ಇಂದು ಗುರು-ಗಾಂಧಿ ಸಂವಾದ ಶತಮಾನೋತ್ಸವ, ಮುಖ್ಯಮಂತ್ರಿ ಭಾಗಿ

KannadaprabhaNewsNetwork |  
Published : Dec 03, 2025, 03:00 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಬಿ.ಕೆ. ಹರಿಪ್ರಸಾದ್‌. | Kannada Prabha

ಸಾರಾಂಶ

ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಮಹಾತ್ಮ ಗಾಂಧೀಜಿ ನಡುವಿನ ಐತಿಹಾಸಿಕ ಸಂವಾದದ ಶತಮಾನೋತ್ಸವ, ಶ್ರೀ ಗುರುಗಳ ಮಹಾಸಮಾಧಿ ಶತಾಬ್ಧಿ, ಸರ್ವ ಮತ ಸಮ್ಮೇಳನ ಶತಮಾನೋತ್ಸವದ ಬೃಹತ್‌ ಕಾರ್ಯಕ್ರಮ ಕೊಣಾಜೆಯ ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಡಿ.3ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಮಹಾತ್ಮ ಗಾಂಧೀಜಿ ನಡುವಿನ ಐತಿಹಾಸಿಕ ಸಂವಾದದ ಶತಮಾನೋತ್ಸವ, ಶ್ರೀ ಗುರುಗಳ ಮಹಾಸಮಾಧಿ ಶತಾಬ್ಧಿ, ಸರ್ವ ಮತ ಸಮ್ಮೇಳನ ಶತಮಾನೋತ್ಸವದ ಬೃಹತ್‌ ಕಾರ್ಯಕ್ರಮ ಕೊಣಾಜೆಯ ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಡಿ.3ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ. ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಸಹಸ್ರಾರು ಮಂದಿ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಕೇಂದ್ರ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಕಲ ಶಿವಗಿರಿ ಮಠ, ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಉದ್ಘಾಟನೆಗೆ ಸಿಎಂ:

ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ. ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡುತ್ತಾರೆ. ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕೆ.ಸಿ‌. ವೇಣುಗೋಪಾಲ್ ಪ್ರಧಾನ ಸಂದೇಶ ಭಾಷಣ ಮಾಡಲಿದ್ದು, ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಶಿವಗಿರಿ ಮಠದ ಶ್ರೀ ಶುಭಾಂಗಾನಂದ ಸ್ವಾಮೀಜಿ ಪರಿನಿರ್ವಾಣ ಸಂದೇಶ ನೀಡಲಿದ್ದಾರೆ. ಸ್ವಾಮೀಜಿಗಳು, ಸಂಸದರು, ಸಚಿವರು, ರಾಜಕೀಯ, ಸಾಮಾಜಿಕ, ಧಾರ್ಮಿಕ ‌ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ‌ಸರ್ವಮತ ಸಮ್ಮೇಳನ: ಮಧ್ಯಾಹ್ನ ಬಳಿಕ ನಡೆಯಲಿರುವ ಸರ್ವ ಮತ ಸಮ್ಮೇಳನವನ್ನು ಸಾಂಸ್ಕೃತಿಕ ಚಿಂತಕ ಗಣೇಶ್‌ ದೇವಿ ಉದ್ಘಾಟಿಸಲಿದ್ದಾರೆ. ಶಿವಗಿರಿ ಮಠದ ಸ್ವಾಮಿ ರೀತಾಭರಾನಂದರು ಸರ್ವಮತ ಸಂದೇಶ ಭಾಷಣ ಮಾಡುತ್ತಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್‌, ಶಿಕ್ಷಣ ತಜ್ಞ ಸಯ್ಯದ್‌ ಪಾಣಕ್ಕಾಡ್‌ ಮುನವರ್‌ ಅಲಿ ಶಿಹಾಬ್‌ ತಂಙಳ್‌, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಅ.ವಂ. ಡಾ.ಪೀಟರ್‌ ಪೌಲ್‌ ಸಲ್ಡಾನ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಶಿರಸಿಯ ಬ್ರಹ್ಮಕುಮಾರಿ ವೀಣಾ ಬೆಹನ್‌ಜಿ, ಸಿಎಂಎಫ್‌ ಬೆಳ್ತಂಗಡಿ ಧರ್ಮಪ್ರಾಂತ್ಯ ಬಿಷಪ್‌ ಮಾರ್‌ ಜೇಮ್ಸ್‌ ಪಟ್ಟೆರಿಲ್‌, ಹನೂರು ಬುದ್ಧ ವಿಹಾರದ ಭಿಕ್ಕು ಧಮ್ಮತಿಸ್ಸ ಅಶೋಕ ಆರಾಮ ಭಾಗವಹಿಸಲಿದ್ದಾರೆ. ಬಿ.ಕೆ. ಹರಿಪ್ರಸಾದ್‌ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರ ನೀಡಿದರು.

ಮುಖಂಡರಾದ ಪಿ.ವಿ. ಮೋಹನ್‌, ನವೀನ್‌ಚಂದ್ರ ಡಿ. ಸುವರ್ಣ, ಮಂಜುನಾಥ ಪೂಜಾರಿ, ಪದ್ಮರಾಜ್‌ ಆರ್‌., ಸುಮಲತಾ ಎನ್‌. ಸುವರ್ಣ, ಜಯರಾಜ್‌ ಸೋಮಸುಂದರ್‌, ಸತ್ಯಜಿತ್‌ ಸುರತ್ಕಲ್‌ ಮತ್ತಿತರರಿದ್ದರು.20 ಸಾವಿರಕ್ಕೂ ಅಧಿಕ ಜನರ ನಿರೀಕ್ಷೆ

ಈ ಬೃಹತ್‌ ಕಾರ್ಯಕ್ರಮಕ್ಕೆ 20 ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ವಿಶ್ವಮಂಗಳ ಶಾಲೆ ಮೈದಾನ, ವಿವಿ ಮೈದಾನ, ಪಜೀರ್ ಗ್ರಾ.ಪಂ. ಮೈದಾನ ಸಹಿತ ವಿವಿಧೆಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಿವಿಧ ಇಲಾಖೆಗಳ ಸ್ಟಾಲ್‌ಗಳು ಇರಲಿವೆ. 400ಕ್ಕೂ ಅಧಿಕ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 600‌ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. 25 ಸಾವಿರ ಜನರಿಗೆ ಚಹಾ, ತಿಂಡಿ, ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ.

ರಾಜಕೀಯ ರಹಿತ ಕಾರ್ಯಕ್ರಮ: ಬಿಕೆಈ ಶತಮಾನೋತ್ಸವ ಆಚರಣೆಯು ಮಾನವ ಸಹೋದರತೆ, ಧಾರ್ಮಿಕ ಸಹಿಷ್ಣುತೆ, ಸತ್ಯ- ಅಹಿಂಸೆಯ ಮೌಲ್ಯಗಳನ್ನು ಮತ್ತೆ ನೆನಪಿಸುವ ವೇದಿಕೆಯಾಗಲಿದೆ. ಪ್ರಸ್ತುತ ಕಾಲಘಟ್ಟದಲ್ಲಿ ನಾರಾಯಣ ಗುರುಗಳ ಅನುಯಾಯಿಗಳು ಗುರುಗಳ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಅವರಿಗೂ ಗುರುಗಳ ತತ್ವ ಸಿದ್ಧಾಂತಗಳನ್ನು ಮನವರಿಕೆ ಮಾಡುವ ಪ್ರಯತ್ನ ಈ ಮೂಲಕ ನಡೆಯುತ್ತಿದೆ ಎಂದು ಬಿ.ಕೆ. ಹರಿಪ್ರಸಾದ್‌ ತಿಳಿಸಿದರು. ಕಾರ್ಯಕ್ರಮ ರಾಜಕೀಯ ರಹಿತವಾಗಿ ನಡೆಯುತ್ತಿದ್ದು, ಎಲ್ಲ ರಾಜಕೀಯ ಪಕ್ಷದವರೂ ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ ಅವರು, ಶಿವಗಿರಿ ಮಠದ ಶಾಖಾ ಮಠ ದ.ಕ.ಕ್ಕೆ ಬಂದರೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ