ಕಾರವಾರ: ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನಲ್ಲಿ ಮಂಗಳವಾರ ಉತ್ತರ ಕನ್ನಡ ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಭದ್ರತಾ ಕೊಠಡಿಯಲ್ಲಿನ ಮತಯಂತ್ರಗಳಲ್ಲಿ ಕಣದಲ್ಲಿರುವ 13 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಾ. ಅಂಜಲಿ ನಿಂಬಾಳ್ಕರ್, ಬಿಜೆಪಿಯ ಕಾಗೇರಿ ವಿಶ್ವೇಶ್ವರ ಹೆಗಡೆ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದ ಗಣಪತಿ ಹೆಗಡೆ, ಕರ್ನಾಟಕ ರಾಜ್ಯ ಸಮಿತಿಯ ವಿನಾಯಕ ಮಂಗೇಶ ನಾಯ್ಕ್, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಪವಾರ್, ಪಕ್ಷೇತರ ಅಭ್ಯರ್ಥಿಗಳಾದ ಕೃಷ್ಣಾಜಿ ಪಾಟೀಲ್, ಚಿದಾನಂದ ಹನುಮಂತಪ್ಪ ಹರಿಜನ, ನಿರಂಜನ್ ಉದಯಸಿನ್ಹಾ ಸರ್‌ದೇಸಾಯಿ, ನಾಗರಾಜ ಅನಂತ ಶಿರಾಲಿ, ಅರವಿಂದ ಗೌಡ, ಅವಿನಾಶ್ ನಾರಾಯಣ ಪಾಟೀಲ, ಕೃಷ್ಣ ಹನುಮಂತಪ್ಪ ಬಳೆಗಾರ, ರಾಜಶೇಖರ ಶಂಕರ ಹಿಂಡಲಗಿ ಅವರ ಸೋಲು- ಗೆಲುವುನಿರ್ಧಾರವಾಗಲಿದೆ.ಮೇ 7ರಂದು ನಡೆದಿದ್ದ ಚುನಾವಣೆಯಲ್ಲಿ ಶೇ. 76.53ರಷ್ಟು ಮತದಾನವಾಗಿದ್ದು, 6,33,630 ಪುರುಷರು, 6,22,392 ಮಹಿಳೆಯರು ಹಾಗೂ 5 ಮಂದಿ ಇತರರು ಸೇರಿದಂತೆ ಒಟ್ಟು 12,56,027 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು.
ಜಿಲ್ಲೆಯಲ್ಲಿ ಮತ ಎಣಿಕೆ ಕಾರ್ಯಕ್ಕಾಗಿ ಒಟ್ಟು 562 ಅಧಿಕಾರಿ ಸಿಬ್ಬಂದಿ ನೇಮಕ ಮಾಡಲಾಗಿದ್ದು ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ.ಜಿಲ್ಲೆಯಲ್ಲಿ ಮನೆಯಿಂದಲೇ ನಡೆದ ಮತದಾನದಲ್ಲಿ 85 ವರ್ಷ ಮೇಲ್ಪಟ್ಟ 2985 ಮಂದಿ, 1924 ಅಂಗವಿಕಲರು, 253 ಅಗತ್ಯ ಸೇವೆಯ ನೌಕರರು ಹಾಗೂ 1164 ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸೇರಿದಂತೆ ಒಟ್ಟು 6236 ಮತದಾನವಾಗಿದೆ.
ಮಧ್ಯಾಹ್ನ 12 ಗಂಟೆಯ ವೇಳೆಗೆ ಸಂಪೂರ್ಣ ಫಲಿತಾಂಶ ಘೋಷಣೆಯಾಗುವ ಸಾಧ್ಯತೆಯಿದ್ದು, ಖಾನಾಪುರ ವಿಧಾನಸಭಾ ಕ್ಷೆತ್ರದಲ್ಲಿ 23 ಸುತ್ತು, ಕಿತ್ತೂರು 17, ಹಳಿಯಾಳ 16, ಕಾರವಾರ 19, ಕುಮಟಾ 16, ಭಟ್ಕಳ 18, ಶಿರಸಿ 19, ಯಲ್ಲಾಪುರದಲ್ಲಿ 17 ಸುತ್ತಿನ ಮತ ಎಣಿಕೆ ನಡೆಯಲಿದೆ .ಮತ ಎಣಿಕೆ ಕಾರ್ಯಕ್ಕಾಗಿ 4 ಡಿವೈಎಸ್ಪಿ, 15 ಸಿಪಿಐಗಳು, 40 ಪಿಎಸ್‌ಐ, 54 ಎಎಸ್ಐ, 104 ಹೆಡ್ ಕಾನ್ಸ್‌ಟೇಬಲ್, 170 ಪೊಲೀಸ್ ಕಾನ್ಸ್‌ಟೇಬಲ್, 38 ಮಹಿಳಾ ಕಾನ್‌ಸ್ಟೇಬಲ್, 5 ಜಿಲ್ಲಾ ಸಶಸ್ತ್ರ ಮೀಸಲು ಪಡೆ, 2 ಕೆಎಸ್ಆರ್‌ಪಿ ಮತ್ತು ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ 1 ತುಕಡಿಯನ್ನು ನಿಯೋಜಿಸಲಾಗಿದೆ.