ಮಡಿಕೇರಿ: ಬತ್ತ ಬೆಳೆಯ ಕ್ಷೇತ್ರೋತ್ಸವ ಹಾಗೂ ವಿಶ್ವ ಮಣ್ಣು ದಿನಾಚರಣೆಯು ಡಿ.9ರಂದು ಸೋಮವಾರ ಬೆಳಗ್ಗೆ 10.30ಕ್ಕೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.
ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ ಹಾಗೂ ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಗಳು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಜರುಗಲಿದೆ.ಈ ಕಾರ್ಯಕ್ರಮದಲ್ಲಿ ರೈತರಿಗೆ ವಿವಿಧ ತಾಕುಗಳಿಗೆ ಭೇಟಿ, ಕೃಷಿ ಮತ್ತು ಕೃಷಿಗೆ ಸಂಬಂಧಪಟ್ಟ ಇಲಾಖೆಗಳ ಪ್ರದರ್ಶನ ಮಳಿಗೆಗಳು, ವೈಜ್ಞಾನಿಕ ಕೃಷಿ, ಸಮಗ್ರ ಕೃಷಿ ಪದ್ಧತಿಗಳು ಮತ್ತಿತರ ಬಗ್ಗೆ ರೈತ ವಿಜ್ಞಾನಿಗಳ ವಿಚಾರ ವಿನಿಮಯ ಹಾಗೂ ಪ್ರಗತಿಪರ ರೈತರಿಂದ ಅಭಿಪ್ರಾಯ ಮಂಡನೆ ಮತ್ತಿತರ ಚಟುವಟಿಕೆಗಳು ನಡೆಯಲಿದೆ.
ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ಅವರು ಉದ್ಘಾಟಿಸಲಿದ್ದಾರೆ. ಸಂಶೋಧನಾ ನಿರ್ದೇಶಕರಾದ ಡಾ. ದುಷ್ಯಂತ್ ಕುಮಾರ್ ಬಿ.ಎಂ., ವಿಸ್ತರಣಾ ನಿರ್ದೇಶಕರಾದ ಡಾ.ಗುರುಮೂರ್ತಿ ಕೆ.ಟಿ., ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಹಾಗೂ ತೋಟಗಾರಿಕೆ ಉಪ ನಿರ್ದೇಶಕರಾದ ಡಾ.ಯೋಗೀಶ್ ಎಚ್.ಆರ್. ಅವರು ಪಾಲ್ಗೊಳ್ಳಲಿದ್ದಾರೆ.ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ಚೆಟ್ಟಳ್ಳಿ ಕೇಂದ್ರಿಯ ಕಾಫಿ ಸಂಶೋಧನಾ ಉಪಕೇಂದ್ರ ದ ವಿಜ್ಞಾನಿಗಳು, ಜಿಲ್ಲೆಯ ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ರೈತರು ತಮಗೆ ಬೇಕಾದ ಯಾವುದೇ ಬೆಳೆಯ ಕುರಿತು ಅಥವಾ ಕೃಷಿ ಸಂಬಂಧಿತ ಯಾವುದೇ ಚಟುವಟಿಕೆಗಳ ಬಗೆಗಿನ ಮಾಹಿತಿಯನ್ನು ಪಡೆಯಲು ಅವಕಾಶವಿದೆ.
ಕಾರ್ಯಕ್ರಮದಲ್ಲಿ ಕೊಡಗಿನ ಜನತೆ ಮುಖ್ಯವಾಗಿ ರೈತರು, ರೈತ ಮಹಿಳೆಯರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಪರಿಸರಾಸಕ್ತರು ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.