ಹಿಂದೂ- ಮುಸ್ಲಿಂ ಭಾವೈಕ್ಯದ ಬೀಡು ಎಂದೇ ಪ್ರಸಿದ್ಧಿ ಪಡೆದ ಶಿರಹಟ್ಟಿಯ ಪುಣ್ಯಭೂಮಿಯಲ್ಲಿ ನೆಲೆಸಿ ಫಕೀರ- ಈಶ್ವರ ಎಂಬ ಉಭಯ ಧರ್ಮೀಯರ ನಾಮಾಂಕಿತದಿಂದ ಕರೆಯಲ್ಪಡುವ ಫಕೀರೇಶ್ವರರು ಎಲ್ಲರ ಆರಾಧ್ಯ ದೇವರಾಗಿದ್ದಾರೆ.
ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ಆಗಿ ಹುಣ್ಣಿಮೆಯ ದಿನವಾದ ಶುಕ್ರವಾರ ಮೇ ೧ರಂದು ಸಂಜೆ ೫ಕ್ಕೆ ಫಕೀರೇಶ್ವರ ಮಹಾರಥೋತ್ಸವ ಜರುಗಲಿದೆ. ಮೇ ೨ರಂದು ಸಂಜೆ ೫ಕ್ಕೆ ಕಡುಬಿನ ಕಾಳಗ ಮತ್ತು ಧರ್ಮಸಭೆ ನಡೆಯಲಿದ್ದು, ಮೇ ೬ರಂದು ಬುಧವಾರ ಸಾಯಂಕಾಲ ೫ ಗಂಟೆಗೆ ಕಳಸ ಇಳಿಸುವ ಕಾರ್ಯಕ್ರಮ ಜರುಗಲಿದೆ.ಹಿಂದೂ- ಮುಸ್ಲಿಂ ಭಾವೈಕ್ಯದ ಬೀಡು ಎಂದೇ ಪ್ರಸಿದ್ಧಿ ಪಡೆದ ಶಿರಹಟ್ಟಿಯ ಪುಣ್ಯಭೂಮಿಯಲ್ಲಿ ನೆಲೆಸಿ ಫಕೀರ- ಈಶ್ವರ ಎಂಬ ಉಭಯ ಧರ್ಮೀಯರ ನಾಮಾಂಕಿತದಿಂದ ಕರೆಯಲ್ಪಡುವ ಫಕೀರೇಶ್ವರರು ಎಲ್ಲರ ಆರಾಧ್ಯ ದೇವರಾಗಿದ್ದಾರೆ. ಇಂತಹ ಸಾಮರಸ್ಯವನ್ನು ಸಾರಿದ ಮಹಾತ್ಮರ ಜಾತ್ರೆ ಮೇ ೧ರಿಂದ ಅದ್ಧೂರಿಯಾಗಿ ನಡೆಯಲಿದೆ.೧೬ನೇ ಶತಮಾನದಲ್ಲಿ ಜ. ಫಕೀರೇಶ್ವರ ಹಿಂದು ಮುಸ್ಲಿಂ ಉಭಯ ಧರ್ಮದವರಿಗೆ ಭಾವೈಕ್ಯ, ಸಹಬಾಳ್ವೆಯ ಕಣ್ಣು ತೆರೆಸಿ, ಹರಿಯ ಭಕ್ತರಿಗೆ ಹರಿಯಾಗಿ, ಹರನ ಭಕ್ತರಿಗೆ ಹರನಾಗಿ, ಹಜರತನ ಭಕ್ತರಿಗೆ ಹಜರತನಾಗಿ, ದೇಶದ ಉದ್ದಗಲಕ್ಕೂ ಸಂಚರಿಸಿದ್ದಾರೆ. ನಂತರ ಶಿರಹಟ್ಟಿಯಲ್ಲಿ ಫಕೀರೇಶ್ವರರು ನೆಲೆಸಿ ಪಾವನ ಕ್ಷೇತ್ರವನ್ನಾಗಿ ಮಾಡಿದರು. ಉಭಯ ಧರ್ಮಗಳ ಸಂಸ್ಕೃತಿ ಸಂಕೇತಗಳನ್ನು ಶ್ರೀಮಠದ ಎಲ್ಲ ಭಾಗದಲ್ಲಿಯೂ ಗುರುತಿಸಬಹುದು. ಹೆಸರೇ ಸೂಚಿಸುವಂತೆ ಫಕೀರ ಮತ್ತು ಈಶ್ವರರ ಸಂಗಮವಾಗಿ ಫಕೀರೇಶ್ವರರು ವೈರಾಗ್ಯಶಾಲಿಗಳು, ಪವಾಡ ಪುರುಷರಾದ ಮಹಾನ್ ಚೇತನ.ಮಾನವ ಕುಲಂ ಒಂದೇ ವಲಂ ಎಂಬ ಸಂದೇಶ, ದ್ವೇಷ ಬಿಡಿ ಪ್ರೀತಿ ಮಾಡಿ ಎಂದು ಜಗತ್ತಿಗೆ ಸಾರಿದ ಶಿರಹಟ್ಟಿಯ ಫಕೀರೇಶ್ವರ ಮಠ ೧೫೭೦ರ ಸುಮಾರಿಗೆ ಚನ್ನವೀರ ಎಂಬ ಹಿಂದು ಶರಣರೊಬ್ಬರು ಹಜರತ್ ಖಾಜಾ ಅಮೀನುದ್ದೀನ್ ಎಂಬ ಸೂಫಿ ಸಂತರಲ್ಲಿ ಹಿಂದೂ ಮುಸ್ಲಿಂ ಎರಡು ಧರ್ಮದ ತತ್ವವನ್ನು ಅಭ್ಯಾಸ ಮಾಡಿ ಧರ್ಮ ಸಾಮರಸ್ಯದ ಮತ್ತು ಭಾವೈಕ್ಯ ಬೋಧನೆಯನ್ನು ಕನ್ನಡ ನಾಡಿಗೆ ನೀಡಿದರು.ಇಸ್ಲಾಂ ಗುರುವಿನಿಂದ ದೀಕ್ಷೆ ಪಡೆದು ಫಕೀರ ಚನ್ನವೀರ ಎಂಬ ಹೆಸರನ್ನು ಹೊತ್ತು ಧರ್ಮಜಾಗೃತಿಯಲ್ಲಿ ತೊಡಗಿದರು. ಫಕೀರೇಶ್ವರರು ಅಂದಿನ ಅರಸರಾದ ಮುಸ್ಲಿಂ ದೊರೆಗಳಂತೆ ರಾಜ ಪೋಷಾಕು ಧರಿಸುತ್ತಿದ್ದರು. ಶೈವರಂತೆ ಹಣೆಯಲ್ಲಿ ವಿಭೂತಿ, ಸಾಧಕರಂತೆ ಕೊರಳಲ್ಲಿ ರುದ್ರಾಕ್ಷಿ, ಯೋಗಿಗಳಂತೆ ಕಾಲಲ್ಲಿ ಪಾದುಕೆ ಮೆಟ್ಟುತ್ತಿದ್ದರು. ಶೈವರು ಶಿವನೆಂದು, ವೈಷ್ಣವರು ಹರನೆಂದು, ಮುಸ್ಲಿಂಮರು ಪೈಗಂಬರರೆಂದು ಸಂಬೋಧಿಸುತ್ತಿದ್ದರು.ಫಕೀರೇಶ್ವರರು ಎಲ್ಲರಲ್ಲಿಯೂ ದೇವರಿದ್ದಾನೆ. ಎಲ್ಲವನ್ನು, ಎಲ್ಲರನ್ನೂ ಪ್ರೀತಿಸು, ಗೌರವಿಸು ವಿಶ್ವ ಪ್ರೇಮವೇ ವಿಶ್ವೇಶ್ವರನ ಆರಾಧನೆ ಎಂದರು. ದ್ವೇಷ ಬಿಡಿ- ಪ್ರೀತಿ ಮಾಡಿ ಎಂಬ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರಿದರು.
ಶಾಂತಿಯುತ ಸಹಬಾಳ್ವೆ ಹೊಂದುವುದೇ ಜೀವನದ ಗುರಿ. ದೇವರು ಒಬ್ಬನೇ. ಅವರು ಹೊಂದುವ ಧರ್ಮ ಒಂದೇ. ಪ್ರೇಮದಿಂದ ಬಾಳುವುದೇ ನಿಜವಾದ ಧರ್ಮ ಎಂಬ ಸಿದ್ಧಾಂತಗಳನ್ನು ಜನರಲ್ಲಿ ಜಾಗೃತಗೊಳಿಸಿದರು. ದೇಶ ಸಂಚಾರ ಮಾಡುತ್ತಾ ೧೬೧೦ರ ಸುಮಾರಿಗೆ ಶಿರಹಟ್ಟಿಗೆ ಆಗಮಿಸಿದ ಅವರು ಇಲ್ಲಿನ ಪಾವನ ಭೂಮಿಯನ್ನು ತಮ್ಮ ಶಾಶ್ವತ ನೆಲೆಯಾಗಿಸಿಕೊಂಡರು. ಡೊಂಬರ ಹುಡುಗ ಸಿದ್ದರಾಮನನ್ನು ತಮ್ಮ ಶಿಷ್ಯನನ್ನಾಗಿಸಿಕೊಂಡ ಫಕೀರೇಶ್ವರರು ಧರ್ಮದ ತಿರುಳು, ಸಾಮಾಜಿಕ ನೀತಿ ನಿಲುವುಗಳ ಶಿಕ್ಷಣ ನೀಡಿದರು.
ಫಕೀರೇಶ್ವರರ ದೇಹತ್ಯಾಗವು ಎಂದೂ ಮರೆಯದ ರೋಮಾಂಚನ ಘಟನೆ. ಈ ಜಗದ ನಿಯಮದಂತೆ ಫಕೀರೇಶ್ವರರು ತಮ್ಮ ಪಂಚಭೂತಾತ್ಮಕ ಶರೀರವನ್ನು ಪಂಚಭೂತಗಳಿಗೆ ಹಂಚಿಕೊಳ್ಳಲಿಲ್ಲ. ಅವರ ಅಂತ್ಯಸಂಸ್ಕಾರ ನಡೆಯಲೇ ಇಲ್ಲ. ಅಲ್ಲಮನು ಗುಹೆಯಲ್ಲಿ ಹೊಕ್ಕು ಬಯಲಾದಂತೆ, ಅಕ್ಕಮಹಾದೇವಿ ಕದಳಿಯಲ್ಲಿ ಬಯಲಾದಂತೆ ಫಕೀರೇಶ್ವರರು ಎಲ್ಲರೂ ನೋಡು ನೋಡುತ್ತಿದ್ದಂತೆ ಸರ್ಪವಾಗಿ ಹುತ್ತ ಸೇರಿದರು. ನಂತರ ಅವರು ಎಂದೂ ಮರಳಿ ಬರಲೇ ಇಲ್ಲ. ಆ ಹುತ್ತವೇ ಇಂದಿಗೂ ಅವರ ಸಮಾದಿಯಾಗಿದೆ. ಎರಡನೇ ಸ್ವಾಮೀಜಿ ಕತೃ ಗದ್ದುಗೆ ಕಟ್ಟಿಸಲು ಪ್ರಾರಂಭಿಸಿದರು. ೧೩ನೇ ಪಟ್ಟಾಧ್ಯಕ್ಷರಾಗಿ ಮಲ್ಲಿಕಾರ್ಜುನ ಮರಿದೇವರು ಫಕೀರ ಸಿದ್ದರಾಮ ಎಂಬ ನಾಮದಿಂದ ಕರೆಸಿಕೊಂಡು ೧೯೮೮ರಲ್ಲಿ ಪಟ್ಟಕ್ಕೆ ಬಂದ ತರುವಾಯ ನಾಡಿನಾದ್ಯಂತ ಶ್ರೀಮಠದ ಹೆಸರನ್ನು ಮತ್ತು ಮಠವನ್ನು ಭಕ್ತರ ಆಶ್ರಯ ತಾಣವನ್ನಾಗಿ ಮಾಡಿದರು. ಪಟ್ಟವನ್ನಲಂಕರಿಸಿದಾಗಿನಿಂದ ಇಂದಿನವರೆಗೂ ಶ್ರೀಮಠದ ಅಭಿವೃದ್ಧಿಗಾಗಿ, ಸೇವೆಗಾಗಿ ಹಗಲಿರುಳು ಎನ್ನದೇ ಭಕ್ತರ ಮನೆಮನೆಗೆ ಹೋಗಿ ಸಾಮರಸ್ಯದ ಬದುಕಿನ ಸಂದೇಶ ಸಾರುತ್ತಾ ಮಠವನ್ನು ಮುನ್ನಡೆಸುತ್ತಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.