ಇಂದು, ನಾಳೆ ಕಲಾ ಧಾರಾ-2

KannadaprabhaNewsNetwork |  
Published : Nov 14, 2026, 03:00 AM IST
ಜಮಖಂಡಿ ನಗರದಲ್ಲಿ ರೈತರು ನಡೆಸುತ್ತಿದ್ದ 18 ದಿನಗಳ ಹೋರಾಟ ಅಂತ್ಯವಾಗಿದೆ. ಎಸಿ ಶ್ವೇತಾ ಬೀಡಿಕರ. ಡಿಎಸ್‌ಪಿ ಸೈಯದ್‌ ರೋಷನ್‌ ಜಮೀರ, ರೈತ ಮುಖಂಡರು ಇದ್ದರು.  | Kannada Prabha

ಸಾರಾಂಶ

ಐತಿಹಾಸಿಕ ಇಬ್ರಾಹಿಂ ರೋಜಾ ಸ್ಮಾರಕದ 400ನೇ ವರ್ಷಾಚರಣೆಯ ಅಂಗವಾಗಿ ನಗರದ ಇಬ್ರಾಹಿಂ ರೋಜಾ ಆವರಣದಲ್ಲಿ ನ.14 ಮತ್ತು 15ರಂದು ಎರಡು ದಿನಗಳ ಕಲಾ ಧಾರಾ-2 ಸಂಗೀತ ಮತ್ತು ನೃತ್ಯೋತ್ಸವ ಆಯೋಜಿಸಲಾಗಿದೆ. ದೇಶದ ಹೆಸರಾಂತ ಕಲಾವಿದರು ವಿವಿಧ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಪ್ರಕಾರಗಳನ್ನು ಪ್ರಸ್ತುತಪಡಿಸಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಐತಿಹಾಸಿಕ ಇಬ್ರಾಹಿಂ ರೋಜಾ ಸ್ಮಾರಕದ 400ನೇ ವರ್ಷಾಚರಣೆಯ ಅಂಗವಾಗಿ ನಗರದ ಇಬ್ರಾಹಿಂ ರೋಜಾ ಆವರಣದಲ್ಲಿ ನ.14 ಮತ್ತು 15ರಂದು ಎರಡು ದಿನಗಳ ಕಲಾ ಧಾರಾ-2 ಸಂಗೀತ ಮತ್ತು ನೃತ್ಯೋತ್ಸವ ಆಯೋಜಿಸಲಾಗಿದೆ. ದೇಶದ ಹೆಸರಾಂತ ಕಲಾವಿದರು ವಿವಿಧ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಪ್ರಕಾರಗಳನ್ನು ಪ್ರಸ್ತುತಪಡಿಸಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ದಖನ್ ವಾಸ್ತುಶಿಲ್ಪದ ಅಪರೂಪದ ಕಲಾಕೃತಿಯಾಗಿರುವ ಇಬ್ರಾಹಿಂ ರೋಜಾ ಸುಂದರ ಗುಮ್ಮಟಗಳು, ಎತ್ತರದ ಮಿನಾರ್‌ಗಳು, ಸೂಕ್ಷ್ಮ ಕೆತ್ತನೆಯ ಕಮಾನುಗಳು ಹಾಗೂ ಕಲ್ಲಿನ ಮೇಲಿನ ನಾಜೂಕಾದ ಕಲಾಕೃತಿಗಳಿಂದ ಪ್ರಸಿದ್ಧವಾಗಿದೆ. ತಾಜ್‌ಮಹಲ್‌ನ ವಾಸ್ತುಶಿಲ್ಪಕ್ಕೆ ಸ್ಫೂರ್ತಿಯಾಗಿರಬಹುದೆಂದು ಪರಿಗಣಿಸಲ್ಪಟ್ಟಿರುವ ಈ ಸ್ಮಾರಕದ ಸೊಬಗಿನ ಹಿನ್ನೆಲೆಯಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಐತಿಹಾಸಿಕ ಪರಂಪರೆ ಹಾಗೂ ಭಾರತೀಯ ಕಲಾ ಸಂಪ್ರದಾಯವನ್ನು ಒಟ್ಟಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಈ ವರ್ಷದ ಆರಂಭದಲ್ಲಿ ವಿಜಯಪುರದ ಗೋಳಗುಮ್ಮಟದಲ್ಲಿ ನಡೆದ ಕಲಾ ಧಾರಾ ಮೊದಲ ಆವೃತ್ತಿಗೆ ಸುಮಾರು 4,000 ಕಲಾಭಿಮಾನಿಗಳು ಭಾಗವಹಿಸಿದ್ದರು. ಸಾರ್ವಜನಿಕರಿಂದ ದೊರೆತ ಉತ್ತಮ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಎರಡನೇ ಆವೃತ್ತಿಯನ್ನು ಇಬ್ರಾಹಿಂ ರೋಜಾ ಆವರಣದಲ್ಲಿ ಆಯೋಜಿಸಲಾಗಿದೆ. ನ.14 ರಂದು ಸಂಜೆ 5 ಗಂಟೆಗೆ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಪ್ರಕಾಶ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪದ್ಮಶ್ರೀ ಪುರಸ್ಕೃತರು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಉತ್ತರ ವಲಯದ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ.ಮುಹಮ್ಮದ್ ಉಪಸ್ಥಿತರಿರಲಿದ್ದಾರೆ.ಅಂದು ಸಂಜೆ 6 ಗಂಟೆಗೆ ಲಯ ರಾಗ ಸಮರ್ಪಣಂ ಶೀರ್ಷಿಕೆಯಡಿ ಕರ್ನಾಟಕ ಶಾಸ್ತ್ರೀಯ ವಾದ್ಯಸಂಗೀತ ಕಾರ್ಯಕ್ರಮ ನಡೆಯಲಿದೆ. ವಿದುಷಿ ಸುಕನ್ಯಾ ರಾಮಗೋಪಾಲ್ ಘಟ ಮತ್ತು ಕೊನ್ನಕೋಲ್ ಪ್ರಸ್ತುತಪಡಿಸಲಿದ್ದು, ರಾತ್ರಿ 7.30ಕ್ಕೆ ಡಾ. ಸಂಜಯ್ ಶಾಂತರಾಮ್ ಮತ್ತು ತಂಡದಿಂದ ಶಿವನ ವಿಶ್ವರೂಪದ ತಾಂಡವವನ್ನು ಬಿಂಬಿಸುವ ಶಿವತಾಂಡವ ಕೂಚಿಪುಡಿ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ನ.15ರಂದು ಬೆಳಗ್ಗೆ 7 ಗಂಟೆಗೆ ಉದಯರಾಗ ಕಾರ್ಯಕ್ರಮದಲ್ಲಿ ವಿದುಷಿ ಶಶಿಕಲಾ ದಾನಿ ಹಾಗೂ ಪಂ.ಡಾ.ಸುಜ್ಞಾನ ದಾನಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜಲತರಂಗ್ ಜುಗಲ್‌ಬಂದಿ ನಡೆಯಲಿದೆ. ಪಂ.ಅರುಣ ದಾನಿ ತಬಲಾ, ಪಂ.ಮಲೆಮಲ್ಲೇಶ ಹುಗಾರ ದೇಸಾಯಿ ಕಲ್ಲೂರು ಮಂಜಿರಾ ಹಾಗೂ ವಿದುಷಿ ವಂದನಾ ರಾಣಿ ತಾನ್‌ಪುರದಲ್ಲಿ ಸಹಕರಿಸಲಿದ್ದಾರೆ. ಬೆಳಗ್ಗೆ 8 ಗಂಟೆಗೆ ವಿಜಯಪುರದ ಕಲಾವಿದ ಪಂ.ಕಾಶಿನಾಥ ಭೋಸಲೆ ಮತ್ತು ತಂಡದಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ. ಪಂ.ಬಸವಂತರಾಯ್ ಹೂಗಾರ್ ಹಾಗೂ ಪಂ.ಮಂತನ್ ಜೋಶಿ ತಬಲಾ, ವಿದುಷಿ ಚಂದನಾ ಸಿ.ಎಂ. ಹಾರ್ಮೋನಿಯಂ, ವಿದುಷಿ ಶ್ರೀಪ್ರದ ದಶವಂತ್ ಮತ್ತು ವಿದುಷಿ ಸುನಯನ ದೇಶಪಾಂಡೆ ತಾನ್‌ಪುರ ಹಾಗೂ ಪಂ.ವಿಶಾಲ್ ಕಟ್ಟಿ ತಾಳದಲ್ಲಿ ಸಹಕರಿಸಲಿದ್ದಾರೆ. ಅಂದು ಸಂಜೆ 6 ಗಂಟೆಗೆ ವಿದುಷಿ ಅರ್ಚನಾ ಮತ್ತು ವಿದುಷಿ ಸಮನ್ವಿ ಅವರಿಂದ ಸಂತವಾಣಿ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿದುಷಿ ಶ್ರುತಿ ಸಿ.ವಿ.ಪಿಟೀಲು, ವಿದ್ವಾನ್ ಗೌರವ್ ಗಡಿಯಾರ್‌ ಹಾರ್ಮೋನಿಯಂ, ವಿದುಷಿ ಆದಮ್ಯ ರಾಮಾನಂದ್ ಮೃದಂಗ ಹಾಗೂ ಪಂ. ಆದರ್ಶ್ ಶೆಣೈ ಕೆ.ತಬಲಾದಲ್ಲಿ ಸಹಕರಿಸಲಿದ್ದಾರೆ. ರಾತ್ರಿ 7.30ಕ್ಕೆ ಗುರು ಸರಿತಾ ಮಿಶ್ರಾ ಮತ್ತು ಆದ್ಯಾಶಾ ಫೌಂಡೇಶನ್‌ನ ಕಲಾವಿದರಿಂದ ಒಡಿಸ್ಸಿ ನೃತ್ಯ ಪ್ರದರ್ಶನಗೊಳ್ಳಲಿದೆ.ಎರಡು ದಿನಗಳ ಉತ್ಸವದಲ್ಲಿ ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕೂಚಿಪುಡಿ, ಒಡಿಸ್ಸಿ ನೃತ್ಯ ಹಾಗೂ ಭಕ್ತಿ ಸಂಗೀತದ ವೈವಿಧ್ಯಮಯ ಪ್ರಸ್ತುತಿಗಳು ನಡೆಯಲಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ