ಇಂದು ಶ್ರೀಕನಕ ದುರ್ಗಮ್ಮದೇವಿ ಸಿಡಿಬಂಡಿ ರಥೋತ್ಸವ

KannadaprabhaNewsNetwork |  
Published : Mar 11, 2025, 12:47 AM IST
ಸಿಡಿಬಂಡಿ ರಥೋತ್ಸವ ಹಿನ್ನಲೆಯಲ್ಲಿ ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ಸಿದ್ಧತೆ ಕಾರ್ಯ ನಡೆದಿರುವುದು.  | Kannada Prabha

ಸಾರಾಂಶ

ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮದೇವಿ ಸಿಡಿಬಂಡಿ ರಥೋತ್ಸವ ಮಾ.11ರಂದು ಸಂಜೆ 5 ಗಂಟೆಗೆ ಜರುಗಲಿದ್ದು, ದೇವಸ್ಥಾನದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮದೇವಿ ಸಿಡಿಬಂಡಿ ರಥೋತ್ಸವ ಮಾ.11ರಂದು ಸಂಜೆ 5 ಗಂಟೆಗೆ ಜರುಗಲಿದ್ದು, ದೇವಸ್ಥಾನದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕರ್ನಾಟಕ ಹಾಗೂ ಆಂಧ್ರಪ್ರದೇಶದ ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸುತ್ತಿರುವುದರಿಂದ ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ಧಾರ್ಮಿಕ ದತ್ತಿ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ದೇವಸ್ಥಾನ ಆವರಣವನ್ನು ವಿವಿಧ ಹೂವು-ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಭಕ್ತರು ಸಾಲಾಗಿ ತೆರಳಿ ದೇವರ ದರ್ಶನ ಪಡೆಯಲು ಬ್ಯಾರಿಕೇಡ್‌ ಅಳವಡಿಸಲಾಗಿದೆ. ದೇವಸ್ಥಾನದ ಗೋಪುರಗಳಿಗೆ ವಿದ್ಯುತ್ ದೀಪಗಳ ಅಲಂಕಾರ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಗ್ರತೆ ವಹಿಸಿದ್ದು, ದೇವಸ್ಥಾನದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಸಿಡಿಬಂಡಿ ಅದ್ಧೂರಿಯನ್ನಾಗಿಸಲು ಮೈಸೂರು ದಸರಾ ಮಾದರಿಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ನಗರದ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸೇವಾ ಕಾರ್ಯಕರ್ತರು ದಾರಿಯುದ್ದಕ್ಕೂ ಮಜ್ಜಿಗೆ, ಪಾನಕ ವಿತರಣೆ ಮಾಡಲಿದ್ದಾರೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

ರಥೋತ್ಸವ ಹಿನ್ನೆಲೆ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದು, ಎಲ್ಲ ಕಡೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಶ್ರದ್ಧಾಭಕ್ತಿಯಿಂದ ಜರುಗುವ ಸಿಡಿಬಂಡಿ ಉತ್ಸವ ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿರುವುದಾಗಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.

ನಗರದ ಕೌಲ್‌ಬಜಾರ್ ಪ್ರದೇಶದಿಂದ ಗಾಣಿಗ ಸಮುದಾಯದವರು ಸಿಡಿಬಂಡಿಯನ್ನು ತಯಾರಿಸಿ, ಪೂಜೆ ಸಲ್ಲಿಸಿದ ಬಳಿಕ ಎತ್ತುಗಳ ಮೂಲಕ ಮೆರವಣಿಗೆಯಲ್ಲಿ ಶ್ರೀಕನಕ ದುರ್ಗಮ್ಮ ದೇವಸ್ಥಾನಕ್ಕೆ ತರಲಿದ್ದು, ಮಂಗಳವಾರ ಸಂಜೆ ಶ್ರೀಕನಕ ದುರ್ಗಮ್ಮಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಿಡಿಬಂಡಿ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ