹಬ್ಬ ಆಚರಣೆ ಸಮಯದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ರಸ್ತೆಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ಹಬ್ಬದ ಆಚರಣೆಯಲ್ಲಿ ಸುರಕ್ಷತೆ ಬಹಳ ಮುಖ್ಯ. ಹಾಗಾಗಿ ಗಣೇಶ ಮಂಡಳಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹಾಗಾಗಿ ಆಯೋಜಕರೇ ಪೆಂಡಾಲ್ ಕಾವಲಿಗೆ ಸ್ವಯಂ ಸೇವಕರ ನೇಮಕ ಮಾಡಬೇಕು. ಮೆರವಣಿಗೆ ಮಾರ್ಗ ಬದಲಾವಣೆ ಮಾಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್‌ ಮತ್ತು ಬಂಟಿಂಗ್ ಅಳವಡಿಕೆಗೆ ಅನುಮತಿ ಕಡ್ಡಾಯವಾಗಿದೆ. ಯಾವುದೆ ಧರ್ಮದ ಜನರ ಭಾವನೆಗಳಿಗೆ ಧಕ್ಕೆಯಾಗಬಾರದು. ಸಾರ್ವಜನಿಕ ಗಣೇಶ ಮೂರ್ತಿಗಳ ವೀಕ್ಷಣೆಗೆ ಬಂದಾಗ ನೂಕುನುಗ್ಗಲು ಉಂಟಾಗದಂತೆ ವ್ಯವಸ್ಥೆ ಮಾಡಬೇಕು. ಸಿಸಿ ಕ್ಯಾಮೆರಾ ಅಳವಡಿಸಬೇಕು. ಡಿಜೆ ಬಳಕೆಗೆ ಅವಕಾಶವಿಲ್ಲ. ಹಾಗಾಗಿ ಸ್ಥಳೀಯ ಕಲಾ ತಂಡಗಳಿಗೆ ಅವಕಾಶ ನೀಡಿ, ನಮ್ಮ ಕಲೆ ಪ್ರೋತ್ಸಾಹಿಸಬೇಕು. 120 ಡೆಸಿಬಲ್ ಮೀರಿ ಧ್ವನಿವರ್ಧಕ ಬಳಕೆ ಮಾಡಬಾರದು. ಹಬ್ಬಗಳನ್ನು ಶಾಂತಿಯುತ ಹಾಗೂ ಸೌಹಾರ್ದದಿಂದ ಆಚರಿಸೋಣ ಎಂದರು.

ವಿವಿಧ ತಾಲೂಕುಗಳಿಂದ ಆಗಮಿಸಿದ ಗಣೇಶ ಮಂಡಳಿ ಮುಖಂಡರು ಹಾಗೂ ಅಂಜುಮನ್ ಇಸ್ಲಾಂ ಕಮಿಟಿ ಮುಖಂಡರು ಮಾತನಾಡಿದರು.

ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ, ಸವಣೂರು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ, ಹಾವೇರಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಜಿಪಂ ಉಪಕಾರ್ಯದರ್ಶಿ ಫುನೀತ್, ಸಮಾಜದ ಮುಖಂಡರು ಉಪಸ್ಥಿತರಿದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!