ಇಂದಿನಿಂದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪನಾ ದಿನ

KannadaprabhaNewsNetwork | Published : Jul 20, 2024 12:46 AM

ಸಾರಾಂಶ

ಪಾಪು ಅವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ ಮುಖ್ಯಮಂತ್ರಿಗಳು ಸಂಘಕ್ಕೆ ಐದು ಎಕರೆ ಭೂಮಿ ನೀಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ಐದು ಎಕರೆ ಜಾಗ ಗುರುತಿಸಿ, ಜಿಲ್ಲಾಡಳಿತದಿಂದಲೂ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈವರೆಗೂ ಮಂಜೂರಾತಿ ದೊರೆತಿಲ್ಲ.

ಧಾರವಾಡ:

ಕರ್ನಾಟಕ ವಿದ್ಯಾವರ್ಧಕ ಸಂಘದ 135ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಜು. 20ರಿಂದ ಜು. 28ರ ವರೆಗೆ ಪ್ರಶಸ್ತಿ ಪ್ರದಾನ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 20ರಂದು ಸಂಜೆ 5.30ಕ್ಕೆ ಕಾರ್ಯಕ್ರಮ ಉದ್ಘಾಟನೆ ಹಾಗೂ ಕನ್ನಡ ಪ್ರಪಂಚ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ ಪ್ರದಾನ ಜರುಗಲಿದೆ. ಮೊಟಗಿಮಠ ಪ್ರಭುಚನ್ನಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಗಾವಿಯ ಕನ್ನಡಮ್ಮ ದಿನಪತ್ರಿಕೆಯ ಪರವಾಗಿ ಸಂಪಾದಕ ರಾಜು ಟೋಪಣ್ಣವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಉದ್ಘಾಟಿಸಲಿದ್ದಾರೆ. ಉನ್ನತ ಶಿಕ್ಷಣ ಅಕಾಡೆಮಿ ವಿಶ್ರಾಂತ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಸಾದ ಪ್ರಶಸ್ತಿ ಪ್ರದಾನ ಮಾಡಲಿದ್ದು, ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಅಭಿನಂದನಾ ನುಡಿಗಳನ್ನಾಡಲಿದ್ದಾರೆ ಎಂದರು.

ವಿವಿಧ ಕಾರ್ಯಕ್ರಮ:

ಧಾರವಾಡವನ್ನು ಶಿಕ್ಷಣ ಕಾಶಿಯನ್ನಾಗಿಸಿದ ಶಿಕ್ಷಣ ಸಂಸ್ಥೆಗಳ ಪರಿಚಯ, ಕಾರ್ಯಕಾರಿ ಸಮಿತಿ ಸದಸ್ಯರ ಕೊಠಡಿ ಮತ್ತು ಚಿತ್ರಕಲಾ ಗ್ಯಾಲರಿ ಮತ್ತು ಚಿತ್ರಕಲಾ ಪ್ರದರ್ಶನ ಉದ್ಘಾಟನೆಯಾಗಲಿದೆ. ಒಂಭತ್ತು ದಿನ ನಡೆಯಲಿರುವ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ, ಸುಗಮ ಸಂಗೀತ, ಜಾನಪದ ಹಾಡು, ನಾಟಕ ಪ್ರದರ್ಶನ, ಸಂಘದ ಹಿರಿಯ ಸದಸ್ಯರ ಸನ್ಮಾನ ಕೂಡ ಜರುಗಲಿದೆ. ಕವಿವ ಸಂಘ ಕೊಡಮಾಡುವ ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿಯನ್ನು ಕಾಂತಾವರದ ಕನ್ನಡ ಸಂಘದ ಸಂಸ್ಥಾಪಕ ಡಾ. ನಾ. ಮೊಗಸಾಲೆ ಅವರಿಗೆ ಇದೇ ವೇಳೆ ನೀಡಲಾಗುತ್ತಿದೆ. ಎರಡೂ ಪ್ರಶಸ್ತಿಗಳಿಗೆ ರು. 50 ಸಾವಿರ ನಗದು ಮೊತ್ತ ನಿಗದಿ ಪಡಿಸಲಾಗಿದೆ ಎಂದರು.

ಧಾರವಾಡವನ್ನು ಶಿಕ್ಷಣ ಕಾಶಿ ಎಂದು ಕರೆಯಿಸಿದ ಶಿಕ್ಷಣ ಸಂಸ್ಥೆಗಳ ಪರಿಚಯ ಮಾಡುವ ಕಾರ್ಯವನ್ನು ಈ ಸಮಯದಲ್ಲಿ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜು. 21ರಂದು ಬಾಶೆಲ್ ಮಿಷನ್ ಶಿಕ್ಷಣ ಸಂಸ್ಥೆ, ಜು. 22ರಂದು ಕರ್ನಾಟಕ ಶಿಕ್ಷಣ ಸಂಸ್ಥೆ, ಜು. 23ರಂದು ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ಜು. 24ರಂದು ಅಂಜುಮನ್ ಇಸ್ಲಾಂ ಶಿಕ್ಷಣ ಸಂಸ್ಥೆ, ಜು. 25ರಂದು ಮರಾಠಾ ವಿದ್ಯಾಪ್ರಸಾರಕ ಮಂಡಳಿ ಶಿಕ್ಷಣ ಸಂಸ್ಥೆ, ಜು. 26ರಂದು ಡಾ. ಬಿ.ಆರ್. ಅಂಬೇಡ್ಕರ್‌ ಶಿಕ್ಷಣ ಸಂಸ್ಥೆ ಮತ್ತು ಚಾರಿಟೇಬಲ್ ಟ್ರಸ್ಟ್‌, ಜು. 27ರಂದು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠ ಶಾಲೆಗಳ ಪರಿಚಯ ಮಾಡಿ ಕೊಡಲಾಗುವುದು. ಅದಕ್ಕಾಗಿ ವಿಷಯ ತಜ್ಞರಿಂದ ವಿಷಯ ಮಂಡನೆ ಆಗಲಿದೆ ಎಂದರು.

9 ದಿನಗಳಲ್ಲಿ ಆಯ್ದ ದಿನಗಳಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ಜು. 23ರಂದು ಸಂಜೆ ರಂಗ ಸಾಮ್ರಾಟ್ ವತಿಯಿಂದ ಮುತ್ತಿನ ರಾಶಿ ನಾಟಕ, ಜು. 24ರಂದು ಶಶಿ ಥಿಯೇಟರ್ ವತಿಯಿಂದ ಉರಿಯ ಉಯ್ಯಾಲೆ, ಜು. 25ರಂದು ಮಂಟೇಸ್ವಾಮಿ ಕಾವ್ಯ ಪ್ರಯೋಗ, ಬಾಬ್ ಮಾರ್ಲಿ ಪ್ರಾಮ್ ಕೋಡಿಹಳ್ಳಿ ನಾಟಕಗಳು ಪ್ರದರ್ಶನ ಕಾಣಲಿವೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಶಿವಾನಂದ ಭಾವಿಕಟ್ಟಿ, ಸತೀಶ ತುರಮರಿ, ವೀರಣ್ಣ ಒಡ್ಡಿನ್, ಡಾ. ಧನವಂತ ಹಾಜವಗೋಳ, ವಿಶ್ವೇಶ್ವರಿ ಹಿರೇಮಠ, ಗುರು ಹಿರೇಮಠ ಇದ್ದರು. ಸಂಘಕ್ಕೆ ಜಾಗ ಯಾವಾಗ?

ಪಾಪು ಅವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ ಮುಖ್ಯಮಂತ್ರಿಗಳು ಸಂಘಕ್ಕೆ ಐದು ಎಕರೆ ಭೂಮಿ ನೀಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ಐದು ಎಕರೆ ಜಾಗ ಗುರುತಿಸಿ, ಜಿಲ್ಲಾಡಳಿತದಿಂದಲೂ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈವರೆಗೂ ಮಂಜೂರಾತಿ ದೊರೆತಿಲ್ಲ. ಈಗ ಮತ್ತೆ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದು, ಹೀಗಾಗಿ ಈ ಬಗ್ಗೆ ಲಕ್ಷ್ಯವಹಿಸಿ ಕವಿಸಂಗೆ ಜಾಗ ಮಂಜೂರು ಮಾಡಬೇಕು ಎಂದು ಶಂಕರ ಹಲಗತ್ತಿ ಹೇಳಿದರು.

Share this article