ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿಗಳು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಯಶಸ್ಸಿನ ಜೊತೆಗೆ ಅರ್ಥಪೂರ್ಣ ಬದುಕು ಒಲಿಯಬೇಕೆಂದರೆ ಉತ್ತಮ ಓದುಗನಾಗಬೇಕು. ಓದುವ ಹವ್ಯಾಸ ವಿದ್ಯಾರ್ಥಿ ದಿಸೆಯಿಂದಲೇ ಮೈಗೂಡಿಸಿಕೊಳ್ಳಬೇಕು ಎಂದರು.
ಪ್ರತಿಭೆ ಅನಾವರಣಗೊಳ್ಳಲು ಕಾಲೇಜಿನ ವೇದಿಕೆ ಒಂದು ಸಾಧನವಿದ್ದಂತೆ. ಕಾಲೇಜಿನಲ್ಲಿ ನಿಮ್ಮ ಪ್ರತಿಭೆಗೆ ಪೂರಕ ವಾತಾವರಣ ಲಭಿಸುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿ. ಬದುಕಿನಲ್ಲಿ ಕೇವಲ ಗುರುಗಳಿಂದ ಮಾತ್ರ ಕಲಿಯುವುದಿಲ್ಲ, ಹಿರಿಯರಿಂದ, ಸಹಪಾಠಿಗಳಿಂದ, ಸಮಾಜದಿಂದ ಕಲಿಯುತ್ತೇವೆ. ಹಾಗಾಗಿ ನಿಮ್ಮಲ್ಲಿ ಕಲಿಕೆಯ ಆಸಕ್ತಿ ಎಂದೂ ಬತ್ತದಿರಲಿ ಎಂದು ಸಲಹೆ ನೀಡಿದರು.ದೇಶದಲ್ಲಿಂದು ಸರಿಯಾದ ಶಿಕ್ಷಣ, ಉದ್ಯೋಗ, ಪೌಷ್ಟಿಕ ಆಹಾರ ಪ್ರತಿಯೊಬ್ಬರಿಗೂ ಪೂರೈಕೆ ಆಗಬೇಕು. ಈ ನಿಟ್ಟಿನಲ್ಲಿ ದೇಶ ಆಳುವ ನಾಯಕರು ಗಮನ ಹರಿಸಬೇಕು. ಪರಿಸರ ದಿನಾಚರಣೆಯಂದು ಕೇವಲ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ವನ ಮಹೋತ್ಸವ ಆಚರಣೆ ಆಗಬೇಕು. ಆದರೆ, ಇಂದು ಒಣ ಮಹೋತ್ಸವದ್ದೆ ಕಾರುಬಾರು ಆಗುತ್ತಿದೆ. ಪರಿಸರ ಹಾಳು ಮಾಡುವ ಕಾಯಕದಲ್ಲಿ ತೊಡಗಿಕೊಂಡಿರುವ ನಾವು ಅದರಲ್ಲಿ ಕಿಂಚಿತ್ತಾದರೂ ಪರಿಸರ ಉಳಿಸುವ ಕಾಳಜಿ ತೋರಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಮಾತನಾಡಿ, ಸಮಾಜದಲ್ಲಿ ಇಂದು ಜನರು ಪ್ರಾಮಾಣಿಕತೆ, ಅಭಿಮಾನ, ಗೌರವ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಭಾಷಣಗಾರರು ಹೆಚ್ಚಾಗಿ ಕೆಲಸಗಾರರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ಕಾಲಘಟ್ಟದಲ್ಲಿ ವಿವಿಧ ಪಾತ್ರ ನಿರ್ವಹಿಸುವ ಬದುಕು ನಮ್ಮದು. ಯುವ ಸಮುದಾಯದಲ್ಲಿ ಬದ್ಧತೆಯ ಒರತೆ ಹೆಚ್ಚಾಗಬೇಕು. ನಿಮ್ಮ ಬದುಕು ನಿಮ್ಮ ಪ್ರಯತ್ನದಲ್ಲಿ ಅಡಗಿದೆ ಎಂದು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಾದ ವಸಂತ್ ಕುಮಾರ್, ರಚನಾ ತಮ್ಮ ಅನಿಸಿಕೆ ಹಂಚಿಕೊಂಡರು. ವಿವಿಧ ಸ್ಪರ್ಧೆಗಳಲ್ಲಿನ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.